ಹಾಸನ

ಅಡಕೆ ನಿಷೇಧಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ

Published On :


ಹೊಳೆನರಸೀಪುರ: ಕೇಂದ್ರ ಸರ್ಕಾರವು ತಂಬಾಕು ಮತ್ತು ಅಡಕೆ ಬೆಳೆಗಳನ್ನು ನಿಷೇಧಿಸುವ ಮೊದಲು ರೈತರ ಆರ್ಥಿಕ ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ ಮಾಡುವುದೂ ಸೇರಿದಂತೆ ರೈತರ ಹಿತರಕ್ಷಣೆಗೂ ಮುಂದಾಗಲಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ಗುಡ್ಡೇನಹಳ್ಳಿ ಬಳಿ ತಂಬಾಕು ಮಂಡಳಿಯು ತಂಬಾಕು ಬೆಳೆಯ ಹರಾಜು ಮಾರುಕಟ್ಟೆಯ ನಿರ್ಮಾಣಕ್ಕೆ ಭಾನುವಾರ ಏರ್ಪಡಿಸಿದ್ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ಹಾಗೂ ಅಡಕೆ ಬೆಳೆಗಳನ್ನು ನೆರೆಯ ಆಂಧ್ರಕ್ಕಿಂತಲೂ ಕರ್ನಾಟಕದಲ್ಲಿಯೇ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇವುಗಳನ್ನು ನಿಷೇಧಿಸುವ ಮೊದಲು ಇಲ್ಲಿನ ರೈತರ ಹಿತವನ್ನು ಕಾಯುವ ನಿಟ್ಟನಲ್ಲಿ ಕೇಂದ್ರ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ ಎಂದರು.
ಕೇಂದ್ರದ ಮೇಲೆ ಒತ್ತಡ ತನ್ನಿ: ತಂಬಾಕು ಹಾಗೂ ಅಡಕೆ ನಿಷೇಧದ ಮಸೂದೆ ಮಂಡನೆಯಾಗಿ ಸಂಸತ್ತಿನಲ್ಲಿ ಚರ್ಚೆಯೂ ಆಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ಗೂ ಪ್ರಮಾಣ ಪತ್ರ ಸಲ್ಲಿಸಿದೆ. ರಾಜ್ಯ ಸರ್ಕಾರವೇನೋ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದೆ. ಆದರೆ ಅಷ್ಟೇ ಸಾಲದು ತಂಬಾಕು ಮಂಡಳಿ ಹಾಗೂ ಶಾಸಕ ಎ. ಮಂಜು ಅವರ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಗೌಡರು ಹೇಳಿದರು.
ಆತಂಕ: ತಂಬಾಕು ಬೆಳೆಯಲ್ಲಿ ಕರ್ನಾಟಕದ ಪಾಲು ಕೇವಲ ಹತ್ತನೇ ಒಂದು ಭಾಗ ಮಾತ್ರ. ಆಂಧ್ರದ ಗುಂಟೂರು ಮತ್ತು ಕರ್ನಾಟಕದ ತಂಬಾಕಿಗೂ ಹೋಲಿಸುವುದು ಸಾಧ್ಯವೇ ಇಲ್ಲ. ತಂಬಾಕು ವ್ಯವಹಾರದಲ್ಲಿ ಆಂಧ್ರದ ಲಾಭಿ ಭಾರಿ ಜೋರು. ಮಂಡಳಿಯ ನಿಯಂತ್ರಣವೂ ಆಂಧ್ರದ ಕೈಯಲ್ಲಿಯೇ ಇದೆ. ಕರ್ನಾಟಕದ ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ, ರಾಮನಾಥಪುರ, ಹಳ್ಳಿಮೈಸೂರು ಭಾಗದಲ್ಲಿ ಬೆಳೆಯುವ ತಂಬಾಕು ಉನ್ನತ ಗುಣಮಟ್ಟದ ರಫ್ತು ಯೋಗ್ಯವಾದುದು. ಬೆಳೆಗಾರರ ಪರ ತಾವು ಮಾತನಾಡಿದರೂ ಬೆಂಬಲ ಸಿಕ್ಕಿಲ್ಲ.  ತಂಬಾಕು ನಿಷೇಧ ಜಾರಿಯಾದರೆ ಬೆಳೆಗಾರರು ಬೀದಿಗೆ ಬೀಳಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸ್ಥಿತಿ ಕಠಿಣ: ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅನುಷ್ಠಾನಕ್ಕೆ ಈಗಾಗಲೇ ಅಧಿಸೂಚನೆ ಹೊರ ಬಿದ್ದಿದೆ. ಇನ್ನು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಹೇಮಾವತಿ ನಾಲೆಗಳಲ್ಲಿ ಕೃಷಿಗಾಗಿ ನೀರು ಹರಿಯುವುದಿಲ್ಲ. 24 ಏತ ನೀರಾವರಿ ಯೋಜನೆಗಳನ್ನೂ ರದ್ದುಪಡಿಸಬೇಕಾಗುತ್ತದೆ ಎಂದ ಗೌಡರು, ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೂ ಕಾವೇರಿ ನದಿ ನೀರು ಬದಲು ಅಂತರ್ಜಲ ಬಳಸಿ ಎಂದು ನ್ಯಾಯಾಧಿಕರಣದ ಇಬ್ಬರು ಸದಸ್ಯರು ಷರಾ ಬರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇನ್ನು ಮುಂದೆ ನಾಲೆಗಳಲ್ಲಿ ನೀರು ಹರಿಸುತ್ತೇವೆ ಎಂದು ರಾಜಕಾರಣಿಗಳು ಹೇಳಿದರೆ ಅದು ಸುಳ್ಳು. ಈಗ ತೋಡಿರುವ ನಾಲೆಗಳಲ್ಲಿ ನೀರು ಹರಿಯುವುದಿಲ್ಲ. ಅವು ಪಾಳು ಬಿದ್ದು, ದನ- ಕುರಿಗಳು ಬಿದ್ದು ಸಾಯುತ್ತವೆ ಅಷ್ಟೆ ಎಂದರು.
ಶಾಸಕರ ಸ್ಪಷ್ಟನೆ: ಮಾಜಿ ಪ್ರಧಾನಿ ತಮ್ಮ ಭಾಷಣದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ಅರಕಲಗೂಡು ಶಾಸಕ ಎ. ಮಂಜು ಮಾತನಾಡಿದರು. ಮೊದಲೇ ತಮ್ಮ ಭಾಷಣವನ್ನು ಮುಗಿಸಿದ್ದರೂ, ಸಮಾರಂಭ ಮುಗಿಯುವ ಹಂತದಲ್ಲಿ ಮತ್ತೊಮ್ಮೆ ಮಾತಿಗೆ ನಿಂತ ಶಾಸಕ ಎ. ಮಂಜು, ಹಳ್ಳಿಮೈಸೂರು ಭಾಗದ ರೈತರು ತಂಬಾಕು ಮಾರಾಟಕ್ಕೆ 40 ಕಿಮೀ ದೂರದ ರಾಮನಾಥಪುರಕ್ಕೆ ಹೋಗಬೇಕಾಗಿತ್ತು. ಹಾಗಾಗಿ ಹಳ್ಳಿಮೈಸೂರು ಬಳಿ 150 ಎಕರೆ ಪ್ರದೇಶವಿರುವ ಸರ್ಕಾರಿ ಗೋಮಾಳದಲ್ಲಿ ತಂಬಾಕು ಹರಾಜು ಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ತಂಬಾಕು ನಿಷೇಧಕ್ಕೆ ಮುಂದಾಗಿದ್ದರೂ ಎಲ್ಲಾ ರಾಜಕಾರಣಿಗಳೂ ಪಕ್ಷ ಬೇಧ ಮರೆತು ರೈತರ ಪರವಾಗಿ ಹೋರಾಟ ಮಾಡಿದರೆ ಸರ್ಕಾರ ರೈತರ ಪರವಾದ ನಿರ್ಧಾರ ತೆಗೆದು ಕೊಳ್ಳಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ತಂಬಾಕು ನಿಷೇಧ ಅನಿವಾರ್ಯವಾದರೆ ಪ್ರತಿಯೊಬ್ಬ ಬೆಳೆಗಾರನಿಗೂ ಸರ್ಕಾರ ಪರಿಹಾರ ನೀಡಲೇಬೇಕು ಎಂದು ಪ್ರತ್ಯುತ್ತರಿಸಿದರು.
ರೇವಣ್ಣ ಮೌನ: ಮಾಜಿ ಪ್ರಧಾನಿ ಹಾಗೂ ಎ. ಮಂಜು ಏಟಿಗೆ ಎದುರೇಟು ಎಂಬಂಥ ಮಾತಿನ ಲಹರಿಗೆ  ವೇದಿಕೆಯಲ್ಲಿದ್ದ ಶಾಸಕ ಎಚ್.ಡಿ. ರೇವಣ್ಣ ಮಾತ್ರ ಮೌನವಹಿಸಿದ್ದು ಕಂಡುಬಂತು.
ಈ ಸಂದರ್ಭದಲ್ಲಿ ಭಾರತ ತಂಬಾಕು ಮಂಡಳಿಯ ಅಧಿಕಾರಿ ಬಿಪಿನ್ ಬಿಹಾರಿ ಚೌಧರಿ, ತಂಬಾಕು ಮಂಡಳಿಯ ರಾಜ್ಯಾಧ್ಯಕ್ಷ ಡಾ.ಕೆ. ಗೋಪಾಲ್, ಕಾರ್ಯಕಾರಿ ನಿರ್ದೇಶಕ ಸಿ.ವಿ. ಸುಬ್ಬರಾವ್, ಮಾರುಕಟ್ಟೆ ಅಧಿಕಾರಿ ಶಿವಕುಮಾರ್, ಮಂಡಳಿ ಸದಸ್ಯರಾದ ಟಿ.ಎಂ. ಮಹೇಶ್, ಬಿ.ಎನ್. ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.