ವೈಜ್ಞಾನಿಕ ಕೃಷಿ ಪದ್ಧತಿ ಕುರಿತು ಅರಿವು ಮೂಡಿಸಿ
ಕನ್ನಡಪ್ರಭ ವಾರ್ತೆ ಹಾಸನ ಸೆ.13
ಕೃಷಿ ಚಟುವಟಿಕೆಯಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ವಹಿಸುವಂತೆ ರಾಜ್ಯ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಮಣ್ಣಿನ ಗುಣಲಕ್ಷಣದ ಸ್ಥಿತಿಗತಿ ಅರಿತು ಗೊಬ್ಬರ ಬಳಕೆ ಮಾಡಲು ರೈತರಿಗೆ ಸಲಹೆ ನೀಡುವಂತೆ ತಿಳಿಸಿ, ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆಗೆ ಅರಿವು ಮೂಡಿಸಬೇಕೆಂದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ, ವೈ.ಎನ್.ರುದ್ರೇಶಗೌಡ ಹಾಗೂ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ ನಕಲಿ ಗೊಬ್ಬರ ಹಾಗೂ ಕಳಪೆ ಬಿತ್ತನೆ ಬೀಜ ವಿತರಣೆಯಾಗುತ್ತಿದೆ, ಈ ಬಗ್ಗೆ ಗಂಭೀರ ಕ್ರಮ ಜರುಗಿಸಬೇಕು ಎಂದರು.
ರೈತರು ಆಯ್ಕೆ ಮಾಡಿಕೊಳ್ಳುವ ಯಾವುದೇ ಬಿತ್ತನೆ ಬೀಜಕ್ಕೆ ಶೇಕಡ 50 ರಿಯಾಯ್ತಿ ಒದಗಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮನವಿ ಮಾಡಿದರು. ರೈತ ಸಂಪರ್ಕ ಕೇಂದ್ರದಲ್ಲಿ ಸವಲತ್ತುಗಳ ವಿತರಣೆಗೆ ಸಿಬ್ಬಂದಿ ಅಗತ್ಯವಿದೆ ಎಂದರು.
ಫಲಾನುಭವಿಗಳ ಪಟ್ಟಿ ಪ್ರಕಟಿಸಬೇಕು: ಎಸ್.ಇ.ಪಿ.ನಲ್ಲಿ ಸವಲತ್ತು ಪಡೆದ ಫಲಾನುಭವಿಗಳ ಪಟ್ಟಿ ಪ್ರಕಟಿಸಬೇಕು ಎಂದರಲ್ಲದೆ, ವಿಧಾನ ಸಭಾ ಕ್ಷೇತ್ರವಾರು ಫಲಾನುಭವಿಗಳ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ಬೆಳೆ ಹಾನಿಯಾಗಿದೆ, ಪರಿಹಾರ ಕೊಡಲು ಕ್ರಮವಹಿಸಲಾಗಿದೆಯೇ ಎಂದು ಸಚಿವರು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, 4 ಪ್ರಾಣ ಹಾನಿಯಾಗಿದ್ದು, 52 ಜಾನುವಾರು, 265 ಮನೆಗಳು ಹಾಳಾಗಿವೆ. 50 ಲಕ್ಷ ರು. ಪರಿಹಾರ ನೀಡಲಾಗಿದೆ. 4 ಸಾವಿರ ಬೆಳೆ ಹಾನಿಯಾಗಿದೆ. 3248 ರೈತರಿಗೆ ಪರಿಹಾರ ನೀಡಬೇಕಾಗಿದ್ದು, ಹಣ ಲಭ್ಯವಿದೆ ಎಂದು ತಿಳಿಸಿದರಲ್ಲದೆ, ಶೀಘ್ರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಪರಿಹಾರ ಧನ ವಿತರಣೆಗೆ ಮಾನದಂಡ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಶಾಸಕ ಎ.ಮಂಜು ಮಾತನಾಡಿ ಮಳೆಯಿಂದ ಹೊಗೆಸೊಪ್ಪು ಬೆಳೆ ನಷ್ಟವಾಗಿ ಪರಿಹರವನ್ನು ಹೆಚ್ಚಿಸಬೇಕು ಎಂದರಲ್ಲದೆ ಮಳೆಯಿಂದ ಹಾನಿಯಾದ ಮನೆಗಳಿಗೆ ನೀಡುವ ಪರಿಹಾರವನ್ನು ಸಹ ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸಕಲೇಶಪುರ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್ ಪ್ರದೇಶ ಬತ್ತದ ಬೆಳೆಯಲ್ಲಿ 6 ಸಾವಿರ ಹೆಕ್ಟೇರ್ ಸಂಪೂರ್ಣ ಬೆಳೆ ನಾಶವಾಗಿದೆ. ಕಾಫಿ, ಏಲಕ್ಕಿ, ಮೆಣಸು ಬೆಳೆಯೂ ನಾಶವಾಗಿದೆ ಎಂದು ಹೇಳಿದರು.
ಶಾಸಕ ವೈ.ಎನ್.ರುದ್ರೇಶಗೌಡ ಮಾತನಾಡಿ, ಕಾಫಿ ಬೆಳೆಗಾರರಿಗೆ ಶೇ. 90ರಷ್ಟು ಸರ್ಕಾರ ಪರಿಹಾರ ನೀಡಬೇಕು. ಬೇಲೂರು ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ ಎಂದು ತಿಳಿಸಿದರು.
7 ವರ್ಷದಿಂದ ಅಂಗಮಾರಿ ರೋಗ: ಜಿಲ್ಲೆಯಲ್ಲಿ 7 ವರ್ಷದಿಂದ ಅಂಗಮಾರಿ ರೋಗದಿಂದ ಆಲೂ ಬೆಳೆಯಲ್ಲಿ 400 ಕೋಟಿ ರು ನಷ್ಟವಾಗಿದೆ. ರೈತರಿಗೆ ಪ್ರಮಾಣೀಕೃತ ಬಿತ್ತನೆ ಆಲೂ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಭೆ ಕರೆದು ಕ್ರಮ ವಹಿಸಬೇಕಾಗಿದೆ ಎಂದರು.
ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ರೈತರಿಗೆ ಪ್ರಮಾಣೀಕೃತ ಬಿತ್ತನೆ ಆಲೂ ಒದಗಿಸಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕೋರಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಸಿ.ಎನ್.ಬಾಲಕೃಷ್ಣ ಮಾತನಾಡಿ, ಕೊಬ್ಬರಿ ಖರೀದಿಗೆ ಸೆ.16 ಕೊನೆ ದಿನವೆಂದು ನಿಗದಿಪಡಿಸಿದ್ದು, ಕೊಬ್ಬರಿ ಖರೀದಿಗೆ ಅವಧಿ ವಿಸ್ತರಿಸಿ ಈಗಾಗಲೇ ನೋಂದಣಿಯಾಗಿರುವ ರೈತರಿಗೆ ಅವಕಾಶ ಕಲ್ಪಿಸುವಂತೆ ಸಚಿವರನ್ನು ಕೋರಿದರು.
ಜಿಲ್ಲಾಧಿಕಾರಿಯವರು ಸರ್ಕಾರದ ಸುತ್ತೋಲೆ ಆಧಾರದ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ತೋಟಗಾರಿಕೆ ಸಚಿವರೊಂದಿಗೆ ಮಾತನಾಡಿ ನೋಂದಣಿ ಮಾಡಿಸಿದ ರೈತರ ಕೊಬ್ಬರಿ ಖರೀದಿಗೆ ಆದೇಶ ನೀಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದು ತೇವಾಂಶದ ಕೊರತೆಯಿಂದಾಗಿ ಶೇಕಡ 90ರಷ್ಟು ತೆಂಗಿನ ಮರಗಳು ಹಾಳಾಗಿದ್ದು, ಶೇಕಡ 10ರಷ್ಟು ರೋಗದಿಂದ ತೆಂಗಿನ ಮರ ಹಾಳಾಗಿದೆ. ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ನದಿ ಮೂಲದಿಂದ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡುವಂತೆ ಅವರು ಸಚಿವರಲ್ಲಿ ಮನವಿ ಮಾಡಿದರು.
ರೈತರ ಜೀವನ ಮಟ್ಟ ಸುಧಾರಿಸಲು ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಅಧ್ಯಯನ ವರದಿ ನೀಡುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸಚಿವರು ತಿಳಿಸಿ, ನುಸಿ ರೋಗದ ಬಗ್ಗೆ ರೈತರಿಗೆ ಅರಿವು ಮೂಡಿಸುವುದರ ಜೊತೆಗೆ ಅದನ್ನು ಗುಣಪಡಿಸುವ ಬಗ್ಗೆ ಮಾಹಿತಿ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಸ್ಥಾಯಿ ಸಮಿತಿ ಸದಸ್ಯರು ಮತ್ತು ನಾನಾ ಇಲಾಖೆ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

