ಕ್ರೀಡಾಪಟುಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿ
ಅರಸೀಕೆರೆ: ಮುಂಬರುವ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ರು.5 ಲಕ್ಷ ಕ್ರೀಡಾನಿಧಿ ಸ್ಥಾಪಿಸಿ ಎಲ್ಲ ಕ್ರೀಡೆಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಶ್ವಾಸನೆ ನೀಡಿದರು.
ಪಟ್ಟಣದ ಕೋಡಿಮಠ ಶಿವಲಿಂಗೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ಉತ್ತೇಜನ ಇಲ್ಲದೆ ಕ್ರೀಡೆಗಳನ್ನು ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ದೈಹಿಕ ಶಿಕ್ಷಣಕ್ಕೂ ಆದ್ಯತೆ ನೀಡಿ: ಶಿಕ್ಷಣಕ್ಕೆ ಸಿಗುವಷ್ಟೆ ಆದ್ಯತೆ ದೈಹಿಕ ಶಿಕ್ಷಣಕ್ಕೂ, ಆಟೋಟ ಚಟುವಟಿಕೆಗಳಿಗೂ ನೀಡಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಮನಗಂಡು ಈ ನಿಟ್ಟಿನಲ್ಲಿ ಕ್ರೀಡಾನಿಧಿ ಸ್ಥಾಪನೆಗೆ ಬದ್ಧರಿರುವುದಾಗಿ ಭರವಸೆ ನೀಡಿದರು.
ಆಡಳಿತಕ್ಕೆ ಅರ್ಧ ಹಣ ವ್ಯಯ: ಕ್ರೀಡಾಂಗಣದ ಅಭಿವೃದ್ಧಿಗೆ ನೆರವಾಗುವಂತೆ ರು. 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕ್ರೀಡಾ ಸಚಿವರಿಗೆ ಮನವಿ ಮಾಡಲಾಗಿದೆ. ಯುವಜನ ಮತ್ತು ಕ್ರೀಡಾ ಇಲಾಖೆಗೆ ವಾರ್ಷಿಕ ರು.14 ಕೋಟಿ ಮಾತ್ರ ಮಂಜೂರಾಗುತ್ತಿದ್ದು ಆಡಳಿತ ವ್ಯವಹಾರಕ್ಕೆ ಅರ್ಧ ಹಣ ವ್ಯಯವಾಗುತ್ತಿದೆ. ಆದರೆ ತಮ್ಮ ಅವಿರತ ಹೋರಾಟದ ಫಲ ಮುಂದೆ ಏನೆಂಬುದು ಕ್ಷೇತ್ರದ ಜನತೆಗೆ ಅರ್ಥವಾಗಲಿದೆ ಎಂದ ಅವರು ಕ್ರೀಡೆಗಳಲ್ಲಿ ಸೋಲು-ಗೆಲವು ಸಹಜ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದನ್ನು ಸಮಚಿತ್ತದಿಂದ ಸ್ವೀಕರಿಸಿ ಕ್ರೀಡಾ ಮನೋಭಾವನೆ ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಇದೇ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಉದ್ಯಮಿ ಅರುಣ್ಕುಮಾರ್, ಕೆ.ವಿ.ನಿರ್ವಾಣಸ್ವಾಮಿ, ಅನಂತ ಸದ್ವಿದ್ಯ ಸಂಸ್ಥೆ ಮುಖ್ಯಸ್ಥ ಆರ್.ಅನಂತ್ ಕುಮಾರ್ ಕ್ರೀಡಾನಿಧಿ ಸ್ಥಾಪನೆಗೆ ತಲಾ 1 ಲಕ್ಷ ರು ನೀಡುವುದಾಗಿ ಘೋಷಿಸಿದರು.
ಎಪಿಎಂಸಿ ಸದಸ್ಯ ಮುರುಂಡಿ ಶಿವಯ್ಯ ರು. 25 ಸಾವಿರ, ಶಿವಲಿಂಗೇಶ್ವರ ಕಾಲೇಜು ವತಿಯಿಂದ ರು.5 ಸಾವಿರ ನಿಧಿ ನೀಡುವುದಾಗಿ ತಿಳಿಸಿದರು.
ತಾಪಂ ಅಧ್ಯಕ್ಷ ಹೆಚ್.ಟಿ.ಶಿವಮೂರ್ತಿ, ಪ್ರಾಂಶುಪಾಲ ಕೆ.ಎನ್.ಪ್ರೇಮ್ಕಮಾರ್, ಕೋಡಿಮಠ ವಿದ್ಯಾಸಂಸ್ಥೆಯ ಕಾರ್ಯದರ್ಶಿ ದಕ್ಷಿಣಮೂರ್ತಿ, ಬಿಇಒ ಎಸ್.ಪಿ.ನಟರಾಜ್, ಹೆಚ್.ಪಿ.ಬಸವಲಿಂಗಪ್ಪ, ಸಿ.ಮಹದೇವಪ್ಪ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

