ಹಾಸನ

ಅರಕಲಗೂಡು; ಮಳೆ-ಗಾಳಿಗೆ ಅಪಾರ ಹಾನಿ

Published On :

ಅರಕಲಗೂಡು: ತಾಲೂಕಿನ ಕಸಬಾ ಹೋಬಳಿಯ ಗರೀಘಟ್ಟ ಗ್ರಾಮದಲ್ಲಿ ಸೋಮವಾರ ಸಂಜೆ ವೇಳೆಗೆ ಬೀಸಿದ ಭಾರೀ ಗಾಳಿಗೆ ಅಪಾರ ಹಾನಿ ಸಂಭವಿಸಿದೆ.
ಗರೀಘಟ್ಟ ಗ್ರಾಮದಲ್ಲಿ ಸುಮಾರು 70 ವಿವಿಧ ರೀತಿಯ ಮರಗಳು ನೆಲಕ್ಕುರುಳಿದ್ದು, ಕೆಲ ಮರಗಳು ವಾಸದ ಮನೆಗಳ ಮೇಲೆ ಬಿದ್ದುದರಿಂದ ಹಲವು ಮನೆಗಳು ಜಖಂಗೊಂಡಿವೆ.
ಬತ್ತ, ರಾಗಿ ಕಣಜಗಳಿಗೆ ನೀರು: ಕೆಲ ಮನೆಗಳ ಛಾವಣಿ ಭಾಗಶಃ ಹಾರಿ ಹೋಗಿದ್ದರೆ, ಗ್ರಾಮದ ಮೂರು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಇದೇ ವೇಳೆ ಸುರಿದ ಭಾರೀ ಮಳೆಯಿಂದಾಗಿ ಕೆಲ ಮನೆಗಳಲ್ಲಿ ಕಣಜಗಳಲ್ಲಿ ಸಂಗ್ರಹಿಸಿಡಲಾಗಿದ್ದ ಬತ್ತ ಹಾಗೂ ರಾಗಿ ನೀರಿನಿಂದ ತುಂಬಿಹೋಗಿದ್ದು, ಸಂಗ್ರಹಿಸಿದ್ದ ಧಾನ್ಯಗಳು ಸಂಪೂರ್ಣ ಹಾನಿಗೊಂಡಿವೆ. ಇನ್ನು ತೋಟಗಳಲ್ಲಿದ್ದ ಅಡಕೆ ಮರಗಳು, ಹಲಸಿನ ಮರ ಸೇರಿದಂತೆ ಮತ್ತಿತರೆ ಮರಗಳು ನೆಲಕ್ಕುರಳಿವೆ. ಭಾರೀ ಗಾಳಿಗೆ ಸಿಲುಕಿದ ಜೋಳದ ಬೆಳೆ ಸಂಪೂರ್ಣ ನೆಲಕ್ಕೆ ಮಲಗಿವೆ.
ಬಾಗಿದ ವಿದ್ಯುತ್ ಕಂಬಗಳು: ಹಲವು ವಿದ್ಯುತ್ ಕಂಬಗಳು ಬಾಗಿದ್ದರೆ, ನಾಲ್ಕಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದಾಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಇಡೀ ಕತ್ತಲು ಆವರಿಸಿತ್ತು. ಈ ನಡುವೆ ಮಂಗಳವಾರ ಇಡೀ ದಿನ ಗ್ರಾಮಕ್ಕೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಚೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.  ಈ ಸಂಬಂಧ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಚೆಸ್ಕಾಂ ಅಧಿಕಾರಿಗಳು, ಮಂಗಳವಾರ ರಾತ್ರಿ ವೇಳೆಗೆ ವಿದ್ಯುತ್ ಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಅರ್ಧ ಗಂಟೆಯಲ್ಲಿ ಎಲ್ಲಾ ಅಯೋವುಯ: ಸೋಮವಾರ ಸಂಜೆ ಸುಮಾರು 5.30 ರಿಂದ 6 ಗಂಟೆ ಒಳಗೆ ಎಲ್ಲವೂ ಮುಗಿದು ಹೋಗಿತ್ತು. ಕೇವಲ ಕೆಲ ಸೆಕೆಂಡುಗಳು ಮಾತ್ರ ಬಿರುಗಾಳಿ ಬೀಸಿತು. ಭೋರ್ಗರೆಯುತ್ತಾ ಬೀಸಿದ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಮತ್ತು ಮನೆಗಳ ಛಾವಣಿಗಳು ತರಗೆಲೆಗಳಂತೆ ಉದುರಿ ಹೋದುವು. ನಾವು ದೇವರನ್ನು ಜಪಿಸುತ್ತಾ ಕುಳಿತಿದ್ದು ಬಿಟ್ಟರೆ, ಇನ್ನೇನೂ ಮಾಡಲು ಸಾಧ್ಯವೇ ಆಗಲಿಲ್ಲ ಎನ್ನುತ್ತಾರೆ ಮನೆ ಕಳೆದುಕೊಂಡಿರುವ ಗರೀಘಟ್ಟ ಗ್ರಾಮದ ದೇವರಾಜೇಗೌಡ.  ಮನೆಯ ಛಾವಣಿಯ ಕೆಲ ತುಂಡುಗಳು ಅವರ ಕೈ-ಕಾಲುಗಳ ಮೇಲೆ ಬಿದ್ದು ಗಾಯಗಳಾಗಿವೆ. ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ಈ ರೀತಿ ಬಿರುಗಾಳಿ-ಮಳೆ ಕಂಡಿರಲಿಲ್ಲ: ಇದೇ ಗ್ರಾಮದ ಗೋಪಾಲಯ್ಯ ಎಂಬುವರ ಮನೆಯ ಮೇಲೂ ಮರ ಉರುಳಿದೆ. ಬೇರು ಸಹಿತ ಮನೆಯ ಮೇಲೆ ಉರುಳಿರುವ ಮರವನ್ನು ವಿದ್ಯುತ್ ತಂತಿ ತಡೆದಿದೆ. ಇಲ್ಲವಾಗಿದ್ದರೆ ಅಪಾಯ ಸಂಭವಿಸುತ್ತಿತ್ತು. ಬೀಸಿದ ಭಾರೀ ಬಿರುಗಾಳಿಗೆ ಸ್ವಾಮಿಗೌಡ ಎಂಬುವವರಿಗೆ ಸೇರಿದ ಎರಡು ವರ್ಷದ ಕರುವೊಂದು ಉಸಿರುಕಟ್ಟಿ ಸತ್ತಿದೆ. ಈ ಎಲ್ಲವೂ ನಡೆದು ಹೋಗಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನುತ್ತಾರೆ ಗ್ರಾಮಸ್ಥರು. ತಾವೆಂದೂ ಈ ರೀತಿ ಬಿರುಗಾಳಿ ಅಥವಾ ಮಳೆಯನ್ನೂ ಕಂಡೇ ಇರಲಿಲ್ಲ ಎನ್ನುತ್ತಾರೆ.
ಶಾಸಕರ ಭೇಟಿ:  ಸುದ್ದಿ ತಿಳಿಯುತ್ತಿದ್ದಂತೆ ವೇಳೆಗೆ ಶಾಸಕ ಎ.ಮಂಜು ಸಂತ್ರಸ್ತ ಗ್ರಾಮಕ್ಕೆ ಭೇಟಿ ನೀಡಿದ್ದರು.  ಈ ಸಂಬಂಧ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು,  ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸುವ ಬಗೆಗೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಈ ವೇಳೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಬಸವರಾಜ್ ಭೇಟಿ ನೀಡಿದ್ದರು.
ತಹಸೀಲ್ದಾರ್ ಬಗ್ಗೆ ಆಕ್ರೋಶ: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಗ್ರಾಮಕ್ಕೆ ತಹಸೀಲ್ದಾರ್ ಘಟನೆ ನಡೆದು 24 ಗಂಟೆಗಳೇ ಸಂಭವಿಸಿದರೂ ಒಮ್ಮೆಯೂ ಗ್ರಾಮಕ್ಕೆ ಬೇಟಿ ನೀಡದಿರುವ ಬಗೆಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.