ಸುದ್ದಿ ಸಂಕ್ಷೇಪ
ಯುವ ರೆಡ್ಕ್ರಾಸ್ ಘಟಕ ಉದ್ಘಾಟನೆ
ಬೇಲೂರು: ಯುವಕರು ರೆಡ್ಕ್ರಾಸ್ ಸಂಸ್ಥೆಯ ಸದಸ್ಯತ್ವ ಪಡೆಯುವ ಮೂಲಕ ಸಮಾಜದ ಒಳಿತಿಗಾಗಿ ದುಡಿಯುವ ಮನಸ್ಸು ಮಾಡಬೇಕು ಎಂದು ಸಂಸ್ಥೆಯ ಜಿಲ್ಲಾ ಛೇರ್ಮನ್ ಎಚ್.ಸಿ.ಮೋಹನ್ ತಿಳಿಸಿದರು. ಬೇಲೂರಿನ ವೈ.ಡಿ.ಡಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಯುವ ರೆಡ್ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ರೆಡ್ಕ್ರಾಸ್ ಘಟಕದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಹೇಳಿದ ಅವರು, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಯುವಕ ಯುವತಿಯರು ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸುವಂತೆ ತಿಳಿಸಿದರು. ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ರೆಡ್ಕ್ರಾಸ್ ಘಟಕವನ್ನು ಸ್ಥಾಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಯುವಕರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಡಿ.ಎಸ್.ರಾಜು ಯುವ ರೆಡ್ಕ್ರಾಸ್ ಘಟಕ ಕಾಲೇಜಿನಲ್ಲಿ ಉದ್ಘಾಟಿಸುತ್ತಿದ್ದೇವೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯಬೇಕು ಎಂದು ಹೇಳಿದರು. ಯುವ ರೆಡ್ಕ್ರಾಸ್ ಘಟಕದ ಮಹದೇವಪ್ಪ, ಪ್ರಾಧ್ಯಾಪಕ ಪ್ರೊ.ಕೆ.ವಿ.ಜಯರಾಮು. ಗ್ರಂಥಪಾಲಕ ದೇವರಾಜು, ಮಮತ, ಸವಿತ, ಪ್ರೊ. ರಾಘವೇಂದ್ರ, ಎಚ್.ಗೋಡಖಿಂಡಿ, ಮಹೇಶ್ ಇದ್ದರು.
ತರಬೇತಿ ಭತ್ಯೆ ನೀಡಲು ಅರ್ಜಿ
ಹಾಸನ: 2013-14ನೇ ಸಾಲಿನಲ್ಲಿ ಅಂಗೀಕೃತ ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡ ಬೆರಳಚ್ಚು ತರಬೇತಿ ಪಡೆಯುತ್ತಿರುವ ಪ್ರವರ್ಗ-1, 2ಎ, 3ಎ, 3ಬಿ ಗಳಿಗೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಬೆರಳಚ್ಚು ಮತ್ತು ಶೀಘ್ರಲಿಪಿ ತರಬೇತಿ ಪಡೆಯುತ್ತಿರುವವರಾಗಿರ ಬೇಕು.ಅಭ್ಯರ್ಥಿ ಯಾವುದೇ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬಾರದು. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಪ್ರವರ್ಗ-1, 2ಎ, 3ಎ, 3ಬಿ ಗೆ ಸೇರಿದ ವಿದ್ಯಾರ್ಥಿಗಳು ಮಾತ್ರ ತರಬೇತಿ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಪ್ರವರ್ಗ-1ರ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಪ್ರವರ್ಗದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 15 ಸಾವಿರ ರು. ಹಾಗೂ ಅದಕ್ಕಿಂತ ಕಡಿಮೆ ಇರಬೇಕು. ಮಹಿಳಾ ಅಭ್ಯರ್ಥಿಗಳು ಮಾತ್ರ ತರಬೇತಿ ಪಡೆಯಲು ಅರ್ಹರು. ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ವಾಣಿಜ್ಯ ಸಂಸ್ಥೆಯಿಂದ ಪಡೆದು ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಜಾತಿ ಮತ್ತು ಆದಾಯ ದೃಢೀಕರಣ ಪತ್ರದ ನಕಲು ಲಗತ್ತಿಸಬೇಕು. ಭರ್ತಿ ಮಾಡಿದ ಸೆ. 30ರೊಳಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಎಚ್.ಕೆ.ಬಿ. ವಾಣಿಜ್ಯ ಸಂಕೀರ್ಣ, 2ನೇ ಮಹಡಿ, 23ನೇ ಅಡ್ಡರಸ್ತೆ, ಕುವೆಂಪುನಗರ, ಹಾಸನ ಕಳುಹಿಸುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

