ಹಾಸನ

ಸುದ್ದಿ ಸಂಕ್ಷೇಪ

Published On :

ಮುಜರಾಯಿ ಅರ್ಚಕರಿಗೆ ಸಮವಸ್ತ್ರ ವಿತರಣೆ
ಹಾಸನ: ಅರ್ಚಕರ ನಾನಾ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಮಾಜಿ ಸಚಿವ ರೇವಣ್ಣ ಭರವಸೆ ನೀಡಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಧಾರ್ಮಿಕ ದತ್ತಿ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ಸಿಬ್ಬಂದಿಗೆ ಸಮವಸ್ತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 ಅನೇಕ ಅರ್ಚಕರಿಗೆ ಆಶ್ರಯ ಮನೆಯ ಅವಶ್ಯಕತೆ ಇದ್ದು ಅಂತಹವರನ್ನು ಗುರುತಿಸಿ ಪಟ್ಟಿ ಮಾಡುವಂತೆ ಹೇಳಿದರು. ವಿಮಾ ಸೌಲಭ್ಯವವನ್ನು ನೀಡುವ ಬಗ್ಗೆ ಚರ್ಚಿಸಲಾಗುವುದು.
 ಅರ್ಚಕರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿರ್ಣಯಿಸಿ ಅರ್ಜಿ ಬರೆದು ಮುಖ್ಯಮಂತ್ರಿ, ಮುಜರಾಯಿ ಸಚಿವರಿಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರಿಗೆ ನೀಡುವಂತೆ ಸಲಹೆ ನೀಡಿದರು. ನಂತರ ಮುಜರಾಯಿ ದೇವಾಲಯ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರಿಗೆ ಸಮವಸ್ತ್ರ ವಿತರಿಸಿದರು.
  ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜ ಸೇವಕ ಮತ್ತು ಉದ್ಯಮಿ ಅಟ್ಟಾವರ ರಾಮದಾಸ್, ತಹಸೀಲ್ದಾರ್ ಮಂಜುನಾಥ್, ತಾಲೂಕು ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪುಟ್ಟಣ್ಣಯ್ಯ, ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಪಿ. ಶೇಷಾದ್ರಿ, ಪ್ರಧಾನ ಕಾರ್ಯದರ್ಶಿ ಧನಂಜಯಮೂರ್ತಿ, ಜಗದೀಶ್, ಸಹಕಾರ್ಯದರ್ಶಿ ಗೋವಿಂದಸ್ವಾಮಿ, ಆರ್. ರಾಮಮೂರ್ತಿ ಇತರರು ಇದ್ದರು.
ಸಾಕ್ಷರತೆ ಸಾಧಿಸಲು ಜನತೆ  ಸಹಕಾರ ಮುಖ್ಯ: ಲಕ್ಷ್ಮಣ್
ಹಾಸನ: ಎರಡನೇ ಮಹಾ ಯುದ್ಧದ ನಂತರ ವಿಶ್ವಸಂಸ್ಥೆ ಕೈಗೊಂಡ 6 ಅಂಶಗಳ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ಕೂಡಾ ಒಂದಾಗಿದೆ. ಸ್ವಾತಂತ್ರ್ಯ ಬಂದು 67 ವರ್ಷವಾದರೂ ಇನ್ನೂ ಸಾಕ್ಷರತೆ ಸಾಧಿಸದಿರುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಸಂಪೂರ್ಣ ಸಾಕ್ಷರತೆಗೆ ಜನತೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಹೇಳಿದರು.
 ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿಯಿಂದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ  ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
 ಗ್ರಾಮ ಪಂಚಾಯ್ತಿಗಳಲ್ಲಿ ಶಿಕ್ಷಣಕ್ಕಾಗಿ ಮೀಸಲಿಡುವ ಅನುದಾನದಲ್ಲಿ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಪ್ರೇರಕ ಮತ್ತು ಉಪ ಪ್ರೇರಕರಾಗಿ ಕರ್ತವ್ಯ ನಿರ್ವಹಿಸುವವರಿಗೆ ಗೌರವಧನ ನೀಡಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಿಪಂ ಮುಖ್ಯ ಕಾರ್ಯ ನಿವಾಹಕ ಅಧಿಕಾರಿಗಳನ್ನು ಕೋರುವುದಾಗಿ ಹೇಳಿದ ಅವರು, ಸಾಕ್ಷರತಾ ಕಾರ್ಯಕ್ರಮ ನಡೆಯುತ್ತಿರುವ ಗ್ರಾಮ ಪಂಚಾಯಿತಿಗಳ ಪಟ್ಟಿ ನೀಡುವಂತೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
 ತಾಪಂ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಪಾಷಾ ಪ್ರಮಾಣವಚನ ಬೋಧಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಕ್ಷರ ಆಂದೋಲನ ತಲುಪಬೇಕು. 1951ರಲ್ಲಿ ಶೇಕಡ 18ರಷ್ಟಿದ್ದ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ವಿವಿಧ ಸಾಕ್ಷರತಾ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲಾಗಿದ್ದು, ಇಂದು ಸಾಕ್ಷರತಾ ಪ್ರಮಾಣ ಶೇಕಡ 74ರಷ್ಟಿದೆ ಎಂದು ತಿಳಿಸಿದರು.
 ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯ ಮಂಜಪ್ಪಗೌಡ ಮಾತನಾಡಿ, ಮನುಷ್ಯನ ಬದುಕು ಸಾರ್ಥಕಗೊಳಿಸಲು ಶಿಕ್ಷಣ ಅಗತ್ಯ. ಅವಿದ್ಯಾವಂತರ ಕಲಿಕೆಗೆ ಮುಂದಾಗುವಂತೆ ಪ್ರೋತ್ಸಾಹ ನೀಡಬೇಕು. ಸಾಕ್ಷರರಾದಲ್ಲಿ ಸರ್ಕಾರದ ಸವಲತ್ತು ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
 ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಶೇಷಾದ್ರಿ, ಪ್ರೇಮಮ್ಮ, ಶಫೀಉಲ್ಲಾ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ನರಸಿಂಹಯ್ಯ ಮಾತನಾಡಿದರು. ಡಿ.ಡಿ.ತಮ್ಮಣ್ಣಗೌಡ ಸ್ವಾಗತಿಸಿದರು. ಎಂ.ಎನ್.ಮಂಜೇಗೌಡ ನಿರೂಪಿಸಿದರು. ಶಿವಕುಮಾರ್ ತಂಡದವರು ಸಾಕ್ಷರತಾ ಗೀತೆ ಹಾಡಿದರು.
ಯುವ ಸಮೂಹ ರೆಡ್‌ಕ್ರಾಸ್ ಸದಸ್ಯತ್ವ ಪಡೆಯಲು ಮನವಿ
ಬೇಲೂರು: ಯುವಕರು ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯತ್ವ ಪಡೆದು ಸಮಾಜದ ಒಳಿತಿಗಾಗಿ ದುಡಿಯುವ ಮನೋಭಾವ ಬೆಳೆಸಿ ಕೊಳ್ಳಬೇಕೆಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಛೇರ್ಮನ್ ಎಚ್.ಸಿ. ಮೋಹನ್ ಹೇಳಿದರು.
 ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಘಟಕದ ಸದಸ್ಯ ಡಾ.ವೀರಭದ್ರಪ್ಪ ಮಾತನಾಡಿ, ಮನುಷ್ಯ ಸಮಾಜ ಮುಖಿಯಾಗಿ ಕೆಲಸಮಾಡಿ ರೋಗಿಗಳ ಕಷ್ಟಗಳಿಗೆ ಮತ್ತು ಅಪಘಾತಗಳಿಗೆ ಒಳಪಟ್ಟವರನ್ನ ರಕ್ಷಿಸುವ ಮತ್ತು ಉಪಚರಿಸುವ ಕೆಲಸಗಳಲ್ಲಿ ತೊಡಗಬೇಕೆಂದರು. ಪ್ರಾಂಶುಪಾಲ ಪ್ರೊ. ಡಿ.ಎಸ್.ರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕ ಅಧ್ಯಕ್ಷ ಅನುಗನಾಳು ಕೃಷ್ಣಮೂರ್ತಿ, ಎಸ್.ಎನ್.ಮಹದೇವಪ್ಪ, ಪ್ರಾಧ್ಯಾಪಕ ಪ್ರೊ.ಕೆ.ವಿ.ಜಯರಾಮು,ಮಮತ ಇದ್ದರು.
ಜಿಲ್ಲಾ ಕ್ರೀಡಾಕೂಟ ಉದ್ಘಾಟನೆ
ಹಾಸನ: ಕ್ರೀಡಾಕೂಟದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲೆಗಳ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಮೂರು ದಿವಸಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಮಟ್ಟದಿಂದ ವಿಜೇತರಾಗಿ,  ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಾಗುತ್ತಿದೆ. ಯಾವುದೇ ಸ್ಪರ್ಧೆ ನಡೆದರೂ ಅದು ಆರೋಗ್ಯಕರ ವಾತಾವರಣ ಸೃಷ್ಟಿಸ ಬೇಕೆಂದು ಸಲಹೆ ನೀಡಿದರು. ಕ್ರೀಡೆಯಿಂದ ವಿದ್ಯಾರ್ಥಿಗಳು ಹಿಂದೆ ಸರಿಯದೆ ಭಾಗವಹಿಸಿ ಮುಂದೆ ಬರುವಂತೆ ಕಿವಿಮಾತು ಹೇಳಿದರು.
 ಕ್ರೀಡಾ ಧ್ವಜಾರೋಹಣ ನಡೆಸಿ ಕ್ರೀಡಾಪಟುಗಳ ಪರಿಚಯ, ನಂತರ ಕ್ರೀಡಾಜ್ಯೋತಿಯನ್ನು ಸ್ವಾಗತಿಸಿ, ಪ್ರಮಾಣವಚನ ಬೋಧಿಸಲಾಯಿತು.ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಡಿ.ಟಿ. ಪುಟ್ಟರಾಜ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಶಿವೇಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಜೆ.ಬಿ. ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್, ಬಲರಾಮ್, ಪರಮೇಶ್ವರ್, ಎಸ್.ಆರ್. ವಿಜಯಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.