ಹೆರಿಗೆ ನೋವು, ಮಹಿಳೆಗೆ ಚಿಕಿತ್ಸೆ ನೀಡದ ವೈದ್ಯರು: ಶಾಸಕರ ಕಿಡಿ
ಅರಸೀಕೆರೆ: ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡದ ಸುದ್ದಿ ತಿಳಿದ ಶಾಸಕರು ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.
ಪಟ್ಟಣದ ಆಸ್ಪತ್ರೆಗೆ ಶನಿವಾರ ಮಧ್ಯಾಹ್ನ ಚೊಚ್ಚಲ ಹೆರಿಗೆ ನೋವು ತಾಳಲಾರದೆ ಬಂದ ತುಂಬು ಗರ್ಭಿಣಿ ರಾಧಾಮಣಿ ಎಂಬುವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಬೇಕಾದ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇರಲಿಲ್ಲ. ಕಾರಣ ಇನ್ನೂ ಮೂರು ದಿನ ಯಾವ ವೈದ್ಯರು ಆಸ್ಪತ್ರೆಯಲ್ಲಿ ಸಿಗುವುದಿಲ್ಲ ಎಂದು ಇಲ್ಲಿನ ಕೆಲವು ನೌಕರರು ಆಕೆಗೆ ಹೇಳಿ ಖಾಸಗಿ ಆಸ್ಪತ್ರೆ ಅಥವಾ ಹಾಸನದ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿ ವಾಪಸ್ ಕಳುಹಿಸಲು ಮುಂದಾದರು.
ಈ ವಿಷಯ ತಿಳಿದ ಶಾಸಕ ಕೆ.ಎಂ.ಶಿವಲಿಂಗೇಗೌಡರು, ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವೈದ್ಯಾಧಿಕಾರಿ ಹೆಬ್ಬಾರ್ ಅವರನ್ನು ಪ್ರಶ್ನಿಸಲಾಗಿ ಅನೇಕ ವೈದ್ಯರು ಎರಡನೇ ಶನಿವಾರ ಆದಕಾರಣ ಆಸ್ಪತ್ರೆಗೆ ಹಾಜರಾಗಿಲ್ಲ. ಅಲ್ಲದೆ ಹೆರಿಗೆ ತಜ್ಞೆ ಡಾ.ಸುಮಂಗಳ ಕೂಡಾ ಆಸ್ಪತ್ರೆಗೆ ಬಂದಿಲ್ಲದ ಕಾರಣ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಆದಕಾರಣ ಬೇರೆ ಕಡೆಗೆ ಹೋಗಲು ಇಲ್ಲಿನ ನೌಕರರು ಸೂಚಿಸಿರಬಹುದೆಂದು ಸಮಜಾಯಿಷಿ ನೀಡಿದರು.
ಗೈರು ಹಾಜರಾಗಿದ್ದ ಡಾ.ಸುಮಂಗಳಾ ಅವರನ್ನು ಮೊಬೈಲ್ನಲ್ಲಿ ಶಾಸಕರು ಪ್ರಶ್ನಿಸಿದಾಗ ಅವರು ನನಗೆ ತುಂಬ ಜ್ವರ ಬಂದಿದೆ. ಆದ್ದರಿಂದ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂಬ ಉತ್ತರ ನೀಡಿದರು.
ಇದರಿಂದ ಕೋಪಗೊಂಡ ಶಾಸಕರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೆ ಇಲ್ಲದ ಮೇಲೆ ಬಾಗಿಲು ತೆಗೆಯುವ ಬದಲಿಗೆ ಮುಚ್ಚುವುದು ಲೇಸು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆವೇಶ ಭರಿತರಾಗಿ ಹೇಳಿ ಇದೇ ದಾರಿಯಲ್ಲಿ ಇಲ್ಲಿನ ಆಸ್ಪತ್ರೆ ವ್ಯದ್ಯರು ಮತ್ತು ಸಿಬ್ಬಂದಿ ವರ್ಗ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ನಂತರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಸೂಕ್ತ ವ್ಯವಸ್ಥೆ ಮಾಡಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಅನೇಕರು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವರ್ತನೆ ಬಗ್ಗೆ ದೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

