ಅಜ್ಜಪ್ಪ ಎಪಿಎಂಸಿ ನೂತನ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಅರಸೀಕೆರೆ ಸೆ.13
ಈಗಾಗಲೇ ನಾಫೆಡ್ ಕೇಂದ್ರದಿಂದ ಕಾರ್ಡ್ಗಳನ್ನು ಹೊಂದಿರುವ ಎಲ್ಲಾ ರೈತರಿಂದ ಬೆಂಬಲ ಬೆಲೆಗೆ ಕೊಬ್ಬರಿಯನ್ನು ಖರೀದಿ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರುವ ಕಾರಣ ತಾಲೂಕಿನ ರೈತರು ಯಾವುದೇ ರೀತಿಯ ಅತಂಕಕ್ಕೆ ಒಳಗಾಗಬಾರದು ಎಂದು ಶಾಸಕ ಕೆ.ಎಂ.ಶಿವಲಿಂಗೌಡ ಶುಕ್ರವಾರ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆಂಡೇಕೆರೆ ಅಜ್ಜಪ್ಪ ಹಾಗೂ ಉಪಾಧ್ಯಕ್ಷ ಸನಾವುಲ್ಲಾ ಅವರನ್ನು ಅಭಿನಂದಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕ್ಷೇಮಾಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಅನುದಾನದ ಮೂಲಕ ತಂದು ತಾಲೂಕಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿನ ರೈತ ಪ್ರತಿನಿಧಿಗಳಾದ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಪಕ್ಷಾತೀತವಾಗಿ ಪ್ರಾಮಾಣಿಕ ಪ್ರಯತ್ನ ಮಾಡವ ಜವಾಬ್ದಾರಿಯನ್ನು ಹೊಂದಬೇಕೆಂದರು.
ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು ಕುಸಿತ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿನ ರೈತರ ಪರವಾಗಿ ತೆಂಗುಬೆಳೆಗಾರರ ಪ್ರದೇಶದ ಶಾಸಕರೊಂದಿಗೆ ತಾವು ಸದನದಲ್ಲಿ ಧ್ವನಿ ಎತ್ತಿದ ಕಾರಣ ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡಿ ರೈತರಿಂದ ಖರೀದಿಸಲು ನಾಫೆಡ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ ಸೆ.16ಕ್ಕೆ ಈ ಕೇಂದ್ರ ಮುಚ್ಚುತ್ತದೆ ಎಂಬ ವಿಷಯ ತಿಳಿದು ತಾಲೂಕಿನ ಅನೇಕ ರೈತರು ಅತಂಕಕ್ಕೆ ಒಳಗಾಗಿದ್ದಾರೆ, ಆದರೆ ಇದುವರೆಗೂ ರೈತರಿಗೆ ಕೇಂದ್ರದ ಮೂಲಕ ನೀಡಿರುವ ನಿಗದಿತ ದಿನದ ಕಾರ್ಡುಗಳನ್ನು ಹೊಂದಿರುವ ಎಲ್ಲಾ ರೈತರಿಂದ ಕೊಬ್ಬರಿ ಖರೀದಿಸಲು ತಾವು ಆಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಆದ್ದರಿಂದ ಯಾರು ಅತಂಕ ಪಡುವ ಅವಶ್ಯಕವಿಲ್ಲ ಎಂದು ಹೇಳಿದರು.
ಇದುವರೆಗೂ ಇಲ್ಲಿನ ಅಧ್ಯಕ್ಷ ಸ್ಥಾನ ಹಿಂದುಳಿದ ಯಾದವ ಜನಾಂಗಕ್ಕೆ ದೊರೆತಿಲ್ಲ ಎಂಬ ಬಗ್ಗೆ ಈ ಸಮಾಜದ ಜನರಲ್ಲಿ ಅಸಮದಾನ ಇದ್ದು, ಈ ಸಮಸ್ಯೆ ಕೂಡ ಇಂದು ಬಗೆಹರಿದಂತಾಗಿದೆ. ನೂತನ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ನಾನಾ ಯೋಜನೆಗಳ ಜಾರಿಗೆ ಕ್ರಿಯಾಶೀಲರಾಗಬೇಕೆಂದು ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯ ಕಲ್ಲಹಳ್ಳಿ ನಾಗರಾಜು ಮಾತನಾಡಿ, ಮಾರುಕಟ್ಟೆಗೆ ಬರುವ ಮುಗ್ಧ ರೈತರನ್ನು ಕೆಲವರು ವಂಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ರೈತ ಪ್ರತಿನಿಧಿಗಳಾದ ನಾವು ಹೆಚ್ಚಿನ ಕಾಳಜಿ ವಹಿಸುವ ಮೂಲಕ ಶೋಷಣೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕೆಂದರು.
ತರಕಾರಿ ಸಗಟು ಮಾರುಕಟ್ಟೆ ಪ್ರಾಂಗಣದಲ್ಲಿ ಕೊಳೆತ ತರಕಾರಿಗಳ ರಾಶಿ ಪರಿಣಾಮ ದುರ್ವಾಸನೆ ಎಲ್ಲೆಡೆಯಲ್ಲಿ ವ್ಯಾಪಿಸಿದ್ದು, ತರಕಾರಿ ಮಾರಾಟಕ್ಕೆ ಪ್ರತ್ಯೇಕ ಪ್ರಾಂಗಣವನ್ನು ನಿರ್ಮಿಸಲು ಸಲಹೆ ನೀಡಿ, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಬಿಜೆಪಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್ ಅಭಿನಂದನೆ ಸಲ್ಲಿಸಿದರು. ಮುರುಂಡಿ ಶಿವಯ್ಯ, ಆಶೋಕ್, ಬಂಡಿಗೌಡ್ರ ರಾಜಣ್ಣ ಹಾಗೂ ಪುರಸಭೆ ಅಧ್ಯಕ್ಷ ಮೋಹನ್ಕುಮಾರ್ ಮತ್ತು ಎಪಿಎಂಸಿ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

