ಹಾಸನ

ಪರಿಶಿಷ್ಟ ಪಂಗಡಕ್ಕೆ ಉಪ್ಪಾರ, ಪರಿವಾರ ಸೇರಿಸಿ

Published On :

ಹಾಸನ: ಉಪ್ಪಾರ ಹಾಗೂ ಪರಿವಾರ ಜನಾಂಗದ ಅಭಿವೃದ್ಧಿ ಹಾಗೂ ರಾಜಕೀಯ ಏಳಿಗೆಗೆ ಈ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ (ಎಸ್‌ಟಿ) ಸೇರಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು.
ನಗರದಲ್ಲಿ ಶನಿವಾರದ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ 16 ಶಾಸಕ ಸ್ಥಾನಗಳು ಹಾಗೂ 2 ಲೋಕಸಭಾ ಸ್ಥಾನಗಳ ಮೀಸಲಾತಿ ಇದ್ದು, ಈ ಸಮಾಜವು ಎಸ್ಟಿಯೊಳಗೆ ಬಂದರೆ ವಿಧಾನಸಭೆ ಹಾಗೂ ಲೋಕಸಭಾ ಸ್ಥಾನಗಳ ಮೀಸಲಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಈ ಸಮಾಜದ ಜನರು ಸಹ ಚುನಾವಣೆಯಲ್ಲಿ ಸ್ಪರ್ಧಿಸುವಂತಾಗುತ್ತದೆ ಎಂದರು.
ಷರತ್ತು ಹಾಕಿದ್ದೆ: ಚಂದ್ರಶೇಖರ್ ಅವರು ಪ್ರಧಾನಿ ಆಗಿದ್ದಾಗ ನನ್ನನ್ನು ಕೇಂದ್ರದ ಮಂತ್ರಿ ಮಾಡಬೇಕು ಅಂತ ಕರೆಸಿಕೊಂಡಿದ್ದರು. ಆಗ ನಾನು ಮಂತ್ರಿಗಿರಿ ಬೇಡ ಎಂದು ಮತ್ತೆ ಪಕ್ಷವನ್ನು ಕಟ್ಟುವುದಾಗಿ ಹೇಳಿದೆ. ನಂತರ ನಾಯಕ ಜನಾಂಗ, ಉಪ್ಪಾರ ಸೇರಿದ ನಾಲ್ಕು ಸಮಾಜವನ್ನು ಗುರುತಿಸಿದರೆ ಮತ್ತೆ ಸಂಸತ್ತಿಗೆ ಬರುವುದಾಗಿ ಷರತ್ತು ಹಾಕಿದೆ. ಅದಕ್ಕೆ ಚಂದ್ರಶೇಖರ್ ಅವರು ಒಪ್ಪಿಕೊಂಡರು. ನಂತರ ಈ ವಿಚಾರ ಕಾನೂನು ವಿಭಾಗಕ್ಕೆ ಹೋದಾಗ ಉಪ್ಪಾರ ಮತ್ತು ಪರಿವಾರ ಎಂಬ ಹೆಸರು ಬೇರೆ ಬೇರೆಯಾಗಿದೆ ಅಂತ ಹೇಳಿದರು.
ಆಗ ಈ ವಿಚಾರ ರಾಷ್ಟ್ರಪತಿ ಬಳಿಗೆ ಹೋಯಿತು. ಆ ಸಂದರ್ಭದಲ್ಲಿ ಚುನಾವಣೆಯ ಪ್ರಕಟವಾಗಿದ್ದರಿಂದ ಈ ವಿಚಾರವು ಅಲ್ಲೇ ಉಳಿದು ಬಿಟ್ಟಿತು. ಆದರೆ ನಾನು ಒಂದು ಏನ್ ಪ್ರಯತ್ನ ಮಾಡುತ್ತೇನೆ. ಅದನ್ನು ಸಾಧಿಸಿಯೇ ಹೋಗುತ್ತೇನೆ. ನನ್ನ ದೃಷ್ಟಿಕೋನ ಅಧಿಕಾರವನ್ನು ಎಲ್ಲರು ಅನುಭವಿಸಬೇಕು. ಅದಕ್ಕಾಗಿಯೇ ನಾನು ಎಲ್ಲಾ ಸಮಾಜದವರಿಗೂ ಸಮಾನವಾಗಿ ಸ್ಥಾನಮಾನ ನೀಡಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಚ್.ಸಿ. ನೀರಾವರಿ ಮಾತನಾಡಿ, ದೇಶದಲ್ಲಿ ಜಾತಿ ಪದ್ಧತಿ ಇದ್ದು, ಇದರಿಂದ ಅನೇಕರಿಗೆ ಅನುಕೂಲವಾಗಿದೆ. ಆದರೆ, ನಮ್ಮ ಸಮಾಜಕ್ಕೆ ಮಾತ್ರ ಇದರಿಂದ ಅನುಕೂಲವಾಗದೆ ತೊಂದರೆ ಅನುಭವಿಸುವಂತಾಗಿದೆ. ಅದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ತೊಂದರೆಯನ್ನು ಸಮಾಜದ ಜನರು ಅನುಭವಿಸುತ್ತಿದ್ದಾರೆ ಎಂದರು.
ಅಧಿಕಾರದಲ್ಲಿದ್ದರೆ ಪ್ರಶ್ನೆ: ನಾನಾ ಕಾರಣಗಳಿಂದ ಸಾಕಷ್ಟು ಸಮಾಜಗಳು ಹಿಂದುಳಿದಿದೆ. ಪ್ರವರ್ಗ ಒಂದಕ್ಕೆ ದೇವೇಗೌಡರು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟರು. ಇವರಿಗೆ ಆದಾಯದ ಮಿತಿ ಇಲ್ಲದೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಿಕೊಡಲಾಗಿತ್ತು. ಆದರೆ ಬಿಜೆಪಿ ಅವರು ಅಧಿಕಾರಕ್ಕೆ ಬಂದು ದೇವೇಗೌಡರ ಮಾಡಿದ್ದ ಉಚಿತತೆಯನ್ನು ನಾಶ ಮಾಡಿ, 1 ಲಕ್ಷ ರು.ಗಳ ಆದಾಯದ ಮಿತಿಯನ್ನು ಹಾಕಿದರು ಎಂದ ಅವರು, ನಮ್ಮ ಸಮಾಜದವರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇದ್ದಾರೆ. ಆದ್ದರಿಂದ ಕಾಂಗ್ರೆಸ್‌ನವರು ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಳಲಿ, ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಅಂತ. ಜೆಡಿಎಸ್ ಅಧಿಕಾರದಲ್ಲಿ ಇದ್ದಿದ್ದರೆ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡುತ್ತಿದ್ದೆವು ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಯವರು ಪ್ರಧಾನ ಮಂತ್ರಿಯಾದರೆ ನಾವು ಹೋಗಿ ಅವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳು ಹಾಗೂ ಆಗಿರುವ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಬಿಡುವುದಿಲ್ಲ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾಜದವರು ತಿರಸ್ಕರಿಸಿ ದೇವೇಗೌಡರಿಗೆ ಶಕ್ತಿಯನ್ನು ತುಂಬಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್ ಪಾಷ, ಸದಸ್ಯ ಸಮೀರ್, ಗೋಪಾಲ್, ಮುಖಂಡರಾದ ಚನ್ನವೀರಪ್ಪ, ಅಣ್ಣಪ್ಪಶೆಟ್ಟಿ ಹಾಗೂ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.