ಹಾಸನ

ವಾಕಿಂಗ್ ಪಾತ್ ನಿರ್ಮಿಸಿ

Published On :

ಹೊಳೆನರಸೀಪುರ: ಒಂದೊಳ್ಳೆ ವಾಕಿಂಗ್ ಪಾತ್ ನಿರ್ಮಿಸಿಕೊಡಿ ಸ್ವಾಮಿ...
ಇದುಪ್ರತಿ ನಿತ್ಯ ವಾಕಿಂಗ್ ಹೋಗುವ ಅಭ್ಯಾಸವಿರುವ ನಾಗರಿಕರು ನಗರಸಭೆಯನ್ನು ಕೇಳಿಕೊಳ್ಳುತ್ತಿರುವ ಪರಿ. ಹೌದು. ನಗರದಲ್ಲಿ ಎಲ್ಲೆಡೆ ಉತ್ತಮ ಸೌಲಭ್ಯಗಳಿವೆ. ನಗರಸಭೆ ಸಾರ್ವಜನಿಕರಿಗೆ ಉಪಯುಕ್ತವಾದ ಸೇವೆಗಳನ್ನು ಸಲ್ಲಿಸುತ್ತಿದೆ. ಆದರೆ, ವಾಕಿಂಗ್ ಮಾಡುವವರಿಗಾಗಿ ಒಂದೇ ಒಂದು ಉತ್ತಮ ವಾಕಿಂಗ್ ಮಾರ್ಗವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಆರೋಗ್ಯಕರ ಜೀವನಕ್ಕಾಗಿ ಪ್ರತಿನಿತ್ಯ ಬೆಳಗಿನ ಜಾವ ಹಾಗೂ ಸಂಜೆಯ ವೇಳೆ  ವಾಕಿಂಗ್ ಹೋಗುವುದನ್ನು ರೂಢಿಸಿಕೊಂಡವರಿಗೆ ಪಟ್ಟಣದಲ್ಲಿ ವಾಕಿಂಗ್‌ಗೆ ಸೂಕ್ತವಾದ ಸ್ಥಳವಿಲ್ಲ ಎನ್ನುವ ಕೊರಗು ಇರುವುದು ಇಂದು ನಿನ್ನೆಯದಲ್ಲ. ಹಾಗೆಂದು ಇದು ಇಲ್ಲಿನ ಶಾಸಕರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಏಕೆಂದರೆ ಇಲ್ಲಿನ ಶಾಸಕ ಎಚ್.ಡಿ. ರೇವಣ್ಣ ಅವರೇ ಪಟ್ಟಣದಲ್ಲಿ ಉತ್ತಮವಾದ ವಾಕಿಂಗ್ ಪಾತ್ ನಿರ್ಮಿಸಬೇಕು ಎಂದು ಹೇಳಿದ್ದುಂಟು.
ಈ ನಿಟ್ಟಿನಲ್ಲಿ ಪಟ್ಟಣದ ಅವರ ನಿವಾಸದ ಎದುರೇ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಳ ಆವರಣದಲ್ಲಿನ ಕಾಲೇಜು ಕಟ್ಟಡ, ಬಯಲು ಕ್ರೀಡಾಂಗಣ, ಹೆಲ್ಲಿಪ್ಯಾಡ್‌ಗಳ ಸುತ್ತಲೂ ಸುಸಜ್ಜಿತವಾದ ವಾಕಿಂಗ್ ಪಥವನ್ನು ನಿರ್ಮಿಸಲು ಪ್ರಯತ್ನ ಪಟ್ಟಿದ್ದರು.
ನಿರ್ಮಾಣಕ್ಕೆ ಪ್ರಯತ್ನ: ಮೂರು ವರ್ಷಗಳ ಹಿಂದೆಯೇ ಜಿಲ್ಲೆಯ ಯುವಜನ ಸೇವಾ ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಪ್ರಥಮ ದರ್ಜೆ ಕಾಲೇಜಿನ ಬಳಿಯಲ್ಲಿನ ಸ್ಥಳವನ್ನು ಪರಿಶೀಲಿಸಿದ್ದರು. ಅಲ್ಲದೇ ಈ ದಿಸೆಯಲ್ಲಿ ಸುಸಜ್ಜಿತ ವಾಕಿಂಗ್ ಪಾತ್ ನಿರ್ಮಾಣಕ್ಕಾಗಿ ಸುಮಾರು ರು. 25 ಲಕ್ಷ ಅಂದಾಜು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಒಂದು ಅಂದಾಜು ಪಟ್ಟಿಯನ್ನೂ ಕೂಡ ಯುವಜನ ಸೇವಾ ಕ್ರೀಡಾ ಇಲಾಖೆಗೂ ಸಿದ್ಧಪಡಿಸಿ ನೀಡಲಾಗಿತ್ತು.
ಆದರೆ ಅಂದಾಜು ಪಟ್ಟಿ ಲೋಕೋಪಯೋಗಿ ಇಲಾಖೆಯಿಂದ ಯುವಜನ ಸೇವಾ ಇಲಾಖೆಯ ಕೈಸೇರಿದ್ದು ಬಿಟ್ಟರೆ, ಮುಂದೆ ಈ ನಿಟ್ಟಿನಲ್ಲಿ ಯಾವ ಅನುದಾನವೂ ಬಿಡುಗಡೆಯೂ ಆಗಲಿಲ್ಲ. ವಾಕಿಂಗ್ ಪಾತ್ ನಿರ್ಮಾಣದ ಯೋಜನೆ ನೆನೆಗುದಿಗೆ ಬಿತ್ತು.  
ಹೀಗಾಗಿ, ಜನರಿಗೆ ವಾಕಿಂಗ್ ಮಾಡಲು ಸರಿಯಾದ ಸ್ಥಳ ಇಲ್ಲದ ಕಾರಣದಿಂದಾಗಿ ಪಟ್ಟಣದ ಅರಕಲಗೂಡು ರಸ್ತೆ, ಹಾಸನ-ಮೈಸೂರು ರಸ್ತೆ, ಮಲ್ಲಪ್ಪನಹಳ್ಳಿ ರಸ್ತೆ, ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಮೊದಲಾದ ಕಡೆಗೆ ವಾಕಿಂಗ್‌ಗಾಗಿ ತೆರಳುತ್ತಾರೆ.
ಅಷ್ಟು ದೂರ ಹೋಗಲಾಗದವರು ಪಟ್ಟಣದ ಹೃದಯ ಭಾಗದಲ್ಲಿರುವ ಉದ್ಯಾನವನದಲ್ಲಿಯೇ ನಾಲ್ಕಾರು ಸುತ್ತು ಹಾಕಿ ತೆರಳುತ್ತಾರೆ.
ಇತ್ತೀಚೆಗಂತೂ ರಸ್ತೆಗಳಲ್ಲಿ ಸಂಚರಸುವುದೇ ದುಸ್ತರ ಎನಿಸುವಷ್ಟು ವಾಹನಗಳ ದಟ್ಟಣೆ ಹೆಚ್ಚಳವಾಗಿದೆ. ರಸ್ತೆ ಬದಿಯಲ್ಲಿ ವಾಕಿಂಗ್ ಮಾಡುವುದು ಯಾವತ್ತಿದ್ದರೂ ಅಪಾಯಕರ ಎನ್ನುವ ಕಾರಣಕ್ಕಾಗಿ ಕೆಲವರು ವಾಕಿಂಗನ್ನೇ ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ವಾಹನಗಳು ಉಗುಳುವ ಹೊಗೆಯಿಂದಾಗಿ ಈ ರಸ್ತೆಗಳಲ್ಲಿ ವಾಕ್ ಮಾಡುವವರಿಗೆ ಸರಿಯಾದ ಶುದ್ಧಗಾಳಿ ಸಿಗದಂತಾಗಿದೆ.
ಈ ಹಿನ್ನೆಲೆಯಲ್ಲಿ, ಶಾಸಕರು ಹಾಗೂ ನಗರಾಡಳಿತದ ವತಿಯಿಂದ ಹೊಸತಾಗಿ ವಾಕಿಂಗ್ ಪಾತ್ ನಿರ್ಮಾಣವಾಗಲಿ ಎಂಬುದು ಇಲ್ಲಿನ ನಾಗರಿಕರ ಆಶಯವಾಗಿದೆ.

ಎಚ್.ಡಿ. ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.