ಹಾಸನ

ತರಕಾರಿ ಜತೆ ಸಿಕ್ಕಿದ ಹಣ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ದಂಪತಿ

Published On :

ಕ.ಪ್ರ. ವಾರ್ತೆ ,  ಅರಸೀಕೆರೆ ,  ಸೆ. 30
ಹಣದ ಮುಂದೆ ಇಂದು ಎಲ್ಲಾ ಗೌಣ ಅನ್ನುವ ಮಾತಿದೆ. ಇಂಥಲ್ಲಿ ತಮಗೆ ಸಿಕ್ಕ ಹಣವನ್ನು ಮರಳಿ ಅದರ ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ತೋರುವವರು ಇದ್ದಾರೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
  ತಾಲೂಕಿನ ಚೆಲ್ಲಾಪುರದ ಶೈಲಜಾ ಜಯಣ್ಣ ಎಂಬುವವರು ಸಂತೆಯಲ್ಲಿ ತಾವು ಖರೀದಿಸಿದ ತರಕಾರಿಯೊಂದಿಗೆ ಬಡ ವ್ಯಾಪಾರಿ ಮಹಿಳೆ ಆಕಸ್ಮಿಕವಾಗಿ ನೀಡಿದ 4150 ರು. ಗಳನ್ನು ಮತ್ತೆ ಆ ಬಡ ಮಹಿಳೆಗೆ  ಪೊಲೀಸರ ಸಮ್ಮುಖದಲ್ಲಿ ಹಿಂತಿರುಗಿಸುವ ಮೂಲಕ ಹಣಕ್ಕಿಂತ ಮಾನವೀಯತೆಯೇ ದೊಡ್ಡದು ಆನ್ನೋ ಪ್ರಾಮಾಣಿಕತೆ ತೋರುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
 ಪ್ರತಿ ಶುಕ್ರವಾರ ಪಟ್ಟಣದಲ್ಲಿ ಸಂತೇ ವ್ಯಾಪಾರ ನಡೆಯುತ್ತದೆ. ಸಂತೆಯಲ್ಲಿ ತಾಲೂಕಿನಿಂದಲ್ಲದೇ ಅಕ್ಕಪಕ್ಕದ ತಾಲೂಕುಗಳಿಂದಲೂ ಅನೇಕ ವ್ಯಾಪಾರಿಗಳು ತರಕಾರಿ ಮಾರುತ್ತಾರೆ. ಸೆ. 20ರ ಶುಕ್ರವಾರ ಸಂತೆಯಂದು ತಿಪಟೂರಿನ ಕುಮಾರಮ್ಮ ಎಂಬ ಬಡ ವ್ಯಾಪಾರಿ ಮಹಿಳೆ ಬೆಳಿಗ್ಗೆಯಿಂದ ತಾನು ಮಾಡಿದ ವ್ಯಾಪಾರದ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡಿದ್ದರು. ಸಂಜೆ ವ್ಯಾಪಾರ ತುರಾತುರಿಯಲ್ಲೇ ಮುಗಿಸಿಕೊಂಡು ಊರು ಸೇರುವ ಲೆಕ್ಕಾಚಾರದಲ್ಲಿ ಕುಮಾರಮ್ಮ ಇದ್ದರು. ಅಷ್ಟರಲ್ಲಿ ಶೈಲಜಾಜಯಣ್ಣ ಅವರು, ಕುಮಾರಮ್ಮನವರ ಬಳಿ ಟೊಮೆಟೋ ಹಾಗೂ ಹಸಿಮೆಣಸಿನಕಾಯಿ ಖರೀದಿಸಿದರು. ಈ ತರಕಾರಿಯನ್ನ ತುರಾತುರಿಯಲ್ಲಿದ್ದ ಕುಮಾರಮ್ಮ ತಾನು ಹಣವಿಟ್ಟಿದ್ದ ಪ್ಲಾಸ್ಟಿಕ್ ಚೀಲದಲ್ಲೇ ಸುರಿದು ಕೊಟ್ಟಿದ್ದರು.
 ಅಂದು ರಾತ್ರಿ ತರಕಾರಿ ವಿಂಗಡಿಸಲು ಸುರಿದಾಗ ತರಕಾರಿ ಜತೆ ಹಣ ಕಂಡುಬಂದಿತು ಇದರಿಂದ ಆಶ್ಚರ್ಯಚಕಿತರಾದ ಶೈಲಜಾ ದಂಪತಿ ಈ ಹಣವನ್ನು  ತರಕಾರಿ ವ್ಯಾಪಾರಿ ಮಹಿಳೆಯದೆಂದು ಮನಗಂಡು ಹಿಂದಿರುಗಿಸವುದು ಹೇಗೆ ಎಂದು ಆಲೋಚಿಸುತ್ತಿದ್ದ ಸಮಯದಲ್ಲೇ ಹಣದಲ್ಲೇ ಒಂದೆರಡು ಚೀಟಿಗಳು ಕಣ್ಣಿಗೆ ಬಿದ್ದವು, ಆ ಚೀಟಿಯಲ್ಲಿ ಒಂದು ದೂರವಾಣಿ ಸಂಖ್ಯೆಯೂ ಇತ್ತು ಆ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾದರೂ ಯಾವುದೇ ಪ್ರಯೋಜನವಾಗಲಿಲ್ಲ ಹಾಗಾಗಿ ನಗರ ಠಾಣೆ ಎಸ್‌ಐ ಲೋಕೇಶ್ ಗಮನಕ್ಕೆ ತಂದರು. ಲೋಕೇಶ್  ಮುಂದಿನ ಶುಕ್ರವಾರದ ವರೆಗೂ ಕಾದು ನೋಡೋಣ ಎಂದರು. ಹಾಗಾಗಿ ಶುಕ್ರವಾರ ಎಂದಿನಂತೆ ಕುಮಾರಮ್ಮ ಸಂತೆ ವ್ಯಾಪಾರಕ್ಕೆ ಬಂದಿದ್ದರಾದರೂ ಅವರ ಮುಖದಲ್ಲಿ ಹಣ ಕಳೆದುಕೊಂಡ ಬೇಸರ ಎದ್ದು ಕಾಣುತ್ತಿತ್ತು. ಶೈಲಜಾ ದಂಪತಿ  ಕುಮಾರಮ್ಮ ಅವರನ್ನು ಗುರುತಿಸಿ  ಪೊಲೀಸರ ಸಮ್ಮುಖದಲ್ಲಿ ಹಣವನ್ನ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕುಮಾರಮ್ಮ ತರಕಾರಿ ವ್ಯಾಪಾರಿ ಪ್ರತಿಕ್ರಿಯಿಸಿ ನಾನು ಸಾಲ ಸೋಲ ಮಾಡಿ ತರಕಾರಿ ವ್ಯಾಪಾರವನ್ನು ಅಕ್ಕಪಕ್ಕದ ಊರುಗಳ ಸಂತೆಯಲ್ಲಿ ನಡೆಸುತ್ತೇನೆ. ಕಳೆದ ಶುಕ್ರವಾರ ನನ್ನ ವ್ಯಾಪಾರದ ಹಣ ಕಳೆದು ಕೊಂಡಿದ್ದರಿಂದ ನನ್ನ ಒಂದು ತಿಂಗಳ ಆದಾಯವೇ ಮುಳುಗಿ ಹೋಗಿ ಮನಸ್ಸಿಗೆ ಬಹಳ ನೋವಾಗಿತ್ತು. ಆದರೆ ಇಂದು ನನ್ನ ಹಣ ಮತ್ತೆ ನನ್ನ ಕೈಸೇರಿದೆ ಕಷ್ಟಪಟ್ಟು ದುಡಿದ ಹಣ ಎಲ್ಲಿಯೂ ಹೋಗುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಹಣ ಹಿಂತಿರುಗಿಸಿದ ಶೈಲಜಾ ಜಯಣ್ಣ ಉದಾಹರಣೆಯಾಗಿದ್ದು ಅವರಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.