ಅರ್ಹರ ಪಿಂಚಣಿಗೆ ಕೊಕ್
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಸೆ. 4
ಮಂಜೂರಾಗಿರುವ ಪಿಂಚಣಿಗಳನ್ನು ವರ್ಷವಾದರೂ ಫಲಾನುಭವಿಗಳಿಗೆ ವಿತರಿಸದೇ ಇರುವುದು, ಕಂದಾಯ ಇಲಾಖೆ ಮಂಜೂರು ಮಾಡಿರುವ ವಿವಿಧ ವೇತನಗಳನ್ನು ಫಲಾನುಭವಿಗಳಿಗೆ ನೀಡದ ಪ್ರಕರಣ ಲೋಕಾಯುಕ್ತ ಡಿವೈಎಸ್ಪಿ ಬುಧವಾರ ತಾಲೂಕಿಗೆ ಭೇಟಿ ನೀಡಿದ ಕಾಲಕ್ಕೆ ಬಯಲಾಗಿದೆ.
ವಿಳಾಸ ತಿಳಿದಿಲ್ಲ - ಅಪೂರ್ಣ ಮಾಹಿತಿ ಎಂಬ ಹಲವು ಸಬೂಬುಗಳೊಂದಿಗೆ ಇಲ್ಲಿನ ಉಪ-ಖಜಾನಾಧಿಕಾರಿ ಪಿಂಚಣಿ ಮಂಜೂರಾತಿಯನ್ನೇ ವಜಾಗೊಳಿಸಿದ್ದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದರು. ಅಲ್ಲದೆ ಉಪ-ಖಜಾನಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಉಪ-ಖಜಾನೆಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಶಿವಬಸಪ್ಪ ನೇತೃತ್ವದ ತಂಡವು ಕಡತಗಳ ಪರಿಶೀಲನೆ ಸಂದರ್ಭದಲ್ಲಿ ನಾನಾ ಪಿಂಚಣಿಗಳು ಮಂಜೂರಾಗಿ ಆರು ತಿಂಗಳು, ವರ್ಷವೇ ಕಳೆದರೂ ಫಲಾನುಭವಿಗಳಿಗೆ ವಿತರಿಸದೆ ಕಚೇರಿಯಲ್ಲಿಯೇ ಇಟ್ಟುಕೊಂಡಿರುವ ಕುರಿತಂತೆ ತೀವ್ರ ವಿಚಾರಣೆ ನಡೆಸಿದ ಲೋಕಾಯುಕ್ತರು ಉಪ-ಖಜಾನಾಧಿಕಾರಿ ನಂಜುಂಡಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ವಿಳಾಸ ತಿಳಿದಿಲ್ಲ, ಫಲಾನುಭವಿಗಳೇ ಬಂದಿಲ್ಲ ಎಂಬ ಸಬೂಬು ಅಧಿಕಾರಿ ನೀಡಲು ಮುಂದಾದಾಗ ಲೋಕಾಯುಕ್ತರು ಅಧಿಕಾರಿಯ ಕಾರ್ಯನಿರ್ವಹಣೆಯ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಪ-ಖಜಾನೆಗೆ ಸಂಬಂಧಿಸಿದ ಡಿಸಿಆರ್ಜಿ ಹಾಗೂ ಪಿಂಚಣಿ ವಿಭಾಗದ ಹಲವು ಪತ್ರಗಳನ್ನು ಕಚೇರಿಯಲ್ಲಿಯೇ ಮೂಲೆಗುಂಪು ಮಾಡಿ ಇಟ್ಟಿರುವ ಕುರಿತಂತೆ ಪರಿಶೀಲನೆ ನಡೆಸಿದ ಲೋಕಾಯುಕ್ತರು ಅಂಗವಿಕಲ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನಗಳಿಗೆ ಸಂಬಂಧಿಸಿದ ಸುಮಾರು 800 ಅರ್ಜಿಗಳು ಹಾಗೂ ಸಂಧ್ಯಾ ಸುರಕ್ಷಾ ವೇತನಕ್ಕೆ ಸಂಬಂಧಿಸಿದ 430ಕ್ಕೂ ಹೆಚ್ಚಿನ ಅರ್ಜಿಗಳನ್ನು ಕಚೇರಿಯಲ್ಲಿಯೇ ಇಟ್ಟುಕೊಂಡಿರುವ ಕುರಿತಂತೆಯೂ ಉಪ-ಖಜಾನಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ, ಕೂಡಲೇ ಬಾಕಿ ಇರುವ ಎಲ್ಲ ಕಡತಗಳ ವಿಲೇವಾರಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಶಿವಬಸಪ್ಪ ಅವರು, ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸೇವೆಗೆ ಸೇರಿ 2 ವರ್ಷವಾದರೂ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತ ಗೈರು ಹಾಜರಾಗಿರುವ ಸ್ಟಾಫ್ ನರ್ಸ್ ಗೈರು ಹಾಜರಾತಿಯ ಕುರಿತಂತೆ ಹಾಗೂ ಗ್ರೂಪ್ ಡಿ ನೌಕರ ಸೇವೆಯಿಂದ ಅಮಾನತುಗೊಂಡು ವರ್ಷಗಳೇ ಕಳೆದರೂ ಹಾಜರಾತಿಯಲ್ಲಿ ಕಾರಣವನ್ನು ನಮೂದಿಸದಿರುವ ಕುರಿತಂತೆ ಆಸ್ಪತ್ರೆ ಅಧೀಕ್ಷಕರನ್ನು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸ್ವಚ್ಛತೆ ಗುತ್ತಿಗೆ ಪಡೆದಿದ್ದ ಹಿಂದಿನ ಗುತ್ತಿಗೆದಾರ ಹಾಗೂ ಪ್ರಸಕ್ತ ಗುತ್ತಿಗೆ ಪಡೆದಿರುವ ಹಾಸನದ ಗುತ್ತಿಗೆದಾರ ಕೃಷ್ಣ ಎಂಟರ್ಪ್ರೈಸಸ್ ಸಂಸ್ಥೆಯು ಕೆಲಸಗಾರರಿಗೆ ಸರ್ಕಾರದ ನೀತಿ ನಿಯಮಾವಳಿಯಂತೆ ಕನಿಷ್ಠ ವೇತನವನ್ನು ನೀಡದಿರುವ ಕುರಿತಂತೆ, ಕೆಲಸಗಾರರ ವೇತನವನ್ನು ಅವರ ಬ್ಯಾಂಕ್ಖಾತೆಗೆ ಜಮಾ ಮಾಡದೇ ಕಡಿಮೆ ವೇತನವನ್ನು ನೀಡುತ್ತಿರುವ ಕುರಿತಂತೆಯೂ ಕೆಲಸಗಾರರ ವಿಚಾರಣೆಯ ಸಂದರ್ಭದಲ್ಲಿ ಪತ್ತೆ ಮಾಡಿದರು.
ಅಲ್ಲದೆ ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಕೆಲಸಗಾರರ ವೇತನದಲ್ಲಿ ಪಿಎಫ್ ಹಣವನ್ನು ಹಿಡಿದಿದ್ದರೂ ಇದುವರೆವಿಗೂ ಕೆಲಸಗಾರರ ಖಾತೆಗೆ ಜಮಾ ಆಗದಿರುವ ಲೋಪದ ಕುರಿತಂತೆಯೂ ಲೋಕಾಯುಕ್ತರು ಪರಿಶೀಲನೆ ನಡೆಸಿದರು. ಈ ಕುರಿತಂತೆ ಸಂಪೂರ್ಣ ಮಾಹಿತಿ ಹಾಗೂ ಗುತ್ತಿಗೆದಾರ ಎಷ್ಟು ಕೆಲಸಗಾರರನ್ನು ಹೊಂದಿರಬೇಕು ಎಂಬ ದಾಖಲಾತಿಗಳನ್ನು ತಮ್ಮ ಕಚೇರಿಗೆ ನೀಡುವಂತೆ ಅಧೀಕ್ಷಕರಿಗೆ ಸೂಚಿಸಿದರು.
ನಂತರ ಇಲ್ಲಿನ ಆಯುರ್ವೇದ ಆಸ್ಪತ್ರೆಗೂ ಭೇಟಿ ನೀಡಿದ ಲೋಕಾಯುಕ್ತರು ಆಸ್ಪತ್ರೆಯ ಸ್ವಚ್ಛತೆ ಕರ್ತವ್ಯ ನಿರ್ವಹಣೆ, ವೈದ್ಯಕೀಯ ಸೇವೆಗಳ ನಿರ್ವಹಣೆಯ ಕುರಿತಂತೆ ಮೆಚ್ಚುಗೆ ಸೂಚಿಸಿದರು. ಅಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸ್ವಯಂಸ್ಫೂರ್ತಿಯಿಂದ ಆಸ್ಪತ್ರೆಯ ಆವರಣದಲ್ಲಿ ಬೆಳೆಸುತ್ತಿರುವ ಆಯುರ್ವೇದ ಸಸ್ಯಗಳ ಕುರಿತಂತೆಯೂ ಮೆಚ್ಚುಗೆ ಸೂಚಿಸಿದರು.ವೃತ್ತ ನಿರೀಕ್ಷಕ ಶಾಂತಿನಾಥ್, ಆಡಳಿತ ವ್ಯೆದ್ಯಾಧಿಕಾರಿ ಡಾ.ಟಿ.ಎಸ್.ಲಕ್ಷ್ಮೀಕಾಂತ್, ಆಯುರ್ವೇದ ಆಸ್ಪತ್ರೆಯ ವೈದ್ಯೆ ಪುಷ್ಪಲತಾ, ತಹಸೀಲ್ದಾರ್ ಪ್ರಸನ್ನಮೂರ್ತಿ, ಉಲಿವಾಲ ಮೋಹನ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

