ಹಾಸನ

ಬೇಲೂರು ತಾಲೂಕಿನಲ್ಲಿ ಭಾರಿ ಮಳೆ

Published On :

ಕನ್ನಡಪ್ರಭ ವಾರ್ತೆ, ಬೇಲೂರು, ಸೆ.14
ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ವೀರದೇವನಹಳ್ಳಿಯಲ್ಲಿ ಶುಕ್ರವಾರ ಹಸು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಅಸುನೀಗಿರುವ ಧಾರುಣ ಘಟನೆ ವರದಿಯಾಗಿದೆ. ತಾಲೂಕಿನ ಚೀಲನಾಯಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರದೇವನಹಳ್ಳಿಯ ವಿ.ಎಂ.ರಮೇಶ್ ಎಂಬುವರ ಜಮೀನಿನಲ್ಲಿದ್ದ ಹಸು ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಅರ್ಧ ಕಿ.ಮೀ. ದೂರ ಕೊಚ್ಚಿ ಹೋಗಿ, ನಂತರ ಹಳ್ಳದ ನೀರಿನಲ್ಲಿ ಉಸಿರು ಕಟ್ಟಿ  ಸಾವನ್ನಪ್ಪಿದೆ.
ಕೃಷಿಕ ರಮೇಶ ಮಾತನಾಡಿ, ನಮಗೆ ಸ್ವಲ್ಪ ಜಮೀನುಯಿದೆ. ಎರಡು ವರ್ಷದ ಹಿಂದೆ 40 ಸಾವಿರ ರು. ನೀಡಿ ಹಸು ತಂದು ಡೈರಿಗೆ ಹಾಲು ಹಾಕಿ ಜೀವನ ಸಾಗಿಸುತ್ತಿದ್ದೆ. ಶುಕ್ರವಾರ ಸುರಿದ ಭಾರಿ ಮಳೆಗೆ ನಮ್ಮ ಹಸು ಕೊಚ್ಚಿ ಹೋಗಿ ಅಸು ನೀಗಿರುವುದು ತುಂಬಾ ನೋವು ತಂದಿದೆ.
ಕಳೆದ ವಾರವಷ್ಟೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ದಿನಕ್ಕೆ 12 ಲೀಟರ್ ಹಾಲು ಕೊಡುತ್ತಿತ್ತು. ವರ್ಷದಲ್ಲಿ 60 ರಿಂದ 70 ಸಾವಿರ ರು. ಸಂಪಾದನೆ ಇತ್ತು. ಹಸು ಈಗ ಇಲ್ಲವಾಗಿದ್ದು, ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮದ ರವಿ, ಚಂದ್ರೇಗೌಡ, ಅಣ್ಣೇಗೌಡ ಮುಂತಾದವರು ಇದ್ದರು.
ಸ್ಥಳಕ್ಕೆ ಬಾರದ ಅಧಿಕಾರಿಗಳು:  ಶುಕ್ರವಾರ ರಾತ್ರಿ ಎಡಬಿಡದೆ ಸುರಿದ ಭಾರಿ ಮಳೆಗೆ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿಯ ಅಣ್ಣೇಗೌಡ ಬಿನ್ ರಾಜೇಗೌಡ  ಎಂಬುವರ ಮನೆ ಬಹುತೇಕ ಜಖಂಗೊಂಡಿದೆ. ವಾಸ ಮಾಡಲು ಪರದಾಡುವ ಸ್ಥಿತಿ ಉಂಟಾಗಿದೆ. ರಾತ್ರಿ ಮಳೆ ಬರುತ್ತಿದ್ದಾಗ ಅಣ್ಣೇಗೌಡ ಕುಟುಂಬದವರು ನಿದ್ರೆ ಮಾಡುತ್ತಿದ್ದು, ಕೂದಲು ಎಳೆಯಿಂದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಅಡುಗೆ ಮತ್ತು ದನಗಳ ಕೊಟ್ಟಿಗೆ ತೀವ್ರ ಜಖಂಗೊಂಡಿದೆ.  ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಅವರು ಸ್ಥಳಕ್ಕೆ ಧಾವಿಸಿಲ್ಲ. ವಾಸ ಮಾಡಲು ಬೇರೆ ಮನೆ ಇಲ್ಲವಾಗಿದೆ. ಗ್ರಾಮ ಪಂಚಾಯ್ತಿಯಿಂದ ಅಶ್ರಯ ಮನೆ ನೀಡಬೇಕು ಎಂದು ರೈತ ಅಣ್ಣೇಗೌಡ ಒತ್ತಾಯಿಸಿದ್ದಾರೆ.

ನಮಗೆ ಸ್ವಲ್ಪ ಜಮೀನುಯಿದೆ. ಎರಡು ವರ್ಷದ ಹಿಂದೆ 40 ಸಾವಿರ ರು. ನೀಡಿ ಹಸು ತಂದು ಡೈರಿಗೆ ಹಾಲು ಹಾಕಿ ಜೀವನ ಸಾಗಿಸುತ್ತಿದ್ದೆ. ಶುಕ್ರವಾರ ಸುರಿದ ಭಾರಿ ಮಳೆಗೆ ನಮ್ಮ ಹಸು ಕೊಚ್ಚಿ ಹೋಗಿ ಅಸು ನೀಗಿರುವುದು ತುಂಬಾ ನೋವು ತಂದಿದೆ. ವರ್ಷದಲ್ಲಿ 60 ರಿಂದ 70 ಸಾವಿರ ರು. ಸಂಪಾದನೆ ಇತ್ತು. ಹಸು ಈಗ ಇಲ್ಲವಾಗಿದ್ದು, ದಿಕ್ಕು ತೋಚದಂತಾಗಿದೆ
-  ರಮೇಶ, ಕೃಷಿಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.