ಕಲ್ಗುಂಡಿ ಭೂತಾಳೆ ಮರದ ನಿಲುವಿನ ಗೌರಮ್ಮ ದೇವಿ
ಅರಸೀಕೆರೆ: ತಾಲೂಕಿನ ಭೂತಾಳೆ ಮರದಲ್ಲಿ ಮಾಡಿರುವ ನಿಂತ ನಿಲುವಿನ ಗೌರಮ್ಮ ದೇವಿಯನ್ನು ಭಕ್ತರು ದರ್ಶನ ಪಡೆಯಬೇಕಾದರೆ, ತಾಲೂಕಿನ ಕಣಕಟ್ಟೆ ಹೋಬಳಿ ಕಲ್ಗುಂಡಿ ಗ್ರಾಮಕ್ಕೆ ಭಾದ್ರಪದ ತದಿಗೆಯ ಗೌರಿ ಹಬ್ಬದಿಂದ 21 ದಿನಗಳು ಪೂಜಿಸಲ್ಪದೆ. ತಾಲೂಕಿನ ಬಾಣಾವರ ಮಾರ್ಗದ ಕಲ್ಲುಸಾದರಹಳ್ಳಿ ಬಳಿಯಿರುವ ಸಣ್ಣ ಗ್ರಾಮವೇ ಕಲ್ಗುಂಡಿ ಗ್ರಾಮ. ಶಕ್ತಿದೇವತೆ ದರ್ಶನ ಪಡೆಯಲು ಸಾವಿರಾರು ಭಕ್ತರ ಸಮೂಹ ಹರಿದು ಬರುತ್ತದೆ. ಈ ಧಾರ್ಮಿಕ ಕ್ಷೇತ್ರದಲ್ಲಿ ಒಟ್ಟು 16 ದೇವಾಲಯಗಳಿದ್ದು, ಎಲ್ಲಾ ದೇವರಿಗೂ ಪ್ರತಿನಿತ್ಯ ಪೂಜೆ ಕಾರ್ಯಗಳು ವಿಶೇಷವಾಗಿ ನಡೆಯುತ್ತಿರುತ್ತದೆ. ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ವಿಶೇಷವಾದ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಭಾದ್ರಪದ ಗೌರಿ ಹಬ್ಬದಂದು ಗೌರಿಗುಡಿಯಲ್ಲಿ ಶಿರಸ್ಸಿನ ರೂಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ 18 ದಿನಗಳ ಕಾಲ ಸರದಿ ಪ್ರಕಾರ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ತದನಂತರ 19ನೇ ದಿನದಂದು ಸೂರ್ಯೋದಯಕ್ಕೆ ಮುಂಚಿತವಾಗಿ ಭೂತಾಳೆ ಗೌರಮ್ಮನಿಗೆ ಕಡಲೆ ಹಿಟ್ಟು, ಬೆಣ್ಣೆಯಿಂದ ತಿದ್ದಿ ನಿಂತ ನಿಲುವಿನ ಸ್ವರ್ಣ ಗೌರಿ ಸ್ವರೂಪವನ್ನು ನೀಡಲಾಗುತ್ತದೆ. ಸ್ವರ್ಣ ಗೌರಿ ದೇವಿಯ ವಿಸರ್ಜನಾ ಮಹೋತ್ಸವವು ಅ.27ರಿಂದ 29ರವರೆಗೆ ನಡೆಯಲಿದ್ದು, ನಾಡಿನ ಮೂಲೆ ಮೂಲೆಗಳಿಂದ ಭಕ್ತರ ಸಾಗರ ಇಲ್ಲಿಗೆ ಹರಿದು ಬರಲಿದೆ.
ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ
ಹಾಸನ: ಒಬ್ಬ ವ್ಯಕ್ತಿಯ ಯಶಸ್ಸಿಗೆ ಶಿಕ್ಷಕನ ಪಾತ್ರ ಮುಖ್ಯವಾಗಿರುತ್ತದೆ ಎಂದು ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ವಿ. ಲಕ್ಷ್ಮಿನಾರಾಯಣ್ ಹೇಳಿದರು. ನಗರದ ಸಂಸ್ಕತ ಭವನದಲ್ಲಿ ಸುಜಲ ಎಜ್ಯುಕೇಷನ್ ಅಕಾಡೆಮಿ ಮತ್ತು ಸುಜಲ ಕಾಲೇಜ್ ಆಫ್ ಕಾಮರ್ಸ್ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ದಿನಾಚರಣೆಯಂತಹ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ಬೆಳೆಸುತ್ತದೆ. ರಾಧಾಕೃಷ್ಣನ್ ಅವರು ಮಹಾನ್ ತಜ್ಞರಾಗಿದ್ದರು. ಅವರಲ್ಲಿ ಎಲ್ಲಾ ತತ್ವಗಳ ಗುಣಗಳು ಅಡಗಿದ್ದು, ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿದ್ದರು ಎಂದರು. ಪತ್ರಕರ್ತ ಜೆ.ಆರ್. ಕೆಂಚೇಗೌಡ ಮಾತನಾಡಿ, ಸಮಾಜದಲ್ಲಿರುವ ಎಲ್ಲಾ ಹುದ್ದೆಗಳಲ್ಲಿ ಪವಿತ್ರ ಸ್ಥಾನ ಇರುವುದು ಶಿಕ್ಷಕರ ವೃಂದಕ್ಕೆ. ಅನೇಕ ವಿದ್ಯಾರ್ಥಿಗಳನ್ನು ಉತ್ತಮ ಮನುಷ್ಯನಾಗಿ ಕೊಂಡೊಯ್ಯುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಿದರು. ನಿವೃತ್ತ ಶಿಕ್ಷಕ ಕೃಷ್ಣೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಡಿ.ಸಿ. ಅಶ್ವತ್ಥನಾರಾಯಣಸ್ವಾಮಿ ಮತ್ತು ರಂಗೇಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸುಜಲ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ. ಸುಬ್ಬೇಗೌಡ, ಕಾರ್ಯದರ್ಶಿ ಎಸ್. ಲೋಕೇಶ್, ಸುಜಲ ಕಾಲೇಜ್ ಆಫ್ ಕಾಮರ್ಸ್ ಪ್ರಾಂಶುಪಾಲ ಕುಮಾರ್, ಸುಜಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜುಲ್ಫಿಕರ್ ಅಹ್ಮದ್ ಇತರರು ಇದ್ದರು.
ಕ್ಯಾಂಟೀನ್ ಸೌಲಭ್ಯ
ಹಾಸನ: ಪ್ರಪಂಚದ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಯೋಧರು ಮತ್ತು ಯೋಧರ ವಿಧವೆಯರಿಗೆ ಸಿ.ಎಸ್.ಡಿ ಕ್ಯಾಂಟೀನ್ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಅದನ್ನು ಪಡೆಯಲು ಇಚ್ಛೆಯುಳ್ಳ ಯೋಧರು ಮತ್ತು ಯೋಧರ ವಿಧವೆಯರು ತಮ್ಮ ಮೂಲ ಡಿಸ್ಚಾರ್ಜ್ ಪುಸ್ತಕ ಹಾಗೂ ಗುರುತಿನ ಚೀಟಿಯೊಂದಿಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ ಇವರಿಗೆ ಸೆ.16ರೊಳಗಾಗಿ ಸಂಪರ್ಕಿಸುವಂತೆ ವಿನಂತಿಸಲಾಗಿದೆ. ವಿವರಕ್ಕೆ ದೂ. 08172- 250465.
ಅಧಿಕಾರ ಸ್ವೀಕಾರ
ಸಕಲೇಶಪುರ: ನೂತನ ತಹಸೀಲ್ದಾರ್ ಆಗಿ ಎನ್. ಪಾರ್ವತಿ ಬುಧವಾರ ಮಿನಿ ವಿಧಾನಸೌಧದಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು. ಇದುವರೆಗೆ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಬಾಬು ದೇವಾಡಿಗ ಅವರಿಗೆ ಕಾರ್ಕಳಕ್ಕೆ ವರ್ಗವಾಗಿದ್ದು, ಅವರಿಗೆ ಕಂದಾಯ ಇಲಾಖೆಯ ನೌಕರರ ವರ್ಗದಿಂದ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

