ಹಾಸನ

ಹಿಂದುಳಿದವರು ಒಂದಾಗದಿದ್ದರೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ

Published On :

ಕನ್ನಡಪ್ರಭ ವಾರ್ತೆ ಟಿ ಹಾಸನ ಟಿ ಫೆ. 6
ತಮ್ಮಲ್ಲಿನ ವೈಮನಸ್ಸು, ಅಸಮಾಧಾನತೆಯನ್ನು ಬದಿಗೊತ್ತಿ ಹಿಂದುಳಿದ ಜಾತಿಗಳು ಎಲ್ಲಿಯವರೆವಿಗೂ ಒಮ್ಮನಸ್ಸಿನಿಂದ ಒಂದಾಗುವುದಿಲ್ಲವೋ ಅಲ್ಲಿಯವರೆವಿಗೂ ಸಾಮಾಜಿಕ ನ್ಯಾಯದ ಸ್ಥಿರೀಕರಣ ಸಾಧ್ಯವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇಲ್ಲಿ ಹೇಳಿದ್ದಾರೆ.
ಪಟ್ಟಣದಲ್ಲಿನ ದೇವಾಂಗ ಸಮುದಾಯ ಭವನದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಸಮಾಜವು ತನ್ನಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆ ಸಮಾಜದಲ್ಲಿನ ಎಲ್ಲಾ ವರ್ಗದ ಜನರಲ್ಲಿಯೂ ಒಗ್ಗಟ್ಟು ಮೂಡಿದಾಗ ಮಾತ್ರವೇ ಸಮಾನತೆ ಸಾಧ್ಯ ಎಂದರು.
ಒಳ ಮೀಸಲಾತಿ ತಂದಿದ್ದರು: ರಾಷ್ಟ್ರನಾಯಕರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ತರುವಲ್ಲಿ ವಿಫಲವಾದಾಗ, ತಾವು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ, ಒಳಮೀಸಲಾತಿ ಜಾರಿಗೆ ತಂದು ಎಲ್ಲ ವರ್ಗಗಳಿಗೂ ಸಮಾಜದಲ್ಲಿ ಸಮಾನತೆಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾಗಿ ಅವರು ಈ ಸಂದರ್ಭದಲ್ಲಿ ನುಡಿದರು.
ರೇವಣ್ಣ ಭರವಸೆ: ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ವರ್ಗಗಳ ಸಮುದಾಯ ಭವನಗಳಿಗೂ ಅಗತ್ಯ ಸಹಕಾರ ನೀಡಿರುವುದಾಗಿ ತಿಳಿಸಿದ ಅವರು, ದೇವಾಂಗ ಸಮಾಜದ ಸಮುದಾಯ ಭವನದ ನಿರ್ಮಾಣಕ್ಕೆ ರು. 10 ಲಕ್ಷ ನೀಡಿದ್ದು, ಇನ್ನುಳಿದ ಕಾಮಗಾರಿಗಳ ಪೂರೈಕೆಗಾಗಿ ಅಗತ್ಯವಾದ ಅನುದಾನ ನೀಡುವುದಾಗಿ ಈ ಭರವಸೆ ನೀಡಿದರು.
ಇದೇ ವೇಳೆ, ಪಟ್ಟಣದಲ್ಲಿನ ಕುರುಹಿನಶೆಟ್ಟಿ ಸಮುದಾಯ ಭವನದ ಆಧುನೀಕರಣ ಕಾಮಗಾರಿ, ಸವಿತಾ ಸಮಾಜದ ಸಮುದಾಯ ಭವನದ ನಿರ್ಮಾಣಕ್ಕೂ ಅಗತ್ಯ ಅನುದಾನ ನೀಡುವುದಾಗಿ ಅವರು ತಿಳಿಸಿದರು.
ಆಸ್ಪತ್ರೆ ಕಾಮಗಾರಿಗೆ ಶೀಘ್ರವೇ ಚಾಲನೆ: ಶೀಘ್ರದಲ್ಲಿಯೇ ದೇವಾಂಗ ರಾಮಮಂದಿರದ ರಸ್ತೆಗೆ ಡಾಂಬರೀಕರಣ, ಪಟ್ಟಣದ ಒಳಚರಂಡಿ ವ್ಯವಸ್ಥೆಯ ಉನ್ನತಿಗಾಗಿ ರು. 2.5 ಕೋಟಿ ಅನುದಾನ, ರು. 7.5 ಕೋಟಿ ವೆಚ್ಚದಲ್ಲಿ ಮಕ್ಕಳ ಆಸ್ಪತ್ರೆ ಮತ್ತು ಮಹಿಳೆಯರ ಹೆರಿಗೆ ಆಸ್ಪತ್ರೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾಂಭಿಸಲಾಗುವುದು ಎಂದರು.
ಸಮಾರಂಭದಲ್ಲಿ ಸಮಾಜ ಸಮುದಾಯ ಭವನದ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹಂಪೆಯ ಗಾಯಿತ್ರಿ ಪೀಠದ ಪೀಠಾಧ್ಯಕ್ಷ ಶ್ರೀದಯಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಬಿಎಂಟಿಸಿಯ ಭದ್ರತಾ ವಿಭಾಗದ ಐಜಿಪಿ ಡಾ.ಜಿ. ರಮೇಶ್, ಬೆಂಗಳೂರು ಜಿಲ್ಲೆಯ ನಿವಣತ್ತ ವಿಶೇಷ ಜಿಲ್ಲಾಧಿಕಾರಿ ಬಿ. ನಾಗರಾಜು, ಪುರಸಭಾಧ್ಯಕ್ಷೆ ಎಚ್.ಆರ್. ಕಲಾವತಿ, ಪುರಸಭೆ ಸದಸ್ಯೆ ಸರಸ್ವತಿ, ಕರ್ನಾಟಕ ದೇವಾಂಗ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜೇಶ್, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್. ಸೂರ್ಯನಾರಾಯಣ, ದೇವಾಂಗ ಸಂಘದ ಜಿಲ್ಲಾಧ್ಯಕ್ಷ ರತನ್ ಕುಮಾರ್, ತಾಲೂಕು ಅಧ್ಯಕ್ಷ ಎಚ್.ಬಿ. ರಾಜಶೇಖರ್, ಉಪಾಧ್ಯಕ್ಷ ಎಚ್.ಎನ್. ಮೂರ್ತಿ, ದೇವಾಂಗ ಬನಶಂಕರಿ ಭಕ್ತ ಮಂಡಳಿ ಅಧ್ಯಕ್ಷ ಎಚ್.ಎ. ಕಾಂತರಾಜು, ಚಿತ್ರನಟಿ ರಮ್ಯಾ ಬಾರ್ನಾ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.