ದಿನಗೂಲಿಗಳ ಮುಷ್ಕರ
ಹಾಸನ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಹಾಗೂ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ವರ್ಗಗಳ ದಿನಗೂಲಿ ನೌಕರರ ಸಂಘದ ಕಾರ್ಯಕರ್ತರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ನಗರದ ಅರಣ್ಯ ಭವನದ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಆಕ್ರೋಶ: ಹಾಸನ ವೃತ್ತ ವ್ಯಾಪ್ತಿಗೆ ಬರುವ ತುಮಕೂರು ವಿಭಾಗ, ಹಾಸನ ವಿಭಾಗ, ನಾನಾ ವಲಯ ಕಚೇರಿಗಳಲ್ಲಿ ದಿನಗೂಲಿ, ಪಿಸಿಪಿ ನೌಕರರಿಗೆ ಸರ್ಕಾರಿ ಸವಲತ್ತುಗಲಿಂದ ವಂಚನೆ, ಮೋಸ, ಸುಳ್ಳು ಮಾಹಿತಿ, ಕಡಿಮೆ ಮಂಜೂರಿ ಪಾವತಿ, ಸರ್ಕಾರಿ ಹಣದ ದುರುಪಯೋಗ, ನೌಕರರ ಮಂಜೂರಿಯಲ್ಲಿ ಪಾಲು ಪಡೆಯುತ್ತಿರುವ ಬಗ್ಗೆ ಹಾಗೂ ಕಾನೂನು ಉಲ್ಲಂಘನೆ ಮಾಡಿ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಂಚನೆ ಆರೋಪ: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ನೌಕರರ ಮಂಜೂರಿಯನ್ನು ಕಡ್ಡಾಯವಾಗಿ ಆ್ಯಕ್ಸಿಸ್ ಬ್ಯಾಂಕಿನಲ್ಲಿ ಪಾವತಿ ಮಾಡುವಂತೆ ಸೂಚಿಸಲಾಗಿದೆ. ಇದರಿಂದ ಅಪಘಾತಕ್ಕೊಳಗಾಗಿ ಪ್ರಾಣ ಹಾನಿಗೊಳಗಾದ ನೌಕರನ ಕುಟುಂಬಕ್ಕೆ ರು. 2 ಲಕ್ಷ ವಿಮೆ ಸೌಲಭ್ಯ ಸಿಗುತ್ತದೆ. ಆದರೆ ಈ ಆದೇಶ ಜಾರಿಗೊಳಿಸದೆ ನೌಕರರನ್ನು ಈ ಸೌಲಭ್ಯದಿಂದ ವಂಚಿಸಲಾಗುತ್ತಿದೆ ಎಂದು ದೂರಿದರು.
ಮನವಿಗೆ ಮಾನ್ಯತೆಯಿಲ್ಲ: ತುಮಕೂರು ವಿಭಾಗದಲ್ಲಿ 15ರಿಂದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ 6 ಜನ ಪಿಸಿಪಿ ಹಾಗೂ 5 ಜನ ಎಂಆರ್ ನೌಕರರನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿಸಲಾಗಿದೆ ಹಾಗೂ ಅವರಿಗೆ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದೆ. ನೌಕರರ ಕೆಲಸಕ್ಕೆ ತಕ್ಕಂತೆ ಸರ್ಕಾರಿ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಇಲಾಖೆಯಿಂದ ವಂಚನೆ: ಚಿಕ್ಕನಾಯಕನಹಳ್ಳಿಯಲ್ಲಿ 6 ನೌಕರರಿಗೆ ಕಡಿಮೆ ಮಜೂರಿ ರು. 2500 ಪಾವತಿ ಮಾಡಲಾಗುತ್ತಿದೆ. ಬುಕ್ಕ ಪಟ್ಟಣದ 18 ನೌಕರರಿಗೂ ಮಜೂರಿಯಲ್ಲಿ ವಂಚನೆ ಮಾಡಲಾಗುತ್ತಿದೆ. ಗುಬ್ಬಿವಲಯದ 12 ನೌಕರರಿಗೆ, ಸಿರವಲಯದ 3ಜನ ನೌಕರರಿಗೆ ಮತ್ತು ಕುಣಿಗಲ್ನ ಹುಲಿಯೂರು ದುರ್ಗದ 5 ಜನರಿಗೆ ಎಂಆರ್ ನೌಕರರು ಹಾಗೂ 7 ಜನ ಪಿಸಿಪಿ ನೌಕರರಿಗೆ ಇಲಾಖೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಅರಕಲಗೂಡು ವಲಯದಲ್ಲಿ 13 ನೌಕರರು ಕೆಲಸ ನಿರ್ವಹಿಸುತ್ತಿದ್ದು, 7 ನೌಕರರಿಗೆ ರು. 1000 ಹೆಚ್ಚುವರಿ ಸೌಲಭ್ಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಬಾಕಿ 6 ನೌಕರರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಾಗಿದೆ. ಹೊಳೆನರಸೀಪುರದಲ್ಲಿ ಪ್ರಾದೇಶಿಕ ವಿಭಾಗದ 8 ಜನ ನೌಕರರಿಗೆ ರು. 2 ಸಾವಿರ ಮಜೂರಿಯನ್ನು ಯಾವ ಲೆಕ್ಕದಲ್ಲಿ ಪಾವತಿಸಲಾಗುತ್ತಿದೆ. ಹೆಚ್ಚಿನ ಸೌಲಭ್ಯ ಕೇಳಿದರೆ ಕೆಲಸಕ್ಕೆ ಬೇಡ ಈ ಬಗ್ಗೆ ತಾವು ಕ್ರಮ ತೆಗೆದುಕೊಂಡು ನೌಕರರಿಗೆ ಹತ್ತಾರು ವರ್ಷಗಳಿಂದ ಆಗುತ್ತಿರುವ ವಂಚನೆ ನಿಲ್ಲುವಂತಾಗಬೇಕು ಎಂದರು.
ಒತ್ತಾಯ: ಸಂಘವು ಹಲವು ಬಾರಿ ಮನವಿ ಮಾಡಿದ್ದರೂ ಹಾಸನ ವೃತ್ತದ ನಾನಾ ವಲಯಗಳ ನೌಕರರಿಗೆ ನ್ಯಾಯ ಸಿಕ್ಕಿಲ್ಲ. ಆದರೆ, ವಿಭಾಗ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹತೆ ಇಲ್ಲದ ನೌಕರರಿಗೆ ಅನುಕೂಲ ಮಾಡಲಾಗಿದೆ. ಈ ತಾರತಮ್ಯ ನಿಲ್ಲಬೇಕು. ಎಲ್ಲಾ ನೌಕರರಿಗೂ ಸಮಾನ ನ್ಯಾಯ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.
ಎಚ್ಚರಿಕೆ: ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿಯ ಧರಣಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

