ವಿದ್ಯೆ ಬದುಕಿನುದ್ದಕ್ಕೂ ಕೈ ಹಿಡಿಯುವ ಸಾಧನ: ಶಂಭುನಾಥ ಶ್ರೀ ಅಭಿಮತ
ಕ.ಪ್ರ.ವಾರ್ತೆ ಹೊಳೆನರಸೀಪುರ ಸೆ.2
ಅನ್ನವು ಕ್ಷಣಕಾಲದ ತೃಪ್ತಿ ನೀಡಿದರೆ, ವಿದ್ಯಾದಾನವು ವ್ಯಕ್ತಿಯ ಬದುಕಿನುದ್ದಕ್ಕೂ ಕೈಹಿಡಿಯುವ ಸಾಧನವಾಗಿದ್ದು, ಇದು ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಒಲ್ಲಿಗರ ಹಿತರಕ್ಷಣಾ ವೇದಿಕೆ ತಾಲೂಕು ಶಾಖೆ ಹಮ್ಮಿಕೊಂಡಿದ್ದ ದಿ.ಡಾ.ಬಾಲಗಂಗಾಧರನಾಥಸ್ವಾಮೀಜಿ ಸಂಸ್ಮರಣೆ ಹಾಗೂ ಒಕ್ಕಲಿಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಾವೆಲ್ಲರೂ ಸುಸಂಸ್ಕೃತರಾಗಬೇಕಿದ್ದಲ್ಲಿ ಗ್ರಾಮೀಣ ರೈತರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯುವಂತಹ ವಾತಾವರಣ ನಿರ್ಮಾಣವಾಗಬೇಕು. ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ದೊರೆತಾಗ ಆದರ್ಶಯುತವಾದ ಸಮಾಜ ನಿರ್ಮಾಣವಾಗಬಲ್ಲದು ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆಸಕ್ತಿ ಹಾಗೂ ಶ್ರದ್ಧೆ ವಹಿಸಿ ಅತ್ಯುತ್ತಮ ಅಭಿವೃದ್ಧಿ ಮಾಡುತ್ತಿರುವ ಶಾಸಕ ಎಚ್.ಡಿ.ರೇವಣ್ಣ ಅವರ ಶ್ರಮವನ್ನು ಶ್ಲಾಘಿಸಿದ ಸ್ವಾಮೀಜಿ, ತಾಲೂಕಿನಲ್ಲಿ ಬೃಹತ್ ವಿದ್ಯಾರ್ಥಿ ಸಮ್ಮೇಳನ ಹಮ್ಮಿಕೊಂಡಲ್ಲಿ ಮಠದಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಇಂದು ನಡೆಸುತ್ತಿರುವ ಒಕ್ಕಲಿಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ಕೇವಲ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸದೆ, ಸಮಾಜದಲ್ಲಿನ ಉತ್ತಮ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸುವ ಪರಿಪಾಠ ಹಮ್ಮಿಕೊಳ್ಳಬೇಕೆಂದು ರೇವಣ್ಣ ಕಾರ್ಯಕ್ರಮದ ಆಯೋಜಕರಿಗೆ ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿ ರಾಜ್ಯದಲ್ಲಿಯೇ ಮೊದಲಸ್ಥಾನ ಪಡೆದಿದೆ. ಇದಕ್ಕೆ ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಅಗಿದ್ದ ಅವಧಿಯಲ್ಲಿನ ಅಭಿವೃದ್ಧಿಯೇ ಕಾರಣ ಎಂದರು. ಒಕ್ಕಲಿಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಂಭುನಾಥಸ್ವಾಮೀಜಿ ಅಭಿನಂದಿಸಿದರು.
ಬಿಇಒ ಯೋಗೇಶ್, ತಾಪಂ ಅಧ್ಯಕ್ಷೆ ಪುಷ್ಪಗೌಡೇಗೌಡ, ಎಂಜಿನಿಯರ್ಗಳಾದ ಸುಬ್ರಾಯಿಗೌಡ, ಪುಟ್ಟರಾಜು, ನರೇಂದ್ರಬಾಬು, ತಾಲೂಕು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಚ್ಚೇಗೌಡ, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾಜೇಗೌಡ, ಮಂಜೇಗೌಡ ಹಾಗೂ ಒಕ್ಕಲಿಗ ಮುಖಂಡರು ಇದ್ದರು. ಸಮಾರಂಭದ ನೇತೃತ್ವವನ್ನು ತಾಲೂಕು ಒಕ್ಕಲಿಗರ ಹಿತರಕ್ಷಣಾ ಸೇನೆ ಅಧ್ಯಕ್ಷ ಕಳ್ಳಿಕೊಪ್ಪಲು ರವಿ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

