ಕರಗಿದ ವಿಮಾನ ಹಾರಾಟದ ಕನಸು
ಹಾಸನ: ಜಿಲ್ಲೆಯ ಜನರ ಮಹಾದಾಸೆಯಾಗಿದ್ದ ವಿಮಾನ ನಿಲ್ದಾಣ ಯೋಜನೆಗೆ ಶಂಕುಸ್ಥಾಪನೆ ನಡೆದು ಏಳು ವರ್ಷ ಕಳೆದರೂ ನಿಲ್ದಾಣ ನಿರ್ಮಾಣದ ಯಾವುದೇ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ.
ಜೆಡಿಎಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ಈ ವಿಮಾನ ನಿಲ್ದಾಣ ಸ್ಥಾಪಿಸಿ ಜಿಲ್ಲೆಯ ರೈತರು ಬೆಳೆಯುವ ತರಕಾರಿ, ಹೂ ಹಾಗೂ ಇತರೆ ವಸ್ತುಗಳನ್ನು ನೇರವಾಗಿ ವಿದೇಶಕ್ಕೆ ರಫ್ತು ಮಾಡುವಂತಹದಾಗಿತ್ತು. ಆದರೆ ಈ ವಿಮಾನ ನಿಲ್ದಾಣದ ಕನಸು ಅರಳುವ ಮುನ್ನವೇ ಕಮರಿಹೋಗುತ್ತಿದೆ.
ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ವಿಮಾನ ನಿಲ್ದಾಣ ಯೋಜನೆ ಪ್ರಕ್ರಿಯೆ ಕೈಗೊಂಡು ಚಾಲನೆ ನೀಡಿದ್ದರು. ನಗರಕ್ಕೆ ಹೊಂದಿಕೊಂಡಂತಿರುವ ಬೂವನಹಳ್ಳಿ ಸಮೀಪ 1996ರಲ್ಲಿ ಸುಮಾರು 536 ಎಕರೆ ಭೂಮಿಯನ್ನು ರೈತರಿಂದ ಸರ್ಕಾರ ಸ್ವಾಧೀನ ಪಡಿಸಿಕೊಂಡು ಪ್ರತಿ ಎಕರೆ ಭೂಮಿಗೆ ತಲಾ 1 ಲಕ್ಷ ರು.ನಂತೆ ಪರಿಹಾರ ನೀಡಿತ್ತು. ತದನಂತರ ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿದ ಮೇಲೆ ಜಿಲ್ಲೆಯಲ್ಲಿ ಲೋಹದ ಹಕ್ಕಿಯ ಹಾರಾಟದ ಕನಸು ಕಮರಿತು.
ನಂತರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದೇವೇಗೌಡರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ 1200 ಕೋಟಿ ರು.ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಿದರು. 1996-97ರಿಂದ ವಿಮಾನ ನಿಲ್ದಾಣ ಬಗ್ಗೆ ಚಕಾರ ಎತ್ತದ ಸರ್ಕಾರ ಮತ್ತೆ ಯೋಜನೆಯ ಗರಿ ಬಿಚ್ಚಿ 2007ರಲ್ಲಿ ಶಂಕುಸ್ಥಾಪನೆ ನೆರವೇರಿಸಿತು. ವಿಮಾನ ನಿಲ್ದಾಣಕ್ಕೆ ಸುಮಾರು 982 ಎಕರೆ ಭೂಮಿ ಅವಶ್ಯಕವಾಗಿದ್ದರಿಂದ 446 ಉಳಿಕೆ ಭೂಮಿ ಖರೀದಿಯಲ್ಲಿ ಕೊಂಚ ಅಡಚಣೆ ಉಂಟಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರ ಸಂಖ್ಯೆ ಜೆಡಿಎಸ್ನಲ್ಲಿ ಕೇವಲ ಬೆರಳೆಣಿಕೆಯಷ್ಟಾದ್ದರಿಂದ ವಿಮಾನ ನಿಲ್ದಾಣದ ಕನಸಿಗೆ ಮತ್ತೆ ಬ್ರೇಕ್ ಬಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಜಿಲ್ಲೆಯ ಮಹತ್ತರವಾದ ಕನಸುಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡದೆ ದ್ವೇಷ ರಾಜಕಾರಣವನ್ನು ನಡೆಸಿಕೊಂಡು ಬಂತು. ಜೆಡಿಎಸ್ನವರು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿತು.
ನಂತರ ಬಿಜೆಪಿಯ ಜಗದೀಶ್ ಶೆಟ್ಟರ್ ಅಧಿಕಾರಕ್ಕೆ ಬಂದ ನಂತರ ಸಹ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ತದನಂತರ ಬಿಜೆಪಿಯಲ್ಲಿ ತೊಡಕುಂಟಾಗಿ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾದರು. ಅವರು ಜಿಲ್ಲೆಯಲ್ಲಿ ಸುಮಾರು 252 ಎಕರೆ ಭೂಮಿಯ ಸ್ವಾಧೀನಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ಸದಸದಲ್ಲಿ ಹೇಳಿ ಜಿಲ್ಲೆಯ ಜನರ ಮಹದಾಸೆಯಾಗಿದ್ದ ವಿಮಾನ ನಿಲ್ದಾಣದ ಕನಸು ಮತ್ತೆ ಚಿಗುರವಂತಾಗಿತ್ತು.
ಅದರಂತೆ ಎಕರೆಗೆ 18 ಲಕ್ಷ ರು.ನಂತೆ ಪರಿಹಾರ ನೀಡಿ ರೈತರಿಂದ ಖರೀದಿಸುವುದಾಗಿ ಸರ್ಕಾರ ಒಪ್ಪಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಗೆಯನ್ನೂ ನೀಡಿತ್ತು.
ವಿಮಾನ ನಿಲ್ದಾಣಕ್ಕಾಗಿ ರೈತರು ಸರ್ಕಾರಕ್ಕೆ ತಮ್ಮ ವ್ಯವಸಾಯದ 536 ಎಕರೆ ನೀಡಿದ್ದರು. ಆದರೆ ಈವರೆಗೂ ವಿಮಾನ ನಿಲ್ದಾಣದ ವಿಚಾರ ಕೇವಲ ದಾಖಲೆಯಲ್ಲಿ ಉಳಿದುಕೊಂಡಿದೆ ವಿನಾ ಕಾರ್ಯಗತವಂತೂ ಇಲ್ಲ. ಇದರಿಂದ ಹತ್ತಾರು ವರ್ಷಗಳಿಂದ ಇತ್ತ ಭೂಮಿಯಲ್ಲಿ ಬೆಳೆ ತೆಗೆದುಕೊಂಡು ಜೀವನ ಮಾಡುವಂತೆಯೂ ಇಲ್ಲ. ಅತ್ತ ವಿಮಾನ ನಿಲ್ದಾಣ ಆರಂಭವಾಗಿ ಯುವಕರಿಗೆ ಕೆಲಸ ಸಿಗದಂತಹ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರಿಗೆ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಿ ಬರೋಬ್ಬರಿ ಏಳು ವರ್ಷ ಕಳೆದರೂ ಲೋಹದ ಹಕ್ಕಿಗಳ ಹಾರಾಟ ಪ್ರಾರಂಭಿಸುವುದೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

