ಸಹೋದ್ಯೋಗಿ ಮೇಲೆ ವಕೀಲರಿಂದ ಮಾರಣಾಂತಿಕ ಹಲ್ಲೆ
ಸಕಲೇಶಪುರ: ಪ್ರಕರಣದ ವಿವರ ಪಡೆಯುವ ವಿಚಾರವಾಗಿ ವಕೀಲರಿಬ್ಬರು ತಮ್ಮ ಸಹೋದ್ಯೋಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿವಪ್ರಸಾದ್ ಹಲ್ಲೆಗೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ವಕೀಲರು. ವಕೀಲರಾದ ಅರುಣ್ಸಕ್ಪಾಲ್ ಹಾಗೂ ಷಣ್ಮುಖ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ.
ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕೇಸ್ ಸ್ವೀಕರಿಸುವ ವಿಚಾರವಾಗಿ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ಕೈ ಕೈಮಿಲಾಯಿಸುವ ಹಂತಕ್ಕೆ ತಲುಪಿತು. ಈ ಸಂದರ್ಭದಲ್ಲಿ ನ್ಯಾಯಾಲಯ ಆವರಣದಲ್ಲಿದ್ದ ಇತರೆ ವಕೀಲರು ಈ ಇಬ್ಬರನ್ನು ಸಮಾಧಾನ ಪಡಿಸಿ ಕಳುಹಿಸಿದ್ದರು.
ಆದರೆ ಬುಧವಾರ ಸಂಜೆ ಪಟ್ಟಣದ ಖಾಸಗಿ ಹೊಟೇಲ್ ಸಮೀಪ ಒಂಟಿಯಾಗಿ ಸಿಕ್ಕ ಶಿವಪ್ರಸಾದ್ ಮೇಲೆ ಅರುಣ್ಸಕ್ಪಾಲ್ ಹಾಗೂ ಷಣ್ಮುಖ ತೀವ್ರ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದಲ್ಲಿದ್ದ ಸಾರ್ವಜನಿಕರು ಶಿವಪ್ರಸಾದ್ ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡಿರುವ ವಕೀಲ ಶಿವಪ್ರಸಾದ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲರ ಸಂಘದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ವಕೀಲರ ವೃತ್ತಿಗೆ ಕುಂದು ತರುವಂತಹ ವರ್ತನೆ ತೋರಿರುವ ಈ ವಕೀಲರಿಗೆ ಸಂಘದಿಂದ ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈಜಲು ಹೋದ ವ್ಯಕ್ತಿ ಸಾವು
ಸಕಲೇಶಪುರ: ಕೆರೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ರಾಜೇಗೌಡ(45) ಮೃತ ಪಟ್ಟವರು. ಈತನ ಪತ್ನಿ ಕೆರೆಯ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಈಜಲು ಇಳಿದ ರಾಜೇಗೌಡ ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾರದೆ ಮೃತಪಟ್ಟಿದ್ದಾನೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್ ಕಳ್ಳನ ಬಂಧನ
ಹಾಸನ: ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ಅವನಿಂದ 6 ಬೈಕ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಅರಸೀಕೆರೆಯಲ್ಲಿ ಗುರುವಾರ ನಡೆದಿದೆ. ತಾಲೂಕಿನ ಕಣಕಟ್ಟೆ ಹೋಬಳಿಯ ಹೊಳಲಕೆರೆ ಗ್ರಾಮದ ಕಲ್ಲೇಶ (27) ಬಂಧಿತ ಆರೋಪಿ. ತಾಲೂಕಿನ ಮಾಲೇಕಲ್ಲು ತಿರುಪತಿ ಕ್ರಾಸ್ ಹತ್ತಿರ ಪೊಲೀಸ್ ಲೋಕೇಶ್ ಅವರು ಕರ್ತವ್ಯದಲ್ಲಿ ಇದ್ದಾಗ ಕಲ್ಲೇಶ್ ಬೈಕಿನಲ್ಲಿ ಬರುತ್ತಿದ್ದವನು, ಪೊಲೀಸರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿ ಕಲ್ಲೇಶ್ನನ್ನು ಹಿಡಿದು ಪರಿಶೀಲಿಸಿದಾಗ ಬೈಕ್ ಕಳವು ಮಾಡಿರುವುದು ಪತ್ತೆಯಾಗಿದೆ. ಆತನ ವಶದಲ್ಲಿದ್ದ 1,52 ಲಕ್ಷ ರು. ಬೆಲೆಯ ವಿಟಿಎಸ್ ಸ್ಟಿಕ್ಟರ್, ಹಿರೋಹೊಂಡಾ ಸ್ಪ್ಲೆಂಡರ್, ಹಿರೋಹೊಂಡಾ ಸಿಡಿ 100, ಡಿಸ್ಕವರ್ ಡಿಸ್ಕವರಿ ಬೈಕ್ಗಳನ್ನು ವಶಪಡಿಸಿಕೊಂಡು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಕ್ರಮ ಮದ್ಯ ವಶ
ಅರಸೀಕೆರೆ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ. ಪಟ್ಟಣ ರಮೇಶ್ ಸ್ಟೋರ್ ಹತ್ತಿರ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದಾಗ ಡಿವೈಎಸ್ಪಿ ಶೃತಿ ಅವರು ಹನುಮಂತಪ್ಪ (68)ನ ನ್ನು ಬಂಧಿಸಿದ್ದು, ಆತನಿಂದ 2319 ರು. ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಮಾತೋಶ್ರೀಯವರ ಅಂತ್ಯ ಸಂಸ್ಕಾರ
ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರ ತಾಯಿ ದ್ಯಾವಮ್ಮ(85) ಗುರುವಾರ ಸಂಜೆ ಕುಡುಕುಂದಿಯ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಆರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಶಾಸಕ ಬಾಲಕೃಷ್ಣ, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಸೇರಿದಂತೆ ತಾಲೂಕಿನ ಬಹುತೇಕ ಜನಪ್ರತಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಅಂತಿಮ ದರ್ಶನ ಪಡೆದರು.
ಬಸ್ ಸ್ಟೇರಿಂಗ್ ತುಂಡಾಗಿ ತಪ್ಪಿದ ಅನಾಹುತ
ಸಕಲೇಶಪುರ: ಸಾರಿಗೆ ಸಂಸ್ಥೆಯ ಬಸ್ಸೊಂದು ಹೇಮಾವತಿ ಸೇತುವೆ ಮೇಲೆ ಸ್ಟೇರಿಂಗ್ ಗ್ರಾಡ್ ತುಂಡಾಗಿ ನಿಂತ ಘಟನೆ ಶುಕ್ರವಾರ ಮುಂಜಾನೆ ತಾಲೂಕಿನ ಉದೇವಾರ ಮಾರ್ಗದಲ್ಲಿ ನಡೆದಿದೆ. ಸ್ಥಳೀಯ ಘಟಕಕ್ಕೆ ಸೇರಿದ ಈ ಬಸ್ ಸಕಲೇಶಪುರದಿಂದ ಉದೇವಾರ ಮಾರ್ಗವಾಗಿ ಹಾಸನಕ್ಕೆ ತೆರಳಲು ಡಿಪೋದಿಂದ ಹೊರಟು ಇಂಧನ ತುಂಬಿಸಲು ಕಾಂಚನಗಂಗಾ ಪೆಟ್ರೋಲ್ ಬಂಕ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಟೇರಿಂಗ್ ಗ್ರಾಡ್ ತುಂಡಾಗಿದೆ. ಅಡ್ಡಾದಿಡ್ಡಿ ಚಲಿಸಿದ ಬಸ್ನ್ನು ಚಾಲಕ ಚಾಕಚಕ್ಯತೆಯಿಂದ ನಿಲ್ಲಿಸುವ ಮೂಲಕ ಬಾರಿ ಅನಾಹುತ ತಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

