ಹಾಸನ

ಸುಂದರ ಕಟ್ಟಡ, ಸೌಲಭ್ಯ ನಾಸ್ತಿ...

Published On :

ಹಾಸನ: ಗುಣಮಟ್ಟದ ಶಿಕ್ಷಣ ನೀಡುವ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಅನೇಕ ಕಾಲೇಜುಗಳಿಗೆ ಬೃಹತ್ ಹಾಗೂ ಚೆಂದದ ಕಟ್ಟಡಗಳೇನೋ ಇವೆ. ವಿಚಿತ್ರವೆಂದರೆ ಆ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ -ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಜಿಲ್ಲೆಗೆ ವೈದ್ಯಕೀಯ, ಪಶು ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಸರ್ಕಾರಿ ಕಾನೂನು ಕಾಲೇಜುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಹಾಗೂ ಜೆಡಿಎಸ್ ಅಧಿಕಾರವಧಿಯಲ್ಲಿ ಮೀಸಲಿಟ್ಟಿದ್ದ ಅನುದಾನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿವೆ.
ಆದರೆ, ವೈದ್ಯಕೀಯ, ಪಶುವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜು ಕಟ್ಟಡಗಳು ಮೇಲ್ನೋಟಕ್ಕೆ ಹೊರಗಿನಿಂದ ಸುಂದರ ಹಾಗೂ ಬೃಹದಾಕಾರವಾಗಿ ಕಾಣುತ್ತವೆ. ಆದರೆ ಕಾಲೇಜಿನ ಒಳ ಹೋದರೆ ಯಾವ ಮಟ್ಟದಲ್ಲಿ ಕಟ್ಟಡಗಳು ನಿರ್ಮಾಣಗೊಂಡಿವೆ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಸತ್ಯ ದರ್ಶನವಾಗುತ್ತದೆ. ಜೆಡಿಎಸ್ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ರಾಜಕೀಯ ದ್ವೇಷದಿಂದಾಗಿ ಈ ಕಾಲೇಜುಗಳಿಗೆ ಸಮರ್ಪಕ ಅನುದಾನ ನೀಡದ ಕಾರಣ ಈ ಕಾಲೇಜುಗಳು ಮೂಲ ಸೌಕರ್ಯದಿಂದ ವಂಚಿತವಾಗಿವೆ.
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ:  ಆದ್ದರಿಂದ ರಾಜ್ಯದ ನಾನಾ ಭಾಗಗಳಿಂದ ಅಮಾಯಕ ವಿದ್ಯಾರ್ಥಿಗಳು ಮೂಲ ಸೌಕರ್ಯ ಹಾಗೂ ಮಾನ್ಯತೆ ಇಲ್ಲದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೂ ಅವರ ಪದವಿಗೆ ಮಾನ್ಯತೆ ಇಲ್ಲದಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಹ ಪರಿಸ್ಥಿತಿ ಈ ಕಾಲೇಜುಗಳ ವಿದ್ಯಾರ್ಥಿಗಳದ್ದಾಗಿದೆ.
ಮಲತಾಯಿ ಧೋರಣೆ: ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಂತೆ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡಾ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಅನುದಾನವನ್ನು ಕಾಲ ಕಾಲಕ್ಕೆ ನೀಡದೆ ಮಲತಾಯಿ ಧೋರಣೆ ತಾಳುವ ಲಕ್ಷಣಗಳು ತೋರುತ್ತಿವೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಶಾಸಕ ಎಚ್.ಡಿ.ರೇವಣ್ಣ ಬಗ್ಗೆ ಟೀಕೆ ಮಾಡುವವರೆ ನಿಜವಾದ ಸಂಘಟಕರು, ಪಕ್ಷದ ಹಿತೈಶಿಗಳು ಎಂದು ತಿಳಿದುಕೊಂಡಂತಿರುವ ಉಸ್ತುವಾರಿ ಸಚಿವರು, ಪಕ್ಷದ ಮುಖಂಡರು, ಅಬ್ಬರ ಮಾಡಿ ಹೋಗುತ್ತಾರೆ ವಿನಾ ರಚನಾತ್ಮಕವಾಗಿ ಅಭಿವೃದ್ಧಿ ಪರವಾಗಿ ಗಮನಹರಿಸುತ್ತಿಲ್ಲ ಎಂಬ ಟೀಕೆ ಹೆಚ್ಚಾಗುತ್ತಿದೆ.
ಪಶುವೈದ್ಯಕೀಯ ಕಾಲೇಜಿನ ಪರಿಸ್ಥಿತಿ: 2007ರಲ್ಲಿ ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯ ಆರಂಭಗೊಂಡಿತು. ಕಳೆದ 7 ವರ್ಷಗಳಲ್ಲಿ ಗಣನೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ಹೊಂದುವಲ್ಲಿ ಈ ಕಾಲೇಜು ಸಂಪೂರ್ಣವಾಗಿ ವಿಫಲಗೊಂಡಿದೆ. ಈ ಮಂದಗತಿಯ ಬೆಳವಣಿಗೆಯಿಂದಾಗಿ ಮಹಾವಿದ್ಯಾಲಯವು ಪಶು ವೈದ್ಯಕೀಯ ಮಂಡಳಿ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿದೆ.    
ಮಾನ್ಯತೆ ಇಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದೆ. ಮಂಡಳಿಯ ಸತತ ಎಚ್ಚರಿಕೆಗಳ ನಂತರವು ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯ ಮಂಡಳಿ ನಿಗದಿಪಡಿಸಿರುವ ಮಾನದಂಡಗಳನ್ನು ತಲುಪದೆ ಇದ್ದ ಕಾರಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೆವಿಸಿ ನೊಂದಣಿ ಪಡೆಯುವುದರಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಈ ಕಾಲೇಜಿನಲ್ಲಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ಪ್ರಮಾಣ ಪತ್ರ ಲಭ್ಯವಾಗದ ಕಾರಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕಾರ್ಮೋಡ ಆವರಿಸಿದೆ.
2009-10ನೇ ಸಾಲಿನಲ್ಲಿ ಪಶುವೈದ್ಯಕೀಯ ಮಂಡಳಿ ಸದಸ್ಯರು ವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ರೇಷ್ಮೆ ಇಲಾಖೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳ ಪರಿಸ್ಥಿತಿ ಕಂಡು ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಮಾನ್ಯತೆ ನೀಡಿಲ್ಲ. ಈಗಾಗಲೇ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೆವಿಸಿ ನೊಂದಣಿ ಪ್ರಮಾಣ ಪತ್ರ ನೀಡಿಲ್ಲ. ಮುಂದೆ ಪಾಸಾಗುವವರಿಗೂ ಪ್ರಮಾಣ ಪತ್ರ ಸಿಗುತ್ತದೆ ಎನ್ನುವ ಖಾತ್ರಿಯೂ ಇಲ್ಲದ ಕಾರಣ ಪದವಿಗೆ ಬೆಲೆ ಇಲ್ಲದಂತಾಗಿದೆ.
ವೈದ್ಯಕೀಯ ಕಾಲೇಜಿನ ಪರಿಸ್ಥಿತಿ: ನಗರದ ಹೃದಯ ಭಾಗದಲ್ಲಿ ವೈದ್ಯಕೀಯ ಕಾಲೇಜು ಬೃಹದಾಕಾರವಾಗಿ ನಿರ್ಮಾಣಗೊಂಡಿದೆ. ಮೇಲ್ನೋಟಕ್ಕೆ ಬೃಹದಾಕಾರವಾಗಿದ್ದರೂ ಕಾಲೇಜು ಮೂಲ ಸೌಕರ್ಯದಿಂದ ವಂಚಿತವಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಕೆಲವು ತಿಂಗಳ ಹಿಂದಷ್ಟೇ ಕಾಲೇಜಿಗೆ ಅವಶ್ಯಕವಿರುವ ಸೌಕರ್ಯ ಒದಗಿಸದಿದ್ದಲ್ಲಿ ಮಾನ್ಯತೆಯನ್ನು ರದ್ದುಪಡಿಸುವುದಾಗಿ ಸೂಚಿಸಿತ್ತು. ಪ್ರಸ್ತುತ ಕಾಲೇಜಿನಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೂಡಾ ಕೊರತೆ ಹೆಚ್ಚಾಗಿದೆ. ಜೊತೆಗೆ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅಗತ್ಯ ಉಪಕರಣಗಳ ಕೊರತೆ ಸಹ ಇರುವುದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಉಂಟಾಗಿದೆ. ಇದರಿಂದ ಈ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಇವು ಯಾವ ರೀತಿ ಪರಿಣಾಮ ಬೀರಬಹುದು ಎಂಬ ಅತಂಕ ವಿದ್ಯಾರ್ಥಿಗಳಲ್ಲಿ ಆವರಿಸಿದೆ.
ಸರ್ಕಾರಿ ಕಾನೂನು ಕಾಲೇಜು: ಸರ್ಕಾರಿ ಕಾನೂನು ಕಾಲೇಜು ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದು, ಕಳೆದ 5 ವರ್ಷದಿಂದ ಸರ್ಕಾರಿ ಕಾನೂನು ಕಾಲೇಜಿನ ಸ್ವಂತ ಕಟ್ಟಡದ ಕಾಮಗಾರಿ ನಡೆದು ಮುಕ್ತಾಯಗೊಂಡಿದೆ.
   ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಸಾಧ್ಯವಿದ್ದರೂ ಇನ್ನೂ ಖಾಸಗಿ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿ ವಿಶಾಲವಾದ ಕೊಠಡಿಗಳು, ಗ್ರಂಥಾಲಯ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಇನ್ನಿತರ ಸಮಸ್ಯೆಗಳಿಂದ ಕೂಡಿದೆ. ನೂತನ ಕಟ್ಟಡ ನಿರ್ಮಾಣಗೊಂಡಿದ್ದರೂ ಅದಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸದ ಕಾರಣ ಸರ್ಕಾರಿ ಕಾನೂನು ಕಾಲೇಜಿನ ತರಗತಿಗಳು ನೂತನ ಕಟ್ಟಡದಲ್ಲಿ ಪ್ರಾರಂಭವಾಗಿಲ್ಲ. ಇದರಿಂದ ಕಾನೂನು ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಈ ಕಾಲೇಜುಗಳತ್ತ ಗಮನ ಹರಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸ ಬೇಕಾಗಿದೆ.

 ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.