ಉತ್ತಮ ಸೇವೆ ನೀಡುವಲ್ಲಿ ವಿಜಯ ಬ್ಯಾಂಕ್ ಮುಂಚೂಣಿಯಲ್ಲಿ: ಚಂದ್ರಶೇಖರ್ ಯಳ್ಳೂರ್
ಹೊಳೆನರಸೀಪುರ:ಕೇವಲ ನಾಲ್ಕಾರು ರೈತರ ಸಹಕಾರದೊಂದಿಗೆ ಬೃಹತ್ ಕನಸುಗಳೊಂದಿಗೆ ಸಣ್ಣಮಟ್ಟದಲ್ಲಿ ಆರಂಭಗೊಂಡ ವಿಜಯ ಬ್ಯಾಂಕ್ ಪ್ರಸ್ತುತ ದೇಶದಲ್ಲಿ ಒಂದು ಸಾವಿರದ ನಾಲ್ಕು ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿ ಇದೆ ಎಂದು ವಿಜಯ ಬ್ಯಾಂಕಿನ ಹಾಸನ ಪ್ರಾದೇಶಿಕ ಸಹಾಯಕ ಮಹಾ ಪ್ರಬಂಧಕ ಚಂದ್ರಶೇಖರ್ ಯಳ್ಳೂರು ತಿಳಿಸಿದರು.
ಪಟ್ಟಣದ ನ್ಯಾಯಾಲಯ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ 1440 ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಸುಮಾರು 1 ಲಕ್ಷ 75 ಸಾವಿರ ಕೋಟಿ ರು. ವ್ಯವಹಾರವನ್ನು ವಿಜಯ ಬ್ಯಾಂಕು ನಡೆಸುತ್ತ ಬಂದಿದ್ದು, ಈ ಶಾಖೆಯು ಜಿಲ್ಲೆಯ ಪ್ರಾದೇಶಿಕ ವೃತ್ತದಲ್ಲಿ 61 ನೇ ಶಾಖೆಯಾಗಿದೆ ಎಂದು ತಿಳಿಸಿದರು.
1931 ರಲ್ಲಿ ಬಾಲಕೃಷ್ಣನ್ ಅವರಿಂದ ವಿಜಯದಶಮಿಯಂದು ಆರಂಭಗೊಂಡಿದ್ದರಿಂದ ಈ ಬ್ಯಾಂಕಿಗೆ ವಿಜಯ ಬ್ಯಾಂಕ್ ಎಂದು ನಾಮಕರಣ ಮಾಡಲಾಯಿತೆಂದು ತಿಳಿಸಿದ ಅವರು, ಬ್ಯಾಂಕು ಇತರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರಕುವ ಎಲ್ಲಾ ರೀತಿಯ ಸೌಲಭ್ಯಗಳನ್ನು ವಿಜಯ ಬ್ಯಾಂಕಿನಲ್ಲಿಯೂ ನೀಡುತ್ತಿರುವುದಾಗಿ ತಿಳಿಸಿದರು.
ಶಾಖೆಯನ್ನು ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್ ಮಾತನಾಡಿ, ಪಟ್ಟಣದಲ್ಲಿ ಆರಂಭವಾಗುತ್ತಿರುವ ವಿಜಯಾಬ್ಯಾಂಕನ್ನು ಈ ಹಿಂದೆ 1980 ರಲ್ಲೇ ಆರಂಭಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಂದಿನ ಚೇರ್ಮನ್ ಸುಂದರರಾಮಶೆಟ್ಟಿ ಅವರಲ್ಲಿ ವಿನಂತಿಸಿಕೊಂಡಿದ್ದರು. ಅದರೆ ಕಾರಣಾಂತರಗಳಿಂದ ಶಾಖೆ ಆರಂಭಿಸಲು ಸಾಧ್ಯವಾಗಿರಲಿಲ್ಲ. ಅಂದು ದೇವೇಗೌಡರು ತಮ್ಮ ಶಾಸಕತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಯುವಕರಿಗೆ ನೇರವಾಗಿ ಬ್ಯಾಂಕಿನಲ್ಲಿ ಉದ್ಯೋಗ ಕಲ್ಪಿಸಿದ್ದನ್ನು ಯಾರು ಮರೆಯುವಂತಿಲ್ಲ ಎಂದು ತಿಳಿಸಿದರು.
ತಹಸೀಲ್ದಾರ್ ಪ್ರಸನ್ನಮೂರ್ತಿ ಅವರು ಮಾತನಾಡಿ, ರಾಜ್ಯದ ಕರಾವಳಿ ಮಂದಿ ದೇಶದ ಆರ್ಥಿಕ ಮುಂಚೂಣಿಗೆ ಮೂರು ಬ್ಯಾಂಕುಗಳ ಆರಂಭಕ್ಕೆ ಕಾರಣರಾಗಿದ್ದಾರೆ ಎಂದು ತಿಳಿಸಿ ಕರ್ನಾಟಕ ಬ್ಯಾಂಕು, ವಿಜಯಾಬ್ಯಾಂಕು ಮತ್ತು ಸಿಂಡಿಕೇಟ್ ಬ್ಯಾಂಕುಗಳು ಇಂದು ದೇಶದಲ್ಲಿ ಉತ್ತಮ ಸೇವೆ ನೀಡಲು ಕಾರಣವಾಗಿವೆ ಎಂದು ಪ್ರಶಂಶಿಸಿದರು. ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ, ಅನಿಲ್ಕುಮಾರ್, ಬ್ಯಾಂಕಿನ ಶಕುಂತಲದೇವಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

