ಹಾಸನ

ಬಾಲ್ಯವಿವಾಹ ತಡೆದ ಅಧಿಕಾರಿಗಳು

Published On :

ಹಾಸನ: ಹತ್ತನೆ ತರಗತಿ ಓದುತ್ತಿದ್ದ ಬಾಲಕಿಗೆ ವಿವಾಹ ಮಾಡುತ್ತಿದ್ದ ಪ್ರಕರಣವನ್ನು ತಡೆಗಟ್ಟಿರುವ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ನಗರದ ಪೆನ್ಷನ್ ಮೊಹಲ್ಲಾದ ಮನೆಯೊಂದರಲ್ಲಿ ಅಪ್ರಾಪ್ತೆಯನ್ನು ದುಬೈನಲ್ಲಿ ಕೆಲಸ ಮಾಡುತ್ತಿರುವ ಇರ್ಷಾನ್ ಖಾನ್ ಎಂಬುವನೊಂದಿಗೆ ವಿವಾಹ ಮಾಡಲು ಮುಂದಾಗಿದ್ದರು. ಈ ವಿಷಯ ತಿಳಿದ ತಾಲೂಕು ಆಡಳಿತ ತಕ್ಷಣವೇ ಸ್ಥಳಕ್ಕೆ ಹೋಗಿ ಅಪ್ರಾಪ್ತೆಯ ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  
ಕೆಲ ವರ್ಷಗಳಿಂದ ಇರ್ಷಾನ್ ಖಾನ್ ಮತ್ತು ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಮನೆಯಲ್ಲಿ ತಿಳಿಸಿದ ಕಾರಣ ಎರಡೂ ಮನೆಯವರು ವಿವಾಹಕ್ಕೆ ಒಪ್ಪಿಗೆ ಸೂಚಿಸಿ ಸಿದ್ಧತೆ ನಡೆಸಿದ್ದರು. ಇರ್ಷಾನ್ ಲಸದ ನಿಮಿತ್ತ ದುಬೈಗೆ ತೆರಳಬೇಕಾಗಿದ್ದರಿಂದ ಬಾಲಕಿಗೆ 18 ವರ್ಷ ತುಂಬುವ ಮುನ್ನವೇ ವಿವಾಹವಾಗಲು ಮುಂದಾಗಿದ್ದ.
ಸುದ್ದಿ ತಿಳಿಯುತ್ತಿದ್ದಂತಹ ತಹಸೀಲ್ದಾರ್ ಮಂಜುನಾಥ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಬಾಲ್ಯವಿವಾಹ ಗೋಚರಿಸಿದೆ. ಆದರೆ, ಹುಡುಗಿಯ ಪೋಷಕರು ಇದು ವಿವಾಹವಲ್ಲ ಕೇವಲ ನಿಶ್ಚಿತಾರ್ಥ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎನ್ನಲಾಗಿದೆ. ಒಂದು ವೇಳೆ ನಿಶ್ಚಿತಾರ್ಥವೇ ಆಗಿದ್ದರೂ, ಹುಡುಗಿ ಅಪ್ರಾಪ್ತೆಯಾಗಿರುವುದರಿಂದ ಇದು ಬಾಲ್ಯವಿವಾಹದ ಸಿದ್ಧತೆ ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಹುಡುಗಿಯ ಪೋಷಕರಿಗೆ ತಿಳಿಸಿದ್ದಾರೆ.
ಹುಡುಗಿಗೆ 18 ವರ್ಷ ತುಂಬುವವರೆಗೂ ಈ ರೀತಿಯ ವಿವಾಹ ಸಂಬಂಧಿಸಿದ ಕಾರ್ಯವನ್ನು ನಡೆಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಕಾನೂನು ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಂಗ್ಲ ಶಾಲೆಯಲ್ಲಿ ದೇಸಿಕಲೆ     ಮೂಲಕ ಕನ್ನಡ ಕಲಿಕೆ!
ಅರಸೀಕೆರೆ: ದೇಸಿಕಲೆಗಳ ಮೂಲಕ ಕನ್ನಡ ಕಲಿಸುವ ವಿನೂತನ ಪ್ರಯತ್ನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಹೋರಾಟಗಾರ ಹಾಗೂ ಮೈತ್ರಿ ಕಾನ್ವೆಂಟ್‌ನ ಕಾರ್ಯದರ್ಶಿ ಧರ್ಮರಾಜ್ ಕಡಗ ತಿಳಿಸಿದರು.  ಗಂಡಸಿ ಹ್ಯಾಂಡ್ ಪೋಸ್ಟ್‌ನ ಮೈತ್ರಿ ಕಾನ್ವೆಂಟ್‌ನಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರವೀಂದ್ರನಾಥ ಠಾಗೂರರ ಶಾಂತಿ ನಿಕೇತನದ ಮಾದರಿ ಶಾಲೆಗಳು ಗ್ರಾಮೀಣ ಭಾಗದಲ್ಲಿ  ಬರಬೇಕು. ಆ ದಿಕ್ಕಿನಲ್ಲಿ ನಮ್ಮ ಕಿರುಪ್ರಯತ್ನ ಇದು ಎಂದು ತಿಳಿಸಿದರು.
ಭಾಷಾ ಅಭಿಮಾನಕ್ಕೆ ಸಾಕ್ಷಿ: ಕೊಟ್ಟೂರು ಶ್ರೀನಿವಾಸ್ ಮಾತನಾಡಿ, ಶುಲ್ಕ ದೇಣಿಗೆ  ಹೆಸರಿನಲ್ಲಿ ಹಣ ದೋಚುವ ಕೇಂದ್ರಗಳಾಗಿರುವ ಖಾಸಗಿ ವಿದ್ಯಾ ಸಂಸ್ಥೆಗಳು ನಗರಕ್ಕಷ್ಟೇ ಸೀಮಿತವಾಗಿವೆ. ಇಂಥ ಸಂದರ್ಭದಲ್ಲಿ ಗಂಡಸಿಯಂಥ ಗ್ರಾಮದಲ್ಲಿ ಶಾಲೆ ನಡೆಸಿ ಮಕ್ಕಳಿಗೆ ಸಂಸ್ಕತಿ, ಭಾಷೆ ಕಲಿಸುವ ಇಂಥ ಶಿಬಿರಗಳು ಆದರ್ಶಪ್ರಾಯ. ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದಲ್ಲಿ ಮುಚ್ಚಿ ಹೋಗುತ್ತಿರುವ ಈ ಸಂದರ್ಭದಲ್ಲಿ ಮೈತ್ರಿ ಕಾನ್ವೆಂಟ್‌ನಂಥ ಶಾಲೆಗಳು ಬೆಳೆಯುತ್ತಿರುವುದು ಅದರ ಕ್ರೀಯಾಶೀಲತೆ, ಭಾಷಾ ಅಭಿಮಾನಕ್ಕೆ ಸಾಕ್ಷಿ ಎಂದು ತಿಳಿಸಿದರು. ಶಿಬಿರದಲ್ಲಿ ರವೀಂದ್ರನಾಥ ಠಾಗೂರ್ ಅವರ ಸಣ್ಣ ಕಥೆ ಆಧರಿಸಿ ಬಿ.ವಿ. ಕಾರಂತರು ರಚಿಸಿದ ಪಂಜರ ಶಾಲೆ ಎಂಬ ಮಕ್ಕಳ ನಾಟಕವನ್ನು ಸ್ಥಳೀಯ ಮಕ್ಕಳು ಸುಂದರವಾಗಿ ಅಭಿನಯಿಸಿದರು. ನಿರ್ದೇಶನವನ್ನು ಸಾಣೇನಹಳ್ಳಿ ರಂಗಶಾಲೆಯ ಪದವೀಧರ ಶರಣುಶೆಟ್ಟರ್ ಗಂಗಾವತಿ ನಿರ್ದೇಶಿಸಿದರು.
ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್, ರಂಗವಿನ್ಯಾಸ, ಎಲ್. ಹರೀಶ್ ಕುಮಾರ್, ರಂಗಕರ್ಮಿ ಚಂದ್ರುಕಾಳೇನಹಳ್ಳಿ, ಡಾ. ಬಿ.ಡಿ. ಕುಮಾರ್., ಪವನ್ ಮೆಡಿಕಲ್ ಉಮೇಶ್, ಪ್ರಿಯಾಂಕ ಪ್ರಿಂಟರ್ಸ್ ನೃತ್ಯ ಇದ್ದರು.
ನೀರಿಗಾಗಿ ಪಪಂ ಕಚೇರಿಗೆ ಮುತ್ತಿಗೆ
ಆಲೂರು: ಪಟ್ಟಣದ ದೊಡ್ಡ ಬೀದಿ, ರಾಜಪ್ಪ ಬಡಾವಣೆ, ಬೇಡಚವಳ್ಳಿ ಹಾಗೂ ದಡದಹಳ್ಳಿ ರಸ್ತೆಯ ನಿವಾಸಿಗಳು ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು, ಜನಜಾನುವಾರುಗಳು ಪರಿತಪಿಸುವಂತಾಗಿದೆ ಎಂದು ಆರೋಪಿಸಿ ರೊಚ್ಚಿಗೆದ್ದ ನಿವಾಸಿಗಳು ಸೋಮವಾರ ಪಟ್ಟಣ ಪಂಚಾಯ್ತಿ ಕಾರ್ಯಾಯಲಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಟ್ಟು: ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಳೆದ ಒಂದು ವಾರದಿಂದ ಕುಡಿಯುವ ನೀರನ್ನು ಬಿಡದೆ ಪಟ್ಟಣ ಪಂಚಾಯ್ತಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿಲ್ಲ. ಮನಸ್ಸಿಗೆ ಬಂದಾಗ ಒಂದು ಬಾರಿ  ಟ್ಯಾಂಕ್ ನೀರು ಕಳುಹಿಸುತ್ತಾರೆ. ಆ ಟ್ಯಾಂಕ್ ನೀರಿನಲ್ಲಿ   ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಆದ್ದರಿಂದ ನೀರು ಬಿಡುವವರೆಗೂ ಬೀಗ ತೆಗೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ನೀಲುಫರ್, ಸದಸ್ಯರಾದ ಶಿವಣ್ಣ, ಸೈಯ್ಯದ್ ಜಾಫರ್, ಮಂಜುನಾಥ್, ತಕ್ಷಣವೇ ಟ್ಯಾಂಕರ್‌ನಿಲ್ಲಿ ನೀರು ಒದಗಿಸುವುದಾಗಿ ತಿಳಿಸಿ, ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.
ಸಮಸ್ಯೆ ಬಗೆಹರಿಸುತ್ತೇವೆ: ಆಶ್ವಾಸನೆ
ಸಮಸ್ಯೆ ನಿವಾರಿಸುವುದಾಗಿ ಆಶ್ವಾಸನೆ ನೀಡಿದ ಪಪಂ ಅಧ್ಯಕ್ಷೆ ನೀಲುಫರ್, ವಿದ್ಯುತ್ ಸಮಸ್ಯೆಯಿಂದಾಗಿ ನೀರಿನ ಸರಬರಾಜು ಆಗಿಲ್ಲ. ಚುನಾವಣೆ ನೀತಿ ಸಂಹಿತೆ ಇದ್ದುದರಿಂದ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸರ್ವ ಸದಸ್ಯರ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆಗೆ  ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಈಗಾಗಲೇ ಮಂಜೂರಾಗಿ ಒಂದು ವರ್ಷ ಕಳೆದರೂ ಪೂರ್ಣಗೊಳ್ಳದೇ ಇರುವ ಎಕ್ಸ್‌ಪ್ರೆಸ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇಂದಿನಿಂದಲೇ ನಾಲ್ಕೈದು ಟ್ಯಾಂಕರ್‌ಗಳ ಮೂಲಕ  ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಎಲ್ಲಾ ಬಡಾವಣೆಗಳಿಗೂ ನೀರು ಸರಬರಾಜು ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.