ಹಾಸನ

ಮೀಟರ್ ಇಲ್ಲದೆ ಓಡುವ ಆಟೋ

Published On :


ಹಾಸನ: ಜಿಲ್ಲೆಯಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆಯೇ ಇಲ್ಲ. ಪರಿಣಾಮವಾಗಿ ಸಾರ್ವಜನಿಕರಿಂದ ಹಣ ಸುಲಿಗೆಯಾಗುತ್ತಿದೆ. ಇದೊಂದು ದೊಡ್ಡ ಸಮಸ್ಯೆಯಾಗಿ ಭಾರೀ ತಲೆನೋವಾಗಿ ಪರಿಣಮಿಸಿದೆ.
ಕೆಲವು ಆಟೋ ರಿಕ್ಷಾಗಳಲ್ಲಿ ಮೀಟರ್ ಇದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಆಟೋ ಗಳಲ್ಲಿ ಪ್ರಯಾಣಿಸುವವರು ಚಾಲಕ ಕೇಳಿದಷ್ಟು ಹಣ ನೀಡಬೇಕಾದ ಪರಿಸ್ಥಿತಿ ಇದೆ. ಮೀಟರ್ ಇಲ್ಲದ ಕಾರಣ ಸಾರ್ವಜನಿಕರು ಹೆಚ್ಚಿನ ಹಣ ತೆತ್ತ ಬೇಕಾಗಿದೆ.
ಆಟೋ ರಿಕ್ಷಾಗಳಲ್ಲಿ ಮೀಟರ್ ಕಡ್ಡಾಯ ಅಳವಡಿಸಬೇಕು ಎಂಬ ನಿಯಮವಿದ್ದರೂ ಅನೇಕ ಆಟೋ ರಿಕ್ಷಾಗಳಲ್ಲಿ ಮೀಟರ್ನ್ನು ಇನ್ನೂ ಅಳವಡಿಸಿಲ್ಲ. ಮತ್ತೆ ಕೆಲವರು ಮೀಟರ್ ಅಳವಡಿಸಿದ್ದರೂ ಪ್ರಯಾಣಿಕರಿಗೆ ಮೋಸ ಮಾಡುವಂತಹ ಕೆಟ್ಟ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ಜೊತೆಗೆ ಕೆಲವು ಆಟೋಗಳಲ್ಲಿ ಸರಿಯಾಗಿ ದಾಖಲೆಗಳನ್ನು ನಿರ್ವಹಣೆ ಮಾಡದಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ಜಿಲ್ಲೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಆಟೋರಿಕ್ಷಾಗಳಿದ್ದು, ಈ ಪೈಕಿ ಕೆಲವು ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಿದ್ದರೆ, ಇನ್ನುಳಿದ ಆಟೋ ರಿಕ್ಷಾಗಳು ಮೀಟರ್ ಇಲ್ಲದೆ ಜಿಲ್ಲೆಯ ನಾನಾ ಭಾಗಗಳಲ್ಲಿ ಪ್ರತಿನಿತ್ಯ ಸಂಚರಿಸುತ್ತಿವೆ. ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಅಪರೂಪಕ್ಕೊಮ್ಮೆ ಆಟೋ ರಿಕ್ಷಾಗಳ ತಪಾಸಣೆ ಕೈಗೊಂಡು ದಂಡ ವಿಧಿಸುತ್ತಿರುವುದನ್ನು ಬಿಟ್ಟರೆ ಕಡ್ಡಾಯ ಮೀಟರ್ ಅಳವಡಿಕೆಗೆ ಅಂಥ ಆಸಕ್ತಿ ತೋರುತ್ತಿಲ್ಲ.  
ಆಟೋ ರಿಕ್ಷಾಗಳಿಗೆ ಸರಿಯಾಗಿ ಮೀಟರ್ ಅಳವಡಿಸುವಂತವರು ಜಿಲ್ಲೆಯಲ್ಲಿ ಇಲ್ಲ. ಇದರಿಂದ ಆಟೋಗಳಿಗೆ ಮೀಟರ್ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಲವಾದ ವಾದ ಆಟೋ ಚಾಲಕರದ್ದಾಗಿದೆ. ಜಿಲ್ಲೆಯಲ್ಲಿ ಕೇವಲ ಇಬ್ಬರು ಮಾತ್ರ ಮೀಟರ್ ಅಳವಡಿಸುವವರು ಇರುವುದರಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಒಂದು ಮೀಟರ್ ಅವಳಡಿಸಲು ಹಾಗೂ ರಿಪೇರಿ ಮಾಡಿಸಲು ಕನಿಷ್ಟ 10 ರಿಂದ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ.
ಮೀಟರ್ ಬಿಚ್ಚಿಟ್ಟು ಆಟೋ ಚಲಾಯಿಸಲು ಸಾಧ್ಯವಿಲ್ಲ. ಕೆಲವರು ಆಟೋ ದುಡಿಮೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರು. ಮೀಟರ್ ಅವಳವಡಿಕೆಗಾಗಿ 10 ರಿಂದ 15 ದಿನಗಳವರೆಗೆ ಆಟೋಗಳನ್ನು ನಿಲ್ಲಿಸಿದರೆ ಅವರ ಜೀವನ ಕಷ್ಟಕರವಾಗುವುದರಿಂದ  ಮೀಟರ್ ಅವಳಡಿಸಲು ಮುಂದಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಮೀಟರ್ ಅಳವಡಿಸುವಂತಹವರ ಸಂಖ್ಯೆಯನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆಯವರು ನಿಯೋಜಿಸಬೇಕಾಗಿದೆ.
ಚಾಲಕರು ಮೀಟರ್ ಅಳವಡಿಸಿಕೊಳ್ಳಲು ಸಿದ್ದವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಚಾಲಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಒದಗಿಸದ ಕಾರಣ ಆಟೋ ಮೀಟರ್ ಸಮಸ್ಯೆ ಉಲ್ಬಣಗೊಂಡಿದೆ.
ಈ ಹಿಂದೆ ಆಟೋ ನಿಗದಿತ ದರವನ್ನು ಹೆಚ್ಚಿಸುವಂತೆ ಆಟೋ ಚಾಲಕರಿಂದ ಬೇಡಿಕೆಗಳು ಬಂದಿತ್ತು. ಆದ್ರೆ ಇನ್ನೂ ನಿಗದಿತ ದರ ಏರಿಕೆ ಮಾಡಲ್ಲ. ಇದರಿಂದ ಕೆಲ ಆಟೋ ಚಾಲಕರು ಮನಸೋಇಚ್ಚೆ ಪ್ರಯಾಣಿಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಇದರಿಂದ ಪ್ರತಿನಿತ್ಯ ಸುಲಿಗೆ ಆಗುತ್ತಿರುವ ಸಾರ್ವಜನಿಕರ ಹಣವನ್ನು ನಿಯಂತ್ರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ.



 ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.