ಭಯೋತ್ಪಾದನೆ, ಸರ್ವಾಧಿಕಾರತ್ವಕ್ಕೆ ಗಾಂಧಿ ತತ್ವ ಮಾತ್ರ ಉತ್ತರ: ಡಾ. ಶ್ರೀನಿವಾಸ್
ಹಾಸನ: ಭಯೋತ್ಪಾದನೆ ಹಾಗೂ ಸರ್ವಾಧಿಕಾರತ್ವದ ಕಪಿಮುಷ್ಟಿಗೆ ಸಿಲುಕಿ ನಿರಂತರ ಹಿಂಸೆಯಿಂದ ತತ್ತರಿಸುತ್ತಿರುವ ಇಂದಿನ ವಿಶ್ವಕ್ಕೆ ಗಾಂಧಿ ಮಾತ್ರ ಉತ್ತರವಾಗಬಲ್ಲರು. ಜಗತ್ತು ಶಾಂತಿ ಬಯಸುವುದಾದರೆ ಗಾಂಧಿ ನಮ್ಮೊಳಗಿನ ಪ್ರಜ್ಞೆಯಾಗಬೇಕು, ನಮ್ಮೊಳಗಿನ ಎಚ್ಚರವಾಗಬೇಕು ಎಂದು ಕನ್ನಡ ಪ್ರಾಧ್ಯಾಪಕ ಡಾ.ಡಿ.ಶ್ರೀನಿವಾಸ ಹೇಳಿದರು.
ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧಿ ನಮನ ಕಾರ್ಯಕ್ರಮದ ಅಂಗವಾಗಿ ನಮ್ಮೊಳಗಿನ ಗಾಂಧಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಗಾಂಧಿ ಸಿದ್ಧ ಮಹಾತ್ಮನಲ್ಲ. ಅಂತರಾತ್ಮವನ್ನು ಗುರುವನ್ನಾಗಿ ಸ್ವೀಕರಿಸಿದ್ದ ಸಾಮಾನ್ಯ ಮನುಷ್ಯ. ಗುರಿ ಸಾಧಿಸುವಲ್ಲಿ ಬದ್ಧತೆ, ದೌರ್ಬಲ್ಯ ಮೀರುವ ಪ್ರಾಮಾಣಿಕತೆ, ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ದೃಢತೆ, ಸಹ ಮಾನವನ ಬಗೆಗಿನ ಅಪಾರ ಕಾಳಜಿ, ಶಾಂತಿಯ ಬಗೆಗಿನ ಅಸೀಮ ಪ್ರೀತಿ, ಹಿಡಿದಿದ್ದನ್ನು ಸಾಧಿಸುವ ಪ್ರಚಂಡ ಹಠಮಾರಿತನದಿಂದ ಗಾಂಧಿ ಮಹಾತ್ಮರಾದರು ಎಂದು ಹೇಳಿದರು.
ಇಂದು ಗಾಂಧಿ ಅವರನ್ನು ನಾವು ಕೇವಲ ಆಚರಣೆಗೆ ಸೀಮಿತಗೊಳಿಸಿದ್ದೇವೆ. ಅವರ ಮೌಲ್ಯಗಳನ್ನೂ ಅವರಂತೆಯೇ ಗೋಡೆಗೆ ನೇತು ಹಾಕಿಬಿಟ್ಟಿದ್ದೇವೆ. ಅವರಿಗೆ ನಾವು ನಿಜವಾದ ಗೌರವ ಸಲ್ಲಿಸುವುದಾದರೆ ನಮ್ಮೊಳಗೆ ಅವರನ್ನು ತುಂಬಿಕೊಳ್ಳಬೇಕು. ನಮ್ಮ ನಮ್ಮ ಅಂತರಾತ್ಮದ ಪ್ರೇರಣೆಯಂತೆ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ನಮ್ಮಲ್ಲಿನ ದ್ವೇಷ, ಅಸೂಯೆ, ಕಪಟತನ, ಹಿಂಸೆ, ಯುದ್ಧಪ್ರೀತಿಗಳು ದೂರವಾಗುತ್ತವೆ. ಜಾಗತಿಕ ಶಾಂತಿಯ ಕನಸಿಗೆ ಆಸರೆ ದೊರೆತಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಮಾದೇಗೌಡ ಮಾತನಾಡಿ, ಗಾಂಧೀಜಿ ಕಂಡ ಕನಸಿನ ಭಾರತ ಇಂದು ಛಿದ್ರವಾಗಿದೆ. ಸಮಾನತೆ, ಸರ್ವೋದಯ, ಅಹಿಂಸೆಗಳು ಭಾಷಣದ ಹಾಗೂ ಪುಸ್ತಕದ ಮಾತುಗಳಾಗಿ ಉಳಿದುಕೊಂಡಿವೆ ಎಂದರು.
ಇಂದು ವಿಶ್ವದಾದ್ಯಂತ ನಡೆಯುತ್ತಿರುವ ಶಸ್ತ್ರಾಸ್ತ್ರ ಪೈಪೋಟಿಯಿಂದ ಆಗುತ್ತಿರುವ ಅನಾಹುತಗಳನ್ನು ಕಂಡಾಗ ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆಯ ಬೆಲೆ ನಮಗೆ ಅರಿವಾಗುತ್ತದೆ. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಮ್ಮಲ್ಲಿ ತುಂಬಿಕೊಂಡಾಗ ಮಾತ್ರ ಗಾಂಧಿ ನಮ್ಮವರಾಗುತ್ತಾರೆ ಎಂದು ಹೇಳಿದರು.
ಗ್ರಂಥಪಾಲಕ ಎನ್.ಮಂಜುನಾಥ್ ಮಾತನಾಡಿ, ತನ್ನಿಂದ ಸಾಧ್ಯವಿಲ್ಲದ್ದನ್ನು ಧೈರ್ಯವಾಗಿ ಹೇಳಬಲ್ಲ ಅಪ್ಪಟ ಪ್ರಾಮಾಣಿಕತೆ ಗಾಂಧೀಜಿಯವರದು. ಅದೇ ಅವರ ವ್ಯಕ್ತಿತ್ವದ ಶಕ್ತಿಯಾಗಿತ್ತು. ಇಂದು ನಾವು ಯಾವುದನ್ನು ಅವಮಾನ ಎಂದು ಭಾವಿಸುತ್ತೇವೆಯೋ ಅದು ಗಾಂಧೀಜಿಯವರಿಗೆ ಸತ್ಯವಾಗಿ ಗೋಚರಿಸುತ್ತಿತ್ತು. ಮತ್ತೊಬ್ಬರ ಸಂತೋಷಕ್ಕಾಗಿ ತಮ್ಮ ನಿರ್ಧಾರಗಳನ್ನು ಎಂದೂ ಬದಲಿಸಿಕೊಳ್ಳದ ಗಾಂಧೀಜಿಯವರ ಬದುಕು ನಮಗೆಲ್ಲ ಆದರ್ಶವಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ ಮಾತನಾಡಿ, ಗಾಂಧೀಜಿ ತಮ್ಮ ಉದ್ದೇಶ ಹಾಗೂ ಗುರಿಗಳೊಡನೆ ಹಂತ ಹಂತವಾಗಿ ಬೆಳೆದವರು. ಬರಿಗೈಯಿಂದ ಶಸ್ತ್ರಗಳನ್ನು ಎದುರಿಸಿದವರು. ಅಹಿಂಸೆಯಿಂದ ಹಿಂಸೆಯನ್ನು ದುರ್ಬಲಗೊಳಿಸಿದವರು. ಸೋಲುವುದರಲ್ಲಿ ಗೆಲುವನ್ನು ಕಂಡವರು. ಸಾಮಾನ್ಯತ್ವದಿಂದ ಮಹಾತ್ಮರಾದವರು. ಅವರ ಈ ಶಕ್ತಿಯ ಕಿಂಚತ್ತನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಮನ ಸಲ್ಲಿಸುವ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಉಪನ್ಯಾಸಕ ಪವನ್ಕುಮಾರ್, ಯೋಗೇಶ್, ರಘು, ಗಾಂಧೀಜಿ ಮಹತ್ವ ಕುರಿತು ಮಾತನಾಡಿದರು. ವಿದ್ಯಾರ್ಥಿ ನವೀನ್ ಪ್ರಾರ್ಥಿಸಿದರು. ಮಾದೇಗೌಡ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ್ ವಂದಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

