ಮೋದಿ ಪ್ರಧಾನಿಯಾಗಲಿ: ಹಾಸನಾಂಬೆ ಎದುರುಮುತಾಲಿಕ್ ಪ್ರಾರ್ಥನೆ
ಹಾಸನ: ದೇಶದ ಸುಖ, ನೆಮ್ಮದಿ ಹಾಗೂ ಸುರಕ್ಷತೆಗಾಗಿ ಮುಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಲೆಂದು ಹಾಸನಾಂಬೆ ದೇವಿಯಲ್ಲಿ ಪಾರ್ಥನೆ ಮಾಡಿರುವುದಾಗಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ತಿಳಿಸಿದರು. ಶನಿವಾರ ನಗರದ ಅಧಿದೇವತೆ ಹಾಸನಾಂಬೆ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ನಂತರ ಏಕೆ ಇಷ್ಟು ದೊಡ್ಡದಾಗಿ ಸೌಜನ್ಯಾ ಪ್ರಕರಣವನ್ನು ಹೊರ ತರುತ್ತಿದ್ದಾರೆ, ಈ ಕಾರಣದಿಂದ ಅದೊಂದು ಸಂಶಯಾತ್ಮಕವಾದ ಪ್ರಶ್ನೆಯಾಗಿದೆ. ಸೌಜನ್ಯಾಳಿಗೆ ನ್ಯಾಯ ಸಿಗಲೆ ಬೇಕು ಅದರ ಬಗ್ಗೆ ಎರಡನೇ ಮಾತಿಲ್ಲ ಎಂದು ಪ್ರತಿಪಾದಿಸಿದರು. ಸೌಜನ್ಯಾ ಕೊಲೆಗೆ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಜೋಡಿಸುವಂತದ್ದು ಸರಿಯಲ್ಲ. ಸಂಬಂಧ ಜೋಡಿಸಿ ಅದರ ಪಾವಿತ್ರ್ಯತೆ ಹಾಳು ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಇಂದು ಲಕ್ಷಾಂತರ ಜನರಿಗೆ ಭಕ್ತಿ ಒಂದೇ ಅಲ್ಲ. ನ್ಯಾಯ ನೀಡುವುದು, ಉದ್ಯೋಗ ಹಾಗೂ ಕೃಷಿಗೆ ಅನುಕೂಲ ಮಾಡಿಕೊಡುವುದು ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಧರ್ಮಸ್ಥಳ ಕ್ಷೇತ್ರ ಪವಿತ್ರವಾಗಿರಲೇ ಬೇಕು. ಅದಕ್ಕೆ ಚ್ಯುತಿ ತರುವುದು ಸರಿಯಲ್ಲ ಎಂದರು. ಪೇಜಾವರ ಶ್ರೀಗಳು ಬರಿ ಕುರುಬರಿಗಲ್ಲ ಸಮಾಜದಲ್ಲಿ ಯಾರು ತುಳಿತಕ್ಕೆ ಒಳಗಾಗಿದ್ದಾರೆ, ಅಸ್ಪೃಶ್ಯರು ಇದ್ದಾರೆ. ಅವರೆಲ್ಲರಿಗೂ ದೀಕ್ಷೆ ಕೊಡಬೇಕು ಎಂದು ಅವರು ಹಿಂದೆಯೇ ಹೇಳಿದ್ದಾರೆ ಯಾರೇ ನಮ್ಮ ಹತ್ತಿರ ಬಂದರೂ ದೀಕ್ಷೆಯನ್ನು ನೀಡಲು ಸಿದ್ಧ ಎಂದು ಹೇಳಿರುವುದು ಸ್ವಾಗತಾರ್ಹವಾದುದು ಎಂದು ತಿಳಿಸಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್, ರಂಗನಾಥ್ ಇತರರು ಇದ್ದರು.
ತರಬೇತಿ ಕಾರ್ಯಾಗಾರ
ಜಾವಗಲ್: ಪಟ್ಟಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗಾಗಿ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪರಿಷ್ಕರಣಾ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಾಗಾರ ಉದ್ದೇಶಿಸಿ ಅರಸೀಕೆರೆ ತಾಲೂಕು ಕಚೇರಿ ಚುನಾವಣಾ ಶಾಖೆಯ ಉಪತಹಶೀಲ್ದಾರ್ ಪೆರುಮಾಳ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಅ.31ಕ್ಕೆ ಮತದಾರರ ಕರಡುಪಟ್ಟಿಯನ್ನು ಪ್ರಚುರ ಪಡಿಸಬೇಕು. ನ.3, ನ.10, ನ.17 ರಂದು ವಿಶೇಷವಾದ ಭಾನುವಾರಗಳೆಂದು ಪರಿಗಣಿಸಿದ್ದು ಆ ದಿನಗಳಲ್ಲೂ ಅರ್ಜಿಗಳನ್ನು ಸ್ವೀಕರಿಸಬೇಕು.
ನ.29 ರವರೆಗೆ ನಮೂನೆ 6,7,8, ಮತ್ತು 8ಎ ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವಂತೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಾವಗಲ್ ನಾಡ ಕಚೇರಿಯ ಉಪ ತಹಶೀಲ್ದಾರ್ ಅಶೋಕ್ ಮಾತನಾಡಿ, ಮತದಾರರಪಟ್ಟಿಗೆ ಹೆಸರು ಸೇರ್ಪಡೆ, ವರ್ಗಾವಣೆ, ಹೆಸರು ಕೈಬಿಡುವುದು, ಮತ್ತು ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿ ಬಿಎಲ್ಓಗಳು ಗ್ರಾಮಲೆಕ್ಕಿಗರ ಸಹಕಾರದೊಂದಿಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ರಾಜಸ್ವ ನಿರೀಕ್ಷಕ ಮುದ್ದುವೀರಯ್ಯ ಮೊದಲಾದವರು ಇದ್ದರು.
ಕಾನೂನು ಸಾಕ್ಷರಥಾ ರಥಕ್ಕೆ ಚಾಲನೆ
ಸಕಲೇಶಪುರ: ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಹಂತವಾಗಿ ತಾಲೂಕಿನಲ್ಲಿ ಮೂರು ದಿನಗಳ ಕಾಲ ಕಾನೂನು ಸಾಕ್ಷರತಾ ರಥ ಸಂಚರಿಸಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್.ಎನ್. ಕೃಷ್ಣಮೂರ್ತಿ ಹೇಳಿದ್ದಾರೆ. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಕಾನೂನು ಮಾಹಿತಿ ಶಿಬಿರ ಹಾಗೂ ಕಾನೂನು ಸಾಕ್ಷರತಾ ರಥದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರಲ್ಲಿ ಕಾನೂನು ಅರಿವಿನ ಕೊರತೆಯ ಕಾರಣ ಹೆಚ್ಚು ಅಪರಾಧಗಳ ಸಂಭವಿಸುತ್ತಿವೆ. ಇದರಿಂದಾಗಿ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ನ್ಯಾಯದಾನ ವಿಳಂಬವಾಗುತ್ತಿದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಲೋಕಪ್ಪ, ಕಿರಿಯ ಶ್ರೇಣಿ ನ್ಯಾಯಧೀಶೆ ಶಿಲ್ಪಾ, ವಕೀಲರ ಸಂಘದ ಉಪಾಧ್ಯಕ್ಷ ಅಕ್ರಂಪಾಷ, ಕಾರ್ಯದರ್ಶಿ ಯಶ್ವಂತಕುಮಾರ್ ಮುಂತಾದವರಿದ್ದರು.
ಜನತಾ ಕೋರ್ಟ್: ಕ್ರಿಮಿನಲ್, ಸಿವಿಲ್ ಪ್ರಕರಣ ಇತ್ಯರ್ಥ
ಆಲೂರು: ಜನತಾ ನ್ಯಾಯಾಲಯದಲ್ಲಿ 150 ಕ್ರಿಮಿನಲ್ ಹಾಗೂ 16 ಸಿವಿಲ್ ಸೇರಿದಂತೆ ಒಟ್ಟು 166 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಎಂ.ಮಹೇಶ್ಬಾಬು ತಿಳಿಸಿದರು.
ನ್ಯಾಯಾಲಯ ಆವರಣದ ಸಂಚಾರಿ ರಥದಲ್ಲಿ ನಡೆದ ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ 21 ಪ್ರಕರಣಗಳನ್ನು ಇತ್ಯರ್ಥಪಡಿಸಿ ಅವರು ಮಾತನಾಡಿದರು.
ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರೆ ಜನರ ಹಣ, ಸಮಯ ಉಳಿಯುತ್ತದೆ ಎಂದರು. ಸಂಧಾನಕಾರರಾಗಿ ವಕೀಲ ಆರ್.ಟಿ. ಧನಂಜಯ ಭಾಗವಹಿಸಿದ್ದರು.
ಕಾನೂನು ಅರಿವು ಪ್ರತಿ ಪ್ರಜೆಯ ಆದ್ಯ ಕರ್ತವ್ಯ: ಕಂಬೇಗೌಡ
ಹೊಳೆನರಸೀಪುರ: ಕಾನೂನು ತಿಳಿದಿಲ್ಲ ಎಂಬ ನೆಪವು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಯಾರಿಗೂ, ಎಂದಿಗೂ ಸಹಕರಿಸದು. ನಮ್ಮ ಸಾಂವಿಧಾನಿಕ ಕಾನೂನನ್ನು ಅರಿಯುವುದು ಪ್ರತಿ ಪ್ರಜೆಯ ಆದ್ಯ ಕರ್ತವ್ಯ ಆಗಬೇಕು ಎಂದು ಇಲ್ಲಿನ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಡಿ. ಕಂಬೇಗೌಡ ಹೇಳಿದರು. ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಪಂಚಾಯ್ತಿ ಆವರಣದಲ್ಲಿ ಇತ್ತೀಚೆಗೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ರೋಟರಿ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ ವಕೀಲೆ ಶಿವಮ್ಮ ಅವರು ದುಡಿಯುವ ಮಹಿಳೆ ಮತ್ತು ವರದಕ್ಷಿಣೆ, ಸಿ.ಜೆ. ಕಾಮಾಕ್ಷಿ ಅವರು ವಿವಾಹ ನೋಂದಣಿ ಕಾಯ್ದೆ, ರಾಜಶೇಖರಯ್ಯ ಅವರು ಬಾಲಾಪರಾಧಗಳ ಕುರಿತಂತೆ ಉಪನ್ಯಾಸ ನೀಡಿದರು.ಕಟ್ಟೇಬೆಳಗುಲಿ ಗ್ರಾಪಂ ಉಪಾಧ್ಯಕ್ಷ ಮಹೇಶಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರೋಟರಿ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ಕಟ್ಟೆಬೆಳಗುಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹೇಶ್ಗೌಡ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಿ.ವಿ. ಸನತ್, ಸರ್ಕಾರಿ ಸಹಾಯಕ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ್, ರೆಡ್ಕ್ರಾಸ್ ಸಂಸ್ಥೆಯ ತಾಲೂಕು ಅಧ್ಯಕ್ಷ ಡಾ. ಕೆ. ಸಿಮರಿಯಪ್ಪ ಇದ್ದರು.
ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ಷೇತ್ರ ಉದ್ಘಾಟನೆ
ಬೇಲೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೊಳಲು ಗ್ರಾಮದಲ್ಲಿ ಕಸಬಾ ಬಿ. ವಲಯ ಕಾರ್ಯಕ್ಷೇತ್ರದ ಉದ್ಘಾಟನೆ ಹಾಗೂ ಗ್ರಾಮ ಸಮಾಲೋಚನಾ ಸಭೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಜಿ.ಟಿ. ಇಂದಿರಾ ಧರ್ಮಪ್ಪ ಮಾತನಾಡಿ, ಮಹಿಳೆಯರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿಯಾದರೆ ಕುಟುಂಬವೂ ಪ್ರಗತಿಯಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳಾ ಸಂಘಗಳ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ತಾವೂ ಸಮಾಜದಲ್ಲಿ ಗುರುತಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಹೈನುಗಾರಿಕೆ, ಗೃಹ ಕೈಗಾರಿಕೆಯ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿದ್ದು ಗ್ರಾಮಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶ ಮಹಿಳೆಯರಿಗೆ ತರಬೇತಿಯ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಹಣ ಸಹಾಯವನ್ನು ಮಾಡಲಾಗುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷ ವೆಂಕಟೇಶ್ ಹಾಗೂ ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 37 ಸೇವಾ ಕೇಂದ್ರವನ್ನು ತೆರೆದಿದ್ದೇವೆ ಎಂದು ಮಾಹಿತಿ ನೀಡಿದರು.ಕೃಷಿಕ ಗೋವಿಂದೇಗೌಡ, ಪಶು ವೈದ್ಯಾಧಿಕಾರಿ ಅಶೋಕ್, ತಾಪಂ ಸದಸ್ಯೆ ಪವಿತ್ರ ಇದ್ದರು. ನಾಗವೇಣಿ ಪ್ರಾರ್ಥಿಸಿದರು. ಅನಸೂಯ ನಿರೂಪಿಸಿದರು. ರೂಪ ಸ್ವಾಗತಿಸಿದರು. ಪುಟ್ಟಮ್ಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

