ಹಾಸನ

ದೀನದಯಾಳ್ ಉಪಾಧ್ಯಾಯರ ಪುಣ್ಯತಿಥಿ

Published On :

ಬೇಲೂರು: ಜನಸಂಘದ ಸಂಸ್ಥಾಪಕ ದೀನದಯಾಳ್ ಉಪಾಧ್ಯಾಯರ ಪುಣ್ಯತಿಥಿಯ ಕಾರ್ಯಕ್ರಮವನ್ನು ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.  ತಾಲೂಕು  ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ದೀನದಯಾಳ ಉಪಧ್ಯಾಯರು ತಮ್ಮ ಜೀವನವನ್ನು ದೇಶದ ಜನಸಂಘದ ಸೇವೆಗಾಗಿ ಮುಡುಪಾಗಿಟ್ಟಿದ್ದರು, ಅವರ ಸರಳ ಜೀವನ ಹಾಗೂ ದೇಶ ಪ್ರೇಮ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಲಿ ಎಂದು ಹೇಳಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್, ವಿಜಯಲಕ್ಷ್ಮಿ, ಜಯಣ್ಣ ಇತರರು ಇದ್ದರು.
ನಾಳೆ ವಿದ್ಯುತ್ ವ್ಯತ್ಯಯ
ಹಾಸನ: ತುರ್ತು ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಫೆ. 15ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಹಾಸನ ನಗರದ ಹೊಸಲೈನ್ ರಸ್ತೆ, ಸಂತೆ ಪೇಟೆ ಸುತ್ತ ಮುತ್ತಲಿನ ಪ್ರದೇಶ, ಮೆಡಿಕಲ್ ಕಾಲೇಜ್, ಆರ್.ಸಿ. ರಸ್ತೆ, ಹೊಸಕೊಪ್ಪಲು, ಚನ್ನಪಟ್ಟಣ ಇಂಡಸ್ಟ್ರಿಯಲ್ ಏರಿಯಾ, ವಿಜಯನಗರ, ಬೈಲಹಳ್ಳಿ, ಹನುಮಂತಪುರ, ಎನ್.ಆರ್. ವೃತ್ತ, ಕಟ್ಟಿನ ಕೆರೆ ಮಾರ್ಕೆಟ್, ಡಿ.ಸಿ ಕಚೇರಿ, ಹರ್ಷ ಮಹಲ್ ರಸ್ತೆ, ಪಾಂಡುರಂಗ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ, ನೋಡಲ್ ಕೇಂದ್ರದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
ಅಧ್ಯಕ್ಷರಾಗಿ ನಂದೀಶ್ ಆಯ್ಕೆ
ಜಾವಗಲ್: ಹೋಬಳಿಯ  ಕೋಳಗುಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇತ್ತೀಚೆಗೆ ಚುನಾವಣೆ ನಡೆದು ನೂತನ ಅಧ್ಯಕ್ಷರಾಗಿ ಕೆ.ಎಂ. ನಂದೀಶ್, ಉಪಾಧ್ಯಕ್ಷರಾಗಿ ಶಿವಮ್ಮ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ.ಎಸ್. ನಂದೀಶ್, ಕೆ.ಆರ್. ಕುಬೇರಪ್ಪ, ಗಂಗಾಧರಪ್ಪ, ಪುಟ್ಟಣ್ಣ, ಕೆ.ಎನ್. ಲೋಕೇಶ್, ಕೆ.ಬಿ. ಲೋಕೇಶ, ಪರಮೇಶ, ಲಲಿತಮ್ಮ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿ ಶಿವಲಿಂಗಯ್ಯ ಘೋಷಿಸಿದರು.  ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ತಾಪಂ ಮಾಜಿ ಸದಸ್ಯ ಮಹಾಲಿಂಗಪ್ಪ, ಮುಖಂಡರಾದ ಕರಿಸಿದ್ದಪ್ಪ, ಗ್ರಾಪಂ ಮಾಜಿ ಸದಸ್ಯರಾದ ಕೆ.ಆರ್. ಮಹದೇವಪ್ಪ, ಶಿವಕುಮಾರ್ ಮತ್ತಿತರರು ಅಭಿನಂದಿಸಿದರು.  ಜಾವಗಲ್ ಪೊಲೀಸ್ ಠಾಣಾಧಿಕಾರಿ ಸಿ.ಪಿ. ನವೀನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿತ್ತು.
ಸಂತೆ ಸುಂಕ ಹರಾಜು
ಜಾವಗಲ್: ಜಾವಗಲ್ ಸಂತೆ ಸುಂಕದ ಹರಾಜಿನಿಂದ 2014-15 ಸಾಲಿಗೆ ರು. 4,74,200 ಆದಾಯ ಗ್ರಾಮಪಂಚಾಯ್ತಿಗೆ ಬಂದಿದೆ. ಜಾವಗಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತ ಮಂಜುನಾಥ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಂತೆ ಸುಂಕದ ಹರಾಜು ಪ್ರಕ್ರಿಯೆ ನಡೆದು ಸಂತೆ ಸುಂಕ, ಗೊಬ್ಬರ, ಹಂದಿ ಮಾಂಸ, ಬಾಬುಗಳ ಹರಾಜು ಮಾಡಲಾಯಿತು ಶಿವಕುಮಾರ್ ಅವರು ರು. 4,70,700ಗೆ ಬಿಡ್ ಮಾಡಿದರು. ಪಿಡಿಓ ವಿರೂಪಾಕ್ಷಪ್ಪ, ಮಲ್ಲೇಶಪ್ಪ ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾಗಿದ್ದರು. ಪ್ರಭಾಕರ, ಪರಮೇಶ್, ಕುಮಾರ್, ಲೋಹಿತ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ನ್ಯಾಯಾಲಯ ಪ್ರಕರಣಗಳ ಅದಾಲತ್
ಹಾಸನ: ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಕಂದಾಯ ಮೇಲ್ಮನವಿಗಳು ಕಂದಾಯ ಮರು ಪರಿಶೀಲನಾ ಅರ್ಜಿಗಳು, ಭೂಮಾಪನ ಮೇಲ್ಮನವಿ ಅರ್ಜಿಗಳು, ಮುನ್ಸಿಪಾಲಿಟಿ ಪ್ರಕರಣಗಳ ವಿಲೇವಾರಿಗೆ ಅನುಕೂಲವಾಗುವಂತೆ ಫೆ. 18 ಮತ್ತು ಫೆ. 19ರಂದು ಬೆಳಿಗ್ಗೆ 11ಕ್ಕೆ ನ್ಯಾಯಾಲಯ ಪ್ರಕರಣಗಳ ಅದಾಲತ್ ನಡೆಯಲಿದ್ದು, ಮೊಕದ್ದಮೆ ವಿಚಾರಣೆಗೆ ಸಂಬಂಧಪಟ್ಟವರು ಆ ದಿನ ನ್ಯಾಯಾಲಯದಲ್ಲಿ ತಪ್ಪದೇ ಹಾಜರಿರುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ರಾಜ್ಯಮಟ್ಟದ ಹಾಕಿ ಪಂದ್ಯಾವಳಿ
ಹಾಸನ:  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜ್ಯಮಟ್ಟದ ಅಂತರ ಶಾಲಾ ಹಾಕಿ ಪಂದ್ಯಾವಳಿ: 2013-14ನ್ನು ಫೆ. 15 ಮತ್ತು 16ರಂದು ಬೆಳಿಗ್ಗೆ 10 ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಹೆಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ್ ಲಕ್ಷ್ಮಣಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಪ್ರತಾಪ್, ಹಿರಿಯ ಕ್ರೀಡಾ ಪಟು ಚಂದ್ರಶೇಖರ್, ರಾಷ್ಟ್ರೀಯ ಹಾಕಿ ಕ್ರೀಡಾಪಟು, ಅಂಚೆ ಇಲಾಖೆಯ ತಾರಾನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬಿಜೆಪಿಯಿಂದ ನಮೋ ಚಾಯ್ ಕಾರ್ಯಕ್ರಮ
ಹಾಸನ: ನಗರದ ಬಿಜೆಪಿ ಕಾರ್ಯಕರ್ತರು ಗದುರುವಾರ ನಮೋ ಚಾಯ್ ಕಾರ್ಯಕ್ರಮವನ್ನು ಹೇಮಾವತಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದರು. ಜನರಿಗೆ ಮೊದಲು ಟೀ ವಿತರಿಸಿದ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ಆಗುವ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿದರು. ದೇಶದ ಉಳಿವಿಗಾಗಿ ಮೋದಿ ಅಗತ್ಯವಿದೆ ಎಂಬ ಅರಿವನ್ನು ಜನರಲ್ಲಿ ಮೂಡಿಸಲಾಯಿತು. ಇದೆ ವೇಳೆ ಮೋದಿಯ ಅಭಿವೃದ್ಧಿಯ ಗುರಿ ಇರುವ ಕರಪತ್ರವನ್ನು ಪ್ರದರ್ಶಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಮುಖಂಡರಾದ ಗುರುಪ್ರಸಾದ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ನಾಗೇಶ್, ಐನೇಟ್ ವಿಜಿಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಮ್.ಎಸ್. ಕೃಷ್ಣೇಗೌಡ ಇತರರು ಇದ್ದರು.
ಅವಿರೋಧ ಆಯ್ಕೆ
ಜಾವಗಲ್: ಜಾವಗಲ್ ಹೋಬಳಿ ಹಂದ್ರಾಳು ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳ ಚುನಾವಣೆಯು ಇತ್ತೀಚೆಗೆ ಈ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಹೆಚ್.ಬಿ. ಸಂಗಮೇಶ, ಉಪಾಧ್ಯಕ್ಷರಾಗಿ ಹೆಚ್.ಎಸ್. ಶಿವಕುಮಾರ್, ನಿರ್ದೇಶಕರಾಗಿ ಹಿಂದಲಮನೆ ಬಸವರಾಜು, ಚಂದ್ರಶೇಖರ್, ಗೀತಾ, ಕುಮಾರಸ್ವಾಮಿ, ಕುಮಾರಯ್ಯ, ಬಸವಯ್ಯ, ಜಗದಾಂಬ, ಹೆಚ್. ಹೆಚ್. ಶಿವಕುಮಾರ್ ಆಯ್ಕೆ ಯಾಗಿದ್ದಾರೆಂದು ಚುನಾವಣಾಧಿಕಾರಿ ಶ್ರೀರಂಗನ್ ಪ್ರಕಟಿಸಿದರು. ಕಾರ್ಯದರ್ಶಿ ಹೆಚ್.ಸಿ. ಬಸವರಾಜು ಮತ್ತು ಗ್ರಾಮಸ್ಥರು ಇದ್ದರು.
ಎನ್‌ಎಸ್‌ಎಸ್ ಶಿಬಿರ 16ರಿಂದ
ಅರಕಲಗೂಡು: ಗೊರೂರಿನ ಅರಕಲಗೂಡು ನಂಜುಂಡಶ್ರೇಷ್ಠಿ ವರದರಾಜುಲು ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ ತಾಲೂಕಿನ ಕತ್ತೀಮಲ್ಲೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಶಾಸಕ ಎ. ಮಂಜು ಅವರು ಶಿಬಿರದ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಂ.ಆರ್.ಚಂದ್ರಶೇಖರ್ ವಹಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ಎ.ಜಿ. ರಾಮನಾಥ್ ಭಾಗವಹಿಸುವರು.
ಇಂದು ಹುಣ್ಣಿಮೆ ಕಾರ್ಯಕ್ರಮ
ಹಾಸನ: ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಫೆ. 14ರಂದು ಸಂಜೆ 6.30ಕ್ಕೆ ಶ್ರೀ ಮಠದ ಆವರಣದಲ್ಲಿರುವ ನವನಾಥಯಾಗ ಮಂಟಪದಲ್ಲಿ ನಡೆಯಲಿರುವ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಕವಿ, ಸಾಹಿತಿ ಬೇಲೂರು ನವಾಬ್ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಬೇಲೂರು ನವಾಬ್ ಅವರು ಸರ್ವ ಜನಾಂಗದ ಶಾಂತಿಯ ತೋಟ ವಿಷಯ ಕುರಿತು ಉಪನ್ಯಾಸ ನೀಡುವರು. ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಹಾಸನದ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶೈಲವಲ್ಲಭ ಭಜನಾ ಮಂಡಳಿ, ಶ್ರೀ ಶಕ್ತಿ ಯೊಗ ಕೇಂದ್ರ, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜ ಮತ್ತು ಒಕ್ಕಲಿಗರ ಮಹಿಳಾ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಡುವರು.
ಪಾರ್ಕಿಂಗ್ ಶುಲ್ಕ ಏರಿಕೆ
ಹಾಸನ: ನಗರದ ಹೊಸ ಬಸ್ ನಿಲ್ದಾಣದ ಪಾರ್ಕಿಂಗ್ ದರ ಪರಿಷ್ಕರಿಸಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದ್ದಾರೆ. ಹೊಸ ಬಸ್ ನಿಲ್ದಾಣದಲ್ಲಿ ಸೈಕಲ್ ಪಾರ್ಕಿಂಗ್ ಮಾಡಲು 1 ಗಂಟೆಗೆ 1 ರು., 1 ಗಂಟೆಯಿಂದ 4 ಗಂಟೆವರೆಗೆ 2 ರು., 4ರಿಂದ 8 ಗಂಟೆಯವರೆಗೆ 3 ರು. ಮತ್ತು 8 ರಿಂದ 24 ಗಂಟೆಯವರೆಗೆ 5 ರು. ನಿಗದಿಪಡಿಸಿದೆ. ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಲು 1 ಗಂಟೆಗೆ 2 ರು., 1 ಗಂಟೆಯಿಂದ 4 ಗಂಟೆವರೆಗೆ 3 ರು., 4ರಿಂದ 8 ಗಂಟೆಯವರೆಗೆ 4 ರು. ಮತ್ತು 8 ರಿಂದ 24 ಗಂಟೆಯವರೆಗೆ 8 ರು. ನಿಗದಿಪಡಿಸಿದೆ. ಅದರಂತೆ ಕಾರು, ಜೀಪು ಇತರೆ ವಾಹನಗಳ ಪಾರ್ಕಿಂಗ್ ಮಾಡಲು 1 ಗಂಟೆಗೆ 3 ರು., 1 ಗಂಟೆಯಿಂದ 4 ಗಂಟೆಯವರೆಗೆ 6 ರು., 4ರಿಂದ 8 ಗಂಟೆಯವರೆಗೆ 10 ರು. ಮತ್ತು 8ರಿಂದ 24 ಗಂಟೆಯವರೆಗೆ 15 ರು. ನಿಗದಿಪಡಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ  ತಿಳಿಸಿದ್ದಾರೆ.
ವಾರ್ಷಿಕೋತ್ಸವ
ಅರಕಲಗೂಡು: ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಾಲಾ ವಾರ್ಷಿಕೋತ್ಸವ ಸಮಾರಂಭವು ಶನಿವಾರ ಬೆಳಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.