ಇದು ಕಿವಿಗಿಡೋದಲ್ಲ.. ರೈತರ ಕಿಸೆ ತುಂಬೋ ಚೆಂಡು ಹೂವು..
ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ಒಂದು ಕಾಲಕ್ಕೆ ಯಾರಿಗಾದರೂ ಮೋಸ ಮಾಡಿದವರಿಗೆ, ಸುಳ್ಳು ಹೇಳುವವರಿಗೆ ಕಿವಿಗೆ ಚೆಂಡು ಹೂ ಮುಡಿಸುತ್ತಿದ್ದಾನೆ ಎಂಬ ಸಾಮಾನ್ಯವಾದ ಮೂದಲಿಕೆಯ ವಸ್ತುವಾಗಿದ್ದ ಚೆಂಡುಹೂವು, ಇಂದು ರೈತರ ಬಾಳನ್ನು ಹಸನಾಗಿಸುವ, ಆ ಮೂಲಕ ಬೆಳೆದ ರೈತನಿಗೆ ಹೆಚ್ಚಿನ ಆದಾಯ ತರುವ ಬೆಳೆಯಾಗಿಯೂ ದಿನೇ ದಿನೇ ಪ್ರಚಲಿತವಾಗುತ್ತಿದೆ. ಚೆಂಡುಹೂ ಸಾಮಾನ್ಯವಾಗಿ ಕೆಲವು ಹಬ್ಬಗಳಲ್ಲಿ ಮಾತ್ರವೇ ಬಳಸ್ಪಡುತ್ತಿದ್ದ ಹೂವಾಗಿತ್ತು. ಆನಂತರದ ದಿನಗಳಲ್ಲಿಯೂ ಪೂಜಾ ಕಾರ್ಯಗಳಲ್ಲಿ ಚೆಂಡು ಹೂವಿನ ಬಳಕೆ ಅಷ್ಟಾಗಿ ಇರಲಿಲ್ಲವೆಂದೇ ಹೇಳಬಹುದಾದ ಮಟ್ಟಿಗೆ ಈ ಹೂವಿನ ಬಳಕೆ ಅಷ್ಟಕಷ್ಟೇ ಎನ್ನುವಂತಿತ್ತು.
ಆದರೆ ಇಂದು ಕಾಲ ಬದಲಾಗಿದ್ದು, ಇಂದಿನ ಯಾವುದೇ ಪೂಜಾ ಕಾರ್ಯಕ್ರಮಗಳಿರಲಿ, ಇಲ್ಲವೇ ಸಭೆ ಸಮಾರಂಭಗಳ ವೇದಿಕೆಯ ಅಲಂಕಾರವಿರಲಿ ಅಲ್ಲಿ ಚೆಂಡುಹೂವು ವಿಶೇಷ ಅಲಂಕಾರದ ಮುಖ್ಯ ಸ್ಥಾನ ಪಡೆದಿದೆ. ಇದರಿಂದಾಗಿ ಚೆಂಡುಹೂವಿಗೆ ಇದ್ದಕ್ಕಿದ್ದಂತೆಯೇ ದಿಢೀರ್ ಬೇಡಿಕೆ ಸೃಷ್ಟಿಯಾಗತೊಡಗಿದೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ ಒಂದು ಕಾಲಕ್ಕೆ ಕಡೆಗಣಿಸಲ್ಪಟ್ಟಿದ್ದ ಚೆಂಡುಹೂವು, ಇಂದು ಬೇಡಿಕೆಯ ವಸ್ತುವಾಗಿ ಪರಿಣಮಿಸಿದ್ದು ಈ ಚೆಂಡುಹೂವನ್ನು ಬಣ್ಣದ ತಯಾರಿಕೆಯಲ್ಲಿ ಬಳಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಜೊತೆಯಲ್ಲಿ ಆದಾಯಕ್ಕಾಗಿ ಚೆಂಡುಹೂವನ್ನೂ ಬೆಳೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ಯಾವುದೇ ಮೂಲೆಗೆ ಹೋದರೂ ಪ್ರತಿ ಗ್ರಾಮಗಳಲ್ಲಿ ರೈತರ ಜಮೀನಿನಲ್ಲಿ ಚೆಂಡುಹೂವು ನಳನಳಿಸುತ್ತಿರುವ ಮನಮೋಹಕ ದೃಶ್ಯ ಕಣ್ಣಿಗೆ ಕಾಣುತ್ತದೆ.
ಇತ್ತೀಚಿನ ಕೆಲ ವರ್ಷಗಳಿಂದಲೂ ತಾಲೂಕಿನ ಬಹುತೇಕ ಗ್ರಾಮಗಳ ರೈತರು ಚೆಂಡುಹೂವಿನ ಕೃಷಿಯೆಡೆಗೆ ಹೊರಳಿದ ಪರಿಣಾಮ ಚೆಂಡುಹೂವು ತಾಲೂಕಿನಲ್ಲಿ ಆದಾಯಕರ ಬೆಳೆಯಾಗಿ ಕಂಡು ಬರತೊಡಗಿದೆ. ಈ ಹಿಂದೆ ತಮಿಳುನಾಡು ಕಡೆಯ ಕೆಲವು ಏಜೆಂಟರು ಇಲ್ಲಿನ ರೈತರಿಗೆ ಚೆಂಡುಹೂವಿನ ಬೀಜಗಳನ್ನು ನೀಡಿ, ಅವುಗಳಿಗೆ ಅಗತ್ಯವಾದ ಗೊಬ್ಬರ ಹಾಗೂ ಪರಿಕರಗಳನ್ನು ನೀಡಿ, ಹೂವು ಕಟಾವಿಗೆ ಬಂದ ನಂತರದಲ್ಲಿ ವಾಪಸ್ಸು ಪಡೆದುಕೊಂಡು ಹೋಗುತ್ತಿದ್ದರಲ್ಲದೇ, ಹೂವನ್ನು ಬೆಳೆದು ಅವುಗಳ ಬಗ್ಗೆ ನಿಗಾವಹಿಸಿದ್ದಕ್ಕಾಗಿ ರೈತರಿಗೆ ಇಂತಿಷ್ಟು ಹಣವನ್ನು ನೀಡುತ್ತಿದ್ದರು.
ನಂತರದ ದಿನಗಳಲ್ಲಿ ಚೆಂಡುಹೂವಿನ ಬೇಡಿಕೆ ಹಾಗೂ ಅದರ ಉಪಯುಕ್ತತೆಯನ್ನು ಮನಗಂಡ ರೈತರು ಕೆಲ ಕಂಪನಿಗಳು ನೀಡುವ ಬೀಜ ಹಾಗೂ ಔಷಧಿಗಳನ್ನು ಪಡೆದು ತಮ್ಮ ಹಣದಲ್ಲಿಯೇ ಗೊಬ್ಬರ ಹಾಕಿ ಬೆಳೆದ ನಂತರದಲ್ಲಿ ಕಂಪನಿಯವರಿಗೆ ಸ್ಥಳದಲ್ಲಿಯೇ ಪ್ರತಿ ಕೆ.ಜಿಗೆ 4.75 ರು.ಗಳಿಗೆ ನೀಡುತ್ತಿದ್ದಾರೆ. ನೆಟ್ಟ ಎರಡು ತಿಂಗಳಿನೊಳಗೆ ಬೆಳೆಯಬಹುದಾದ ಚೆಂಡುಹೂವು, ಎಕರೆಗೆ ಏನಿಲ್ಲವೆಂದರೂ 12 ಟನ್ಗಳಷ್ಟು ಚೆಂಡುಹೂವನ್ನು ರೈತರು ಬೆಳೆಯುತ್ತಿದ್ದಾರೆ.
ಮೂರು ತಿಂಗಳ ಬೆಳೆಯಾದ ಚೆಂಡುಹೂವನ್ನು ವಾರಕ್ಕೊಮ್ಮೆ ಕಡಿಮೆ ಎಂದರೂ 2 ಟನ್ಗಳಷ್ಟಾದರೂ ಸಿಗುತ್ತದೆ. ಗೊಬ್ಬರ, ಆಳುಗಳ ಕೂಲಿ ಎಲ್ಲವನ್ನೂ ಸೇರಿಸಿದರೆ ರೈತರಿಗೆ ಕಡಿಮೆಯೆಂದರೂ 18 ರಿಂದ 20 ಸಾವಿರ ರು. ಗಳಷ್ಟು ಖರ್ಚು ಬರುತ್ತಿದ್ದು, ಮೂರು ತಿಂಗಳಿಗೆ ಕನಿಷ್ಠ 50ರಿಂದ 60 ಸಾವಿರ ರು. ಚೆಂಡುಹೂವನ್ನು ಬೆಳೆದ ರೈತರು ಎಣಿಸುತ್ತಿದ್ದಾರೆ.
ಸರಿಯಾದ ಮಾರ್ಗದರ್ಶನ ಹಾಗೂ ಪರಿಶ್ರಮವಿದ್ದಲ್ಲಿ ಕೃಷಿಯಲ್ಲಿ ಯಾವುದೂ ನಷ್ಟವಲ್ಲ ಎಂಬ ಮಾತನ್ನು ಮನಗಂಡಿರುವ ಕೆಲ ರೈತರು ಚೆಂಡುಹೂವನ್ನು ಬೆಳೆದು ತಮ್ಮ ಬಾಳನ್ನೂ ಬಂಗಾರವಾಗಿಸಿ ಕೊಳ್ಳತೊಡಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

