ಹಾಸನ

ಸಾರಿಗೆ ಸಂಸ್ಥೆಯಲ್ಲಿ ಕನ್ನಡದ ಜ್ಯೋತಿ ಬೆಳಗಿದ ಮಲ್ಲಿಕಾರ್ಜುನ್

Published On :

ಕನ್ನಡ ನಾಡಲ್ಲಿ ಕನ್ನಡ ಉಳಿದು ಬೆಳೆಯಬೇಕಾದರೆ ಮೊದಲು ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕನ್ನಡ  ಬಳಕೆಯಾಗಬೇಕು ಎಂಬ ನಿಲುವು ಹಾಸನದ ಯು.ಜೆ. ಮಲ್ಲಿಕಾರ್ಜುನ್ ಅವರದ್ದು. ತಮ್ಮ ನಿಲುವಿನಂತೆ  ಆ ನಿಟ್ಟಿನಲ್ಲಿ ಕನ್ನಡ ಸೇವೆಗೈಯುತ್ತಾ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕನ್ನಡವನ್ನು ಮೆರೆಸುವ, ಬೆಳಗಿಸುವ ಕಾಯಕದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಕೈಲಾದಷ್ಟು ಮಟ್ಟಿಗೆ ಕಾರ್ಯನಿರತರಾಗಿದ್ದಾರೆ.
ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನ ಜಿಲ್ಲಾ ಶಾಖೆ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ 1.50 ಕೋಟಿ ನಿಧಿ ಸ್ಥಾಪಿಸಿ ನೃಪತುಂಗ ಪ್ರಶಸ್ತಿ ಮತ್ತು ಅರಳು ಮಲ್ಲಿಗೆ ಪ್ರಶಸ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಕನ್ನಡ ಕವಿಗಳ ಕವಿವಾಣಿ ಬರೆಸುವಲ್ಲಿ, ಎಲ್ಲೆಡೆ ಕನ್ನಡ  ಫಲಕಗಳನ್ನು  ಹಾಕಿಸುವುದಲ್ಲದೆ ಚಾಲಕರು ಮತ್ತು ನಿರ್ವಾಹಕರಲ್ಲಿ ಕನ್ನಡಾಭಿಮಾನ ಉಂಟು ಮಾಡಲು ನಿರಂತರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಜ್ಞಾನಪೀಠ ಪ್ರಶಸ್ತಿಯ ಮೊತ್ತ 5 ಲಕ್ಷ ಇತ್ತು. ಆಗ ಸಾರಿಗೆ ಸಂಸ್ಥೆ ನೀಡುವ ನೃಪತುಂಗ ಪ್ರಶಸ್ತಿಯ ಹಣ ಅದಕ್ಕಿಂತ ಕಡಿಮೆ ಇರಬಾರದು ಎಂದು 500001ಕ್ಕೆ ಹೆಚ್ಚಿಸಿದರು. ನಂತರ ಜ್ಞಾನಪೀಠ ಪ್ರಶಸ್ತಿ ಮೊತ್ತವನ್ನು 7 ಲಕ್ಷಕ್ಕೆ ಹೆಚ್ಚಿಸಲಾಯಿತು. ಆಗ ನೃಪತುಂಗ ಪ್ರಶಸ್ತಿಯನ್ನು 700001ಕ್ಕೆ ಹೆಚ್ಚಿಸಲಾಯಿತು. ಹೀಗೆ ಕನ್ನಡ ಭಾಷೆ ಬೆಳೆಯಬೇಕೆಂಬ ಅದಮ್ಯ ಬಯಕೆ ಹೊಂದಿರುವ ಅವರು, ಕನ್ನಡ ಸಾಹಿತ್ಯ ಮತ್ತು ನುಡಿ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಯುವಕರಿಗೆ 25 ಸಾವಿರ ಹಾಗೂ ಫಲಕವುಳ್ಳ ಅರಳು ಮಲ್ಲಿಗೆ ಪ್ರಶಸ್ತಿ ನೀಡುವ ನಿರ್ಧಾರದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಅರಕಲಗೂಡು ತಾಲೂಕು ಉಲಿವಾಲ ಗ್ರಾಮದ ಯು.ಎಂ. ಜುಂಜೇಗೌಡ ಹಾಗೂ ನೀಲಮ್ಮ ದಂಪತಿ ಪುತ್ರರಾದ ಮಲ್ಲಿಕಾರ್ಜುನ್, 1989ರಲ್ಲಿ ಚಿತ್ರನಟ ಅಶೋಕ ಗೌರವಾಧ್ಯಕ್ಷತೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಪ್ರಥಮವಾಗಿ ಆಸ್ತಿತ್ವಕ್ಕೆ ಬಂದ ಕನ್ನಡ ಕ್ರಿಯಾ ಸಮಿತಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಿರಿಯ ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ಅವರೊಡನೆ ರಾಜ್ಯಾದ್ಯಂತ ಪ್ರವಾಸ ಮಾಡಿ ಗಡಿ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಬಾಗಲಕೋಟೆ, ಚಾಮರಾಜನಗರ ಸೇರಿದಂತೆ ಮೊದಲಾದ ಜಿಲ್ಲೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದೈನಂದಿನ ಆಡಳಿತದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಾಗುವಂತೆ ಮಾಡಲು  ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.