ರಸ್ತೆ ದುರಸ್ತಿಗೆ 15 ದಿನ ಗಡುವು
ಕ.ಪ್ರ.ವಾರ್ತೆ, ಅರಕಲಗೂಡು.ಆ.5
ತಾಲೂಕಿನಲ್ಲಿ ಹಾದು ಹೋಗಿರುವ ಹಾಸನ- ಪಿರಿಯಾಪಟ್ಟಣ ಹಾಗೂ ಕೇರಳಾಪುರ- ರಾಮನಾಥಪುರ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಎ. ಮಂಜು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ 15 ದಿನಗಳ ಗಡುವು ನೀಡಿದ್ದಾರೆ.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸಲು ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕ್ರಮ ಕುರಿತು ಪ್ರಶ್ನಿಸಿದರು.
ದುರಸ್ತಿಗೆ ಕ್ರಮ: ಎಂಜಿನಿಯರ್ ಗಣೇಶ್ ಉತ್ತರಿಸಿ, ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರು. 226 ಕೋಟಿ ಮಂಜೂರಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ. ಗೊರೂರಿನಿಂದ ಮಲ್ಲಾಪುರ ಗಡಿ ವರೆಗೆ ಗುಂಡಿ ಮುಚ್ಚಿಸಲು ರು. 20 ಕೋಟಿಗೆ ಸರ್ಕಾರದಿಂದ ತಾಂತ್ರಿಕವಾಗಿ ಅನುಮೋದನೆ ಸಿಕ್ಕಿದೆ. ಮಳೆಗಾಲ ಮುಗಿದ ನಂತರ ತಾತ್ಕಾಲಿಕವಾಗಿ ರೂ. 65 ಲಕ್ಷ ವೆಚ್ಚದಲ್ಲಿ ಗುಂಡಿ ಮುಚ್ಚಿಸಲಾಗುವುದು. ಬರಗೂರು- ದೊಡ್ಡಬೆಮ್ಮತ್ತಿ ಮಾರ್ಗದ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಲ್ಲಿಪಟ್ಟಣದ ರಸ್ತೆಗಳಲ್ಲಿ ಬಿದ್ದಿರುವ ಹೊಂಡದ ಗುಂಡಿಗಳನ್ನು ಮುಚ್ಚಿಸಬೇಕು. ಮಲ್ಲಿಪಟ್ಟಣದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಮೀಸಲಾದ ಸ್ಮಶಾನ ಜಾಗದಲ್ಲಿ ಅಕ್ರಮ ಗುಡಿಸಲು ತಲೆ ಎತ್ತದಂತೆ ಕ್ರಮ ಕೈಗೊಂಡು ಸ್ಮಶಾನ ಜಾಗ ಉಳಿಸಬೇಕು ಎಂದು ಜಿ.ಪಂ. ಸದಸ್ಯೆ ನಾಗಮಣಿ ಒತ್ತಾಯಿಸಿದರು.
ಕಾಮಗಾರಿ ಸ್ಥಗಿತ: ಅರಕಲಗೂಡು ಸಾರಿಗೆ ಬಸ್ ನಿಲ್ದಾಣ ಕೆಲಸ ಅರ್ಧಕ್ಕೆ ನಿಂತಿರುವ ಕುರಿತು ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಪೋ ವ್ಯವಸ್ಥಾಪಕ ಪುಟ್ಟಣ, ಕಬ್ಬಿಣ ಮತ್ತು ಸಿಮೆಂಟ್ ಬೆಲೆ ಏರಿಕೆಯಾಗಿದೆ ಎಂದು ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಪುನರಾರಂಭಿಸಲು ಗುತ್ತಿಗೆದಾರ ಒಪ್ಪದಿದ್ದರೆ ಬೇರೊಬ್ಬರಿಗೆ ವಹಿಸುವಂತೆ ಈಗಾಗಲೇ ಇಲಾಖೆ ಮೇಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.
ತಹಶೀಲ್ದಾರ್ ಮೇಹನ್ ಮಾತನಾಡಿ, ಪ್ರಕೃತಿ ವಿಕೋಪದಡಿ ಸರ್ಕಾರ ಒದಗಿಸಿರುವ ರು. 9.15 ಲಕ್ಷ ಪರಿಹಾರದ ಹಣ್ಣವನ್ನು ರೈತರಿಗೆ ವಿತರಿಸಲಾಗುವುದು. 84 ಪಡಿತರ ಅಂಗಡಿಗಳಲ್ಲಿ ಎತ್ತುವಳಿಗೆ ಹಾಗೂ 2500 ಕಾರ್ಡುಗಳ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ನಾಲೆಗೆ ನೀರು ಹರಿಸಿ: ಹೇಮಾವತಿ ಮೇಲ್ದಂಡೆ ನಾಲೆ ಹಾಗೂ ಅಡಿಕೆ ಬೊಮ್ಮನಹಳ್ಳಿ ಮತ್ತು ಗುಡ್ಡೇನಹಳ್ಳಿ ಏತ ನೀರಾವರಿ ಯೋಜನೆ ನಾಲೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಬೇಕು. ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿಯ ವಡ್ಡರಹಳ್ಳಿ ಮತ್ತು ನೈಗೆರೆ ನಾಲೆಗಳ ದುರಸ್ತಿ ಕೆಸಲ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ನಿರಾವರಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ತಾಲೂಕು ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗಳು ಖಾಲಿಯಿವೆ. ತಾಲೂಕಿಗೆ ತಕ್ಷಣ ಎರಡು 108 ವಾಹನ ವ್ಯವಸ್ಥೆ ಒದಗಿಸಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ ಗೋವಿಂದೇಗೌಡ, ತಾ.ಪಂ. ಅಧ್ಯಕ್ಷ ನರಸೇಗೌಡ, ಉಪಾಧ್ಯಕ್ಷೆ ಮಾಕಮ್ಮ,ಕೆಡಿಪಿ ಸದಸ್ಯರುಗಳಾದ ಶ್ರೀನಿವಾಸಮೂರ್ತಿ.ಕೆ.ಶಿವರಾಮಯ್ಯ,ಖಲೀಲ್(ಅತಿ), ಪಾರ್ವತಮ್ಮ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೀರ್ತಿರಾಜ್ ಇತರರು ಉಪಸ್ಥಿತರಿದ್ದರು.
ಮಳೆಗಾಲ ಮುಗಿದ ನಂತರ ತಾತ್ಕಾಲಿಕವಾಗಿ ರು. 65 ಲಕ್ಷ ವೆಚ್ಚದಲ್ಲಿ ಗುಂಡಿ ಮುಚ್ಚಿಸಲಾಗುವುದು. ಬರಗೂರು- ದೊಡ್ಡಬೆಮ್ಮತ್ತಿ ಮಾರ್ಗದ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ
ಎ. ಮಂಜು, ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

