ಹಾಸನ

ಗಣೇಶ ಚತುರ್ಥಿ ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸಲು ಪರಿಸರ ಅಧಿಕಾರಿ ಮನವಿ

Published On :

ಹಾಸನ: ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಸನ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಪಿ. ಬಸವರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
  ರಾಷ್ಟ್ರೀಯ ಹಬ್ಬವಾದ ಗಣೇಶ ಚತುರ್ಥಿಯನ್ನು ಮನೆ ಮನೆ, ಬಡಾವಣೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ  ರಾಷ್ಟ್ರಾದಂತ್ಯ ಆಚರಿಸುತ್ತಾರೆ. ಗಣೇಶಮೂರ್ತಿ  ಹೆಚ್ಚು ಆಕರ್ಷಕವಾಗಿ ಕಾಣಲು ರಾಸಾಯನಿಕ ಬಣ್ಣಗಳ ಬಳಕೆ ಇತ್ತೀಚೆಗೆ  ಹೆಚ್ಚಾಗಿದೆ ಹಾಗೂ ಗಣೇಶ ವಿಗ್ರಹಗಳ ಗಾತ್ರವು ಹೆಚ್ಚುತ್ತಾ ಬಂದಿದೆ. ಎರಡು ಮೂರರಿಂದ 23 ಅಡಿಗಳವರೆಗಿನ ವಿವಿಧ ಭಂಗಿಯ ಮೂರ್ತಿಗಳು ಮಾರುಕಟ್ಟೆಗೆ ಬರುತ್ತಿವೆ.
 ಇಂತಹ ಗಣೇಶನ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ಅಂತರ್ಜಲ, ಕುಡಿಯುವ ನೀರಿನ ಸೆಲೆ ಎಲ್ಲವೂ ಹಾಳಾಗುತ್ತದೆ.
  ವಿಷಕಾರಿ ರಾಸಾಯನಿಕ, ಲೋಹದ ಲೇಪದ, ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಗಣೇಶಮೂರ್ತಿ ಬಳಕೆ ಮಾಡಬೇಡಿ. ಸಾದಾ ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ವಿಗ್ರಹ ಪೂಜಿಸಿ.
  ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಿ. ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ. ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ ಎಂದು ಹೇಳಿದ್ದಾರೆ.
 ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ. ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ ಎಲ್ಲವೂ ಹಾಳಾಗುತ್ತವೆ.
 ಬದಲಿಗೆ ಬಕೆಟ್‌ನಲ್ಲಿ, ಸಂಚಾರಿ ವಿಸರ್ಜನಾ ವಾಹನದಲ್ಲಿ ಮತ್ತು ಸೂಚಿತ ಕರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಿರಿ. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿಯ ಹೊಗೆ ವಿಷಪೂರಿತ. ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ ಹಾಗೂ ಶಬ್ದದಿಂದ ಕಿವಿಗೆ ಹಾನಿಕರ ಎಂದು ತಿಳಿಸಿದ್ದಾರೆ.
ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ. ಕಸದ ವಾಹನ ಬಳಸಿ. ಹಬ್ಬದ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ.
  ಕುಡಿಯುವ ನೀರು ಸೇವಿಸುವ ಗಾಳಿ, ಅನ್ನ ಕೊಡುವ ನೆಲ, ನಮ್ಮ ಸುತ್ತಮುತ್ತಲ ಪರಿಸರವನ್ನು ಮಲಿನವಾಗದಂತೆ ಕಾಪಾಡುವುದು ಹಾಗೂ ಒಟ್ಟಾರೆ ಪರಿಸರ ಸಂರಕ್ಷಣೆಯ ಕಾರ್ಯ ಕೇವಲ ಒಬ್ಬರಿಂದ, ಇಬ್ಬರಿಂದ ಆಗುವ ಕೆಲಸವಲ್ಲ.
 ಅದು ಇಡೀ ಸಮುದಾಯದ ಜವಾಬ್ದಾರಿ. ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ಕಾರ್ಯೋನ್ಮುಖರಾಗಿ ಪರಿಸರಸ್ನೇಹಿ ಗಣಪತಿ ಪೂಜಿಸಿ ವಿಸರ್ಜಿಸುವಂತೆ ಅವರು ಗಣೇಶ ಭಕ್ತರನ್ನು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.