ಪ್ರಾಧ್ಯಾಪಕರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ವಿದ್ಯಾರ್ಥಿಗಳು
ಕನ್ನಡಪ್ರಭ ವಾರ್ತೆ , ಆಲೂರು , ಫೆ. 4
ಪದವಿ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ, ಮಂಗಳವಾರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಠ ಹೇಳಿಕೊಡುವ ಪ್ರಾಧ್ಯಾಪಕರನ್ನೇ ಕೊಠಡಿಯೊಳಗೆ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟು ಹಿಡಿದ ವಿದ್ಯಾರ್ಥಿಗಳು: ಬೆಳಗ್ಗೆ ಕಾಲೇಜಿನ ಪ್ರಾಧ್ಯಾಪಕರನ್ನೇ ಕಾಲೇಜಿನಿಂದ ಹೊರಗಟ್ಟಿ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಕೊಠಡಿ ಸಮಸ್ಯೆ, ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಗ್ರಂಥಾಲಯದ ಸಮಸ್ಯೆ, ಶೌಚಾಲಯದ ಸಮಸ್ಯೆ, ಪೀಠೋಪಕರಣ ಸಮಸ್ಯೆ, ಉಪನ್ಯಾಸಕರ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಪರಿಹರಿಸದವರೆತು ಕಾಲೇಜಿನ ಬೀಗವನ್ನು ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಭರವಸೆ: ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಶಾಸಕರು, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ಸಮಸ್ಯೆಗಳ ಬಗ್ಗೆ ವಿವರಿಸಿದ ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಸ್ಥಳದಲ್ಲಿ ಇದ್ದ ಉಪ ವಿಭಾಗಾಧಿಕಾರಿಗಳಿಗೆ ಕಾಲೇಜಿಗೆ ರಸ್ತೆ ವ್ಯವಸ್ಥೆಯನ್ನು ತೋಟಗಾರಿಕಾ ಇಲಾಖೆಯೊಂದಿಗೆ ಮಾತನಾಡಿ ಶೀಘ್ರ ಪರಿಹರಿಸುವಂತೆ ಸೂಚಿಸಿದರು. ಅಲ್ಲದೇ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಆದರೂ, ಸಹ ಇದಕ್ಕೆ ಮಣಿಯದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಡದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.
ಆಕ್ರೋಶ: ನಂತರ ಪ್ರತಿಭಟನಾಕಾರರು ಮಾತನಾಡಿ, ಕಳೆದ ಮೂರು ವರ್ಷಗಳಿಂದಲೂ ಸೂಕ್ತ ಕೊಠಡಿಗಳಿಗೇ ಇಲ್ಲದೆ ಕ್ರೀಡಾಂಗಣದ ಬಳಿ ಇರುವ 2 ಕೊಠಡಿಯಲ್ಲಿ ಪಾಠ ಕೇಳುವಂತಾಗಿದೆ. ಶೌಚಾಲಯ ಇಲ್ಲದೇ ಮೂರು ವರ್ಷಗಳಿಂದ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಯಾತನೆ ಹೇಳತೀರದು. ಅಲ್ಲದೇ, ಪಕ್ಕದ ಜೂನಿಯರ್ ಕಾಲೇಜಿನಲ್ಲಿ ಬರುವ ಬೋರ್ವೆಲ್ನಲ್ಲಿ ಬರುವ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ ಬಂದಿದೆ ಎಂದರಲ್ಲದೇ, ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿರುವುದಾಗಿ ತಿಳಿಸಿದರು.
ಡಿಸಿ ಬರಲೇಬೇಕೆಂದರು: ಶಾಸಕರು ನಿಗರ್ಮಸಿದ ನಂತರ ಬೀಗ ತೆರೆದು ಕೊಠಡಿಯೊಳಗೆ ಪ್ರಾಧ್ಯಾಪಕರನ್ನೇ ಕೂಡಿ ಹಾಕಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳು ಬರಲೇ ಬೇಕು ಅಂತ ಪಟ್ಟು ಹಿಡಿದರು.
ಸಂಜೆಯಾದರೂ ಪ್ರಾಧ್ಯಾಪಕರನ್ನು ಕಾಲೇಜಿನಿಂದ ಹೊರಬಿಡದೆ ಅಶಿಕ್ಷಿತರಂತೆ ವರ್ತಿಸಿದ ವಿದ್ಯಾರ್ಥಿಗಳು ಡಿಸಿ ಅವರು ಇಲ್ಲಿಗೆ ಬರಲಿ ಎಂದು ಪ್ರತಿಭಟಿಸಿದರು.
ತಾತ್ಕಾಲಿಕ ತಡೆ: ನಂತರ ಕತ್ತಲಾದ್ದರಿಂದ ಬೀಗ ತೆರೆದು ತಮ್ಮ ತಮ್ಮ ಮನೆಗಳಿಗೆ ವಾಪಸ್ ಆದ ವಿದ್ಯಾರ್ಥಿಗಳು ನಾಳೆಯಿಂದ ಪುನಃ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಪ್ರಾಧ್ಯಾಪಕರನ್ನೇ ಕಾಲೇಜಿನಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ಕೆಲವು ರೀತಿ ನೀತಿಗಳಿದ್ದು, ಅದರಂತೆ ನಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

