ಹಾಸನ

ನಿಯಮಕ್ಕೆ ಡೋಂಟ್ ಕೇರ್

Published On :

ಹಾಸನ: ಮರಳು ಹಾಗೂ ಇಟ್ಟಿಗೆ ತುಂಬಿದ ಲಾರಿಯವರು ಸಂಚಾರಿ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಅಡ್ಡಾದಿಡ್ಡಿ ಸಂಚಾರಕ್ಕೆ ಬ್ರೇಕ್ ಹಾಕುತ್ತಿಲ್ಲ. ಈ ಲಾರಿಗಳ ಹಾವಳಿಯಿಂದ ನಗರದ ರಸ್ತೆ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿದ್ದು, ಜತೆಗೆ ಬೈಪಾಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿವೆ.
ನಗರದ ಚನ್ನಪಟ್ಟಣ ಬಳಿಯ ಬೈಪಾಸ್ ವೃತ್ತ ಎಂದ ಕೂಡಲೇ ಸಾಮಾನ್ಯವಾಗಿ ನೆನಪಿಗೆ ಬರೋದು ಮರಳು ತುಂಬಿದ ಲಾರಿಗಳ ಸಾಲು ಸಾಲು. ಇಲ್ಲಿನ ರಸ್ತೆಯ ಎರಡೂ ಕಡೆಗಳಲ್ಲಿ ಮರಳು ತುಂಬಿದ ಲಾರಿಗಳು ನಿಲ್ಲುತ್ತಿದ್ದು, ಇದರಿಂದ ಬೇರೆ ವಾಹನಗಳು ಪ್ರಯಾಸದ ನಡುವೆ ಈ ವೃತ್ತವನ್ನು ದಾಟ ಬೇಕಾಗಿದೆ.
ಬೈಪಾಸ್ ವೃತ್ತ ದಾಟುವುದೆಂದರೆ ಸಾರ್ವಜನಿಕರಿಗೆ ನರಕವನ್ನೇ ದಾಟಿದ ಅನುಭವವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳು ಕಾಣಿಸದೆ ಪ್ರತಿನಿತ್ಯ ಅಪಘಾತಗಳು ಹೆಚ್ಚುತ್ತಿವೆ. ಮರಳು ಲಾರಿ ನಿಲುಗಡೆಯಿಂದ ಸಮಸ್ಯೆ ದಿನೇದಿನೇ ಹೆಚ್ಚುತ್ತಿದೆ. ಈ ವೃತ್ತದಲ್ಲಿ ಮರಳು ಹಾಗೂ ಇಟ್ಟಿಗೆ ತುಂಬಿದ ಲಾರಿಗಳ ನಿಲುಗಡೆಗೆ ಜಿಲ್ಲಾಡಳಿತ ಅವಕಾಶ ನೀಡಬಾರದೆಂದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ.
ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮರಳು ಸಾಗಣೆ ಲಾರಿಗಳಿಗೆ ಜಿಲ್ಲಾಡಳಿತವೇ ನಂಬರ್‌ಗಳನ್ನು ನೀಡಿದೆ. ಇಂತಿಷ್ಟೇ ದರಕ್ಕೆ ಮಾರಾಟ ಮಾಡಬೇಕೆಂಬ ದರವನ್ನೂ ನಿಗದಿ ಮಾಡಿದೆ. ಆದರೆ ಮರಳು ಲಾರಿ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಲ್ಲ. ಪರಿಣಾಮವಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಹೈಟೆಕ್ ಬಸ್ ನಿಲ್ದಾಣ ಅನತಿ ದೂರದಲ್ಲಿರುವ ಚನ್ನಪಟ್ಟಣ ಬೈಪಾಸ್ ವೃತ್ತ ಸದಾ ಜನನಿಬಿಡ ಪ್ರದೇಶ. ಅದರಲ್ಲೂ ಬೆಂಗಳೂರು-ಮಂಗಳೂರು ಹಾಗೂ ಮೈಸೂರು-ಹಾಸನ ರಸ್ತೆಯ ಪ್ರಮುಖ ವೃತ್ತವಾಗಿದ್ದು, ವಾಹನ ದಟ್ಟಣೆಯೂ ಹೆಚ್ಚು. ದಿನವಿಡೀ ಎಡಬಿಡದೆ ಸಾವಿರಾರು ವಾಹನ ಸಂಚಾರ ಇರುವ ಈ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣಕ್ಕೆ ಭಾರೀ ವಾಹನಗಳು ಕೂಡ ಈ ವೃತ್ತದ ಮೂಲಕವೇ ಸಂಚರಿಸಬೇಕು.
ಹೆಸರಿಗೆ ಮಾತ್ರ ಇದು ಚತುಷ್ಪಥ ರಸ್ತೆಯಾಗಿದ್ದು, ವೃತ್ತದಲ್ಲಿ ಎರಡು ವಾಹನ ಸಂಚಾರಕ್ಕೂ ಜಾಗವಿಲ್ಲ. ವೃತ್ತದಿಂದ ನಾಲ್ಕು ಕಡೆಗೆ ಸಂಚರಿಸುವ ರಸ್ತೆಯ ಎರಡೂ ಬದಿಯಲ್ಲಿ ಮರಳು ಲಾರಿಗಳು ಸಾಲುಗಟ್ಟಿ ನಿಂತಿರುತ್ತವೆ. ರಸ್ತೆ ಬದಿಯ ಫುಟ್‌ಪಾತ್ ಮೇಲೆ ಲಾರಿ ನಿಲುಗಡೆಯಾದರೂ ಸಮಸ್ಯೆಯಿಲ್ಲ. ಆದರೆ ರಸ್ತೆ ಬದಿಯಲ್ಲೇ ಲಾರಿಗಳ ನಿಲುಗಡೆ ಮಾಡಲಾಗುತ್ತಿದ್ದು, ಬೇರೆ ವಾಹನಗಳ ಸವಾರರಿಗೆ ಈ ವೃತ್ತ ದಾಟುವುದೆಂದರೆ ಹರಸಾಹಸದ ಕೆಲಸವೇ ಸೈ.
ಮೈಸೂರು ಮತ್ತು ಹಾಸನ ಕಡೆಯಿಂದ ಬರುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿರುವ ವಾಹನಗಳು ಕಾಣಿಸಲು ಅವಕಾಶವೇ ಇಲ್ಲ. ಹಾಗಾಗಿ ಪ್ರತಿನಿತ್ಯ ಇಲ್ಲಿ ಅಪಘಾತಗಳು ತಪ್ಪಿಲ್ಲ. ಪದೇಪದೇ ಸಂಭವಿಸುತ್ತಿರುವ ಅಪಘಾತದಲ್ಲಿ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ರಿಪೇರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರಿಂದ ವಾಹನಗಳು ಸದ್ಯ ನಿಧಾನವಾಗಿ ಚಲಿಸುತ್ತಿದ್ದವು.
ವಿಪರ್ಯಾಸ ಅಂದ್ರೆ ರಸ್ತೆ ಕಾಮಗಾರಿ ಇಲ್ಲಿ ಪೂರ್ಣಗೊಂಡಿರುವುದರಿಂದ ವಾಹನಗಳು ವೇಗವಾಗಿ ಚಲಿಸಲಿತ್ತವೆ. ಇದರಿಂದ ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಪಾದಚಾರಿಗಳು ಜೀವ ಬಿಗಿ ಹಿಡಿದುಕೊಂಡು  ಸಂಚರಿಸಬೇಕಾದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಲಾರಿಗಳು ರಸ್ತೆ ಬದಿಯಲ್ಲಿಯೇ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದು ಒಂದೆಡೆಯಾದರೇ ಇನ್ನೂ ಮರಳು ತುಂಬಿದ ಲಾರಿಯಿಂದ ನೀರು ರಸ್ತೆಯ ಮೇಲೆ ಇಳಿಯುವುದರಿಂದ ರಸ್ತೆಗಳು ಹಾಳಾಗುತ್ತಿದೆ.
ಮರಳು ತುಂಬಿದ ಲಾರಿಗಳು ನಿಲ್ಲಿಸಿದ ಕಡೆಗಳಲ್ಲಿ ನೀರು ಇಳಿಯುವುದರಿಂದ ರಸ್ತೆಗಳಲ್ಲಿ ಕೆಸರು ನಿರ್ಮಾಣವಾಗುತ್ತಿದೆ. ಬೇಸಿಗೆಯಲ್ಲಿ ಧೂಳು ಹಾಗೂ ಕೆಸರಿನ ನಡುವೆ ವಾಹನ ಸವಾರರು ನಿತ್ಯ ಪರಿತಪಿಸಬೇಕಾಗಿದೆ. ರಸ್ತೆಯಲ್ಲೇ ನಿಲ್ಲುವ ಮರಳು ಲಾರಿಗಳ ವಿರುದ್ಧ ಕ್ರಮಕ್ಕೆ ಪೊಲೀಸರಾಗಲೀ, ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮರಳು ಲಾರಿಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿ ರಸ್ತೆ ಸಂಚಾರ ಸುಗಮಕ್ಕೆ ಅನುವು ಮಾಡಿಕೊಡಬೇಕಾಗಿದೆ.

 ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.