ಹಾಸನ

ಇದ್ದರೆ ಗಟ್ಸ್, ಕಟ್ಟು ಬಾ ಬೆಟ್ಸ್

Published On :

ಕನ್ನಡಪ್ರಭ ವಾರ್ತೆ     ಹಾಸನ  ಏ. 25
ಯಾರಾದ್ರೂ ಬೆಟ್ಸ್ ಕಟ್ಟೋರು ಇದ್ರೆ ನೋಡಿ... ಗೌಡ ಗೆಲ್ತಾನೆ ಅಂತ ಬಾಜಿ ಕಟ್ಟೋರ್ ಇದ್ರೆ ಕರ್ಕಂಡ್ ಬನ್ನಿ. ಲಕ್ಷಕ್ಕೆ 3 ಲಕ್ಷ ಸಿಗುತ್ತೆ! ಗೌಡ್ರು ಸೋತ್ರೆ ಲಕ್ಷಕ್ಕೆ 3 ಲಕ್ಷ ಕೊಡ್ತೀವಿ.....
ಹೀಗೆ ಫಲಿತಾಂಶದ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರೋ ಮಂದಿ ಬಾಜಿ ಕಟ್ಟಿ ನೋಡ ಬನ್ನಿ ಎಂದು ಕರೆಯುತ್ತಿದ್ದಾರೆ. ಚುನಾವಣೆ ರೇಸ್‌ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಫೆವರೇಟ್ ಕುದುರೆ. ಅವರು ಬಿಟ್ಟರೆ ನಂತರದ ಸ್ಥಾನಗಳಲ್ಲಿರೋರು  ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು. ಈ ಇಬ್ಬರು ಬಿಟ್ಟರೆ, ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ರೇಸ್‌ನಲ್ಲಿ ಕಂಡು ಬಂದಿಲ್ಲ!
ರಾಜಕೀಯವನ್ನೇ ಉಂಡು, ಹೊದ್ದು ಮಲಗುವ ಹಾಸನ ಜಿಲ್ಲೆಯಲ್ಲಿ ಈಗ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ, ವಾದ, ವಿವಾದ ನಡೆಯುತ್ತಿದ್ದರೆ,  ಸೋಲು ಗೆಲವಿನ ಹಣವನ್ನು ಪಣಕ್ಕೆ ಇಡಲಾಗುತ್ತಿದೆ. ಕಾಂಗ್ರೆಸ್ ಮಂದಿ ಲಕ್ಷಕ್ಕೆ 3 ಲಕ್ಷಕ್ಕೆ ಸಿಗುತ್ತೆ ನೋಡೇ ಬಿಡೋಣ... ಒಂದ್ ಕೈ ಎಂಬಂತೆ ಜೆಡಿಎಸ್ ಮಂದಿ ಬಳಿ ಬಾಜಿ ಕಟ್ಟುತ್ತಿದ್ದಾರೆ.  ಹೊಟೇಲ್, ಸೇವಿಂಗ್ ಶಾಪ್, ಸಂತೆ ಹೀಗೆ ನಾಲ್ಕು ಜನ ಸೇರೋ ಕಡೆಯೆಲ್ಲಾ ಯಾರು ಗೆಲ್ತಾರೆ, ಸೋಲ್ತಾರೆ ಎಂಬ ಬಗ್ಗೆಯೇ ಚರ್ಚೆ.
ಭಾರಿ ಲೆಕ್ಕಾಚಾರ: 2009ರಲ್ಲಿ ನಡೆದ ಲೋಕಸಭೆ ಚುನವಾಣೆಗಿಂತ 2014ರ ಚುನಾವಣೆಯಲ್ಲಿ 1,66, 311 ಹೆಚ್ಚು ಮತಗಳು ಚಲಾವಣೆ ಆಗಿವೆ. ಈ ಓಟುಗಳನ್ನು ಆಧರಿಸಿಯೇ ಬಾಜಿ ಕಟ್ಟಲಾಗುತ್ತಿದೆ. 09ರಲ್ಲಿ 9, 80, 043 ಮತಗಳು (ಶೇ. 69.17) ಚಲಾವಣೆಯಾಗಿದ್ದರೆ, ಈ ಬಾರಿ 11,46, 354 ಮತಗಳು (ಶೇ. 73.50) ಚಲಾವಣೆಯಾಗಿವೆ. ಕಳೆದ ಬಾರಿ 14, 15, 680 ಮತದಾರರಿದ್ದರೆ, ಈಗ 15, 59, 655 ಮತದಾರರು ಇದ್ದರು. ಅಂದರೆ, 1,43,970 ಮತದಾರರು ಕಳೆದ ಬಾರಿಗಿಂತ ಹೆಚ್ಚಾಗಿದ್ದಾರೆ.   
ಈ ಹಿನ್ನೆಲೆಯಲ್ಲಿ ಹೋದ ಚುನಾವಣೆಗಿಂತ ಈ ಬಾರಿ ಹೆಚ್ಚು ಚಲಾವಣೆಗೊಂಡಿರುವ ಮತಗಳ ಪೈಕಿ ಬಹುಪಾಲು ಮತಗಳು ಗೌಡರ ಪರ ವಾಲಿವೆ ಎನ್ನಲಾಗುತ್ತಿದೆ. ಒಕ್ಕಲಿಗರು ಹಿಂದಿಗಿಂತಲೂ ಈ ಬಾರಿ ಗೌಡರ ಪರ ಮತ ಚಲಾಯಿಸಿದ್ದರೆ, ಮುಸ್ಲಿಂ ಶೇ. 40, ಕುರುಬರು ಶೇ. 30, ದಲಿತರು ಶೇ. 20, ಇತರೇ ಜನಾಂಗದವರೂ ಶೇ. 40ರಷ್ಟು ಗೌಡರಿಗೆ ಓಟ್ ಹಾಕಿದ್ದಾರೆ. ಆದ್ದರಿಂದ ಗೌಡರು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬುದು ಗೌಡರ ಪರ ಬಾಜಿ ಕಟ್ಟುತ್ತಿರುವ ಮಂದಿ ವಾದ, ರಾಜಕೀಯ ಪಂಡಿತರ ವಿಶ್ಲೇಷಣೆ. ಆದರೆ, ಮಂಜು ಪರ ವಾದಿಸುತ್ತಿರುವ ಮಂದಿ ಹೇಳೋದೇ ಬೇರೆ. ಕುರುಬರು, ದಲಿತರು, ಮುಸ್ಲಿಂ ಈ ಬಾರಿ ಸಾಲಿಡ್ ಆಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಒಕ್ಕಲಿಗರಿಗ ಕಡೆಯಿಂದ ಶೇ. 40ರಷ್ಟು ಮತ ಬಂದಿವೆ. ಹಾಗಾಗಿ ಮಂಜು ಗೆಲವು ಖಚಿತ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.

ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.