ಹಾಸನ

ಜನಪರ ಕಾಳಜಿ ಇದ್ದಲ್ಲಿ ಬೆಂಬಲ ಖಚಿತ

Published On :

ಹೊಳೆನರಸೀಪುರ: ರಾಜಕೀಯ ವೈರುಧ್ಯ ಹಾಗೂ ದ್ವೇಷವೇ ಬೇರೆ-ಅಭಿವೃದ್ಧಿಯೇ ಬೇರೆ. ಆದರೆ, ಯಾವುದೇ ರಾಜಕಾರಣಿಯಾಗಲಿ ತಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ, ಜನಪರ ಕಾಳಜಿ ಹಾಗೂ ಚಿಂತನೆಗಳು ಮಾತ್ರವೇ ರಾಜಕೀಯ ಅಸ್ತಿತ್ವ ಉಳಿಸಲು ಸಾಧ್ಯ ಎಂದು ಅರಕಲಗೂಡು ಶಾಸಕ ಎ.ಮಂಜು ಅಭಿಪ್ರಾಯಪಟ್ಟರು.
ತಾಲೂಕಿನ ಹಳ್ಳಿಮೈಸೂರಿನಲ್ಲಿ ಮಂಗಳವಾರ  ಹಮ್ಮಿಕೊಳ್ಳಲಾಗಿದ್ದ ಹಳ್ಳಿಮೈಸೂರು ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಮತದಾರರಿಗೆ ಅಭಿನಂಧನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿಯೇ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಬೇರೆ ಯಾರಿಗೂ ಇರಲಿಲ್ಲವಾದರೂ, ತಮ್ಮ ಅಂತರಾಳದಲ್ಲಿ ಇಲ್ಲಿನ ಮತದಾರರು ತನ್ನನ್ನು ಕೈಬಿಡುವುದಿಲ್ಲ ಎಂಬ ಅಚಲವಾದ ನಂಬಿಕೆ ನನ್ನೊಳಗಿತ್ತು, ಅದನ್ನು ಇಲ್ಲಿನ ನನ್ನ ಮತದಾರ ಬಂಧುಗಳು ಹುಸಿಮಾಡಲಿಲ್ಲ ಎಂದು ಹೋಬಳಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಯಾರು ಏನೇ ಷಡ್ಯಂತ್ರ ಮಾಡಿದರೂ ಅದೆಲ್ಲವನ್ನೂ ಮೀರಿ ಕ್ಷೇತ್ರದ ಮತದಾರರು ನನ್ನನ್ನು ಕೈಹಿಡಿದು ಗೆಲವು ನೀಡಿದ್ದಾರೆ ಎಂದು ಮತದಾರರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಎ.ಮಂಜು, ಈ ಭಾಗದ ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ಮೂಲಕ ಇಲ್ಲಿನ ಜನರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ನುಡಿದರು.
ರು.11ಕೋಟಿ ವೆಚ್ಚದಲ್ಲಿ ಕುಡಿವ ನೀರು: ಶೀಘ್ರದಲ್ಲಿಯೇ ಹೊಳೆನರಸೀಪುರದ ಹೇಮಾವತಿ ನದಿಯಿಂದ ರು.11ಕೋಟಿ ವೆಚ್ಚದಲ್ಲಿ ಹಳ್ಳಿಮೈಸೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ತರಲಾಗುವುದು ಎಂದ ಅವರು, ಗುಡ್ಡೇನಹಳ್ಳಿ ಬಳಿಯಲ್ಲಿ ಹೊಗೆಸೊಪ್ಪು ಖರೀದಿ ಕೇಂದ್ರವನ್ನು ಅತಿ ಶೀಘ್ರದಲ್ಲಿಯೇ ಸ್ಥಾಪಿಸಲಾಗುವುದು ಎಂದು  ಈ ವೇಳೆ ಶಾಸಕ ಎ.ಮಂಜು ತಿಳಿಸಿದರಲ್ಲದೆ, ಈ ಹೋಬಳಿಯ ಎಲ್ಲಾ ಕೆರೆಗಳಿಗೂ ಹೊಳೆಯಿಂದ ನೀರು ತುಂಬಿಸುವ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ದಿ.ಎ.ದೊಡ್ಡೇಗೌಡರ ಪುತ್ರ ಎ.ಡಿ.ಚಂದ್ರಶೇಖರ್, ಹಳ್ಳಿಮೈಸೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ, ಅರಕಲಗೂಡು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬೈರೇಗೌಡ, ಕೆಪಿಸಿಸಿ ಸದಸ್ಯ ಪುಟ್ಟೇಗೌಡ ಮತ್ತಿತರರು ಮಾತನಾಡಿದರು. ಹಳ್ಳಿಮೈಸೂರು ಹೋಬಳಿ ಒಬಿಸಿ ವಿಭಾಗದ ಅಧ್ಯಕ್ಷ ಶಿವಣ್ಣ, ರಂಗೇನಹಳ್ಳಿ ಜವರೇಗೌಡ, ಹನುಮಶೆಟ್ಟಿ, ವಕೀಲ ಜಯಕುಮಾರ್, ಹಿರತಳಾಲು ಯೋಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.