ಸ್ವಪಕ್ಷೀಯರಿಂದಲೇ ಅಧ್ಯಕ್ಷರ ಪದಚ್ಯುತಿಗೆ ಯತ್ನ
ಎಸ್.ಎಂ. ಮಂಜುನಾಥ್
ಸಕಲೇಶಪುರ: ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್ ಅವರನ್ನು ಪದಚ್ಯುತಿಗೊಳಿಸಲು ಸ್ವಪಕ್ಷೀಯರಿಂದಲೇ ಪ್ರಯತ್ನ ಆರಂಭವಾಗಿದೆ.
ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಸಂತೋಷ್ ಜೈನ್ ಅವರನ್ನು ತಮ್ಮ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಜೆಡಿಎಸ್ ಮುಖಂಡರು ವಿರೋಧಿಸಿದ ಕಾರಣದಿಂದಾಗಿ ಪ್ರಥಮ ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎನ್. ಸತೀಶ್ ಅವರಿಗೆ ಅಧ್ಯಕ್ಷಸ್ಥಾನ ಅನಾಯಸವಾಗಿ ದೊರಕಿತ್ತು. ಮೊದಲ ಮೂರು ತಿಂಗಳು ಎಸ್.ಎನ್. ಸತೀಶ್ ನಂತರ ಸಂತೋಷ್ ಜೈನ್ ಅಧ್ಯಕ್ಷರಾಗಿ ಮುಂದುವರೆಯುವುದು ಎಂಬ ಆಂತರಿಕ ಒಪ್ಪಂದವಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಆದರೆ, ಅಧ್ಯಕ್ಷರಾಗಿ 5 ತಿಂಗಳು ಮುಗಿದರೂ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ರಾಜಿನಾಮೆ ನೀಡದಿರುವುದು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಕೆಲವು ಸದಸ್ಯರನ್ನು ಕೆರಳಿಸಿದ್ದರೆ, ಅಧ್ಯಕ್ಷರು ತಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಇವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಚಿಂತನೆ: 12 ಸದಸ್ಯರ ಈ ಹಿನ್ನೆಲೆಯಲ್ಲಿ, ಗುಂಪು ತೀವ್ರ ಚಟುವಟಿಕೆ ಹಮ್ಮಿಕೊಂಡಿದ್ದು, ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ. ರೇವಣ್ಣನವರೊಂದಿಗೆ ಚರ್ಚೆ ನಡೆಸಿದ್ದು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗುತ್ತದೆ ಎಂಬ ಮಾತುಗಳೂ ಕೇಳಿ ಬಂದಿವೆ. ಇದೆ ಮಾತನ್ನು ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೂ ಈ ಗುಂಪು ಹೇಳಿದ್ದು ಇನ್ನೊಂದು ತಿಂಗಳು ಕಾದು ನೋಡುವ ತೀರ್ಮಾನವನ್ನು ಶಾಸಕರು ಪ್ರಕಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅಧ್ಯಕ್ಷ ಸ್ಥಾನದಿಂದ ಒಂದು ವರ್ಷ ನನ್ನನ್ನು ಕೆಳಗಿಳಿಸುವುದು ಅಸಾಧ್ಯ ಎಂದು ಹೇಳುತ್ತಿರುವ ಎಸ್.ಎನ್. ಸತೀಶ್ ಭಿನ್ನಮತೀಯರ ಗುಂಪಿಗೆ ಸೆಡ್ಡು ಹೊಡೆದಿದ್ದಾರೆ. 23 ಸದಸ್ಯ ಬಲದ ಪುರಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಜೆಡಿಎಸ್ ಬೆಂಬಲಿಗರು ಅಧಿಕಾರ ಹಿಡಿದಿದ್ದರು. ಈಗಾಗಲೇ ಬಹುತೇಕ ಸದಸ್ಯರ ವಿಶ್ವಾಸವನ್ನು ಕಳೆದುಕೊಂಡಿರುವ ಎಸ್.ಎನ್. ಸತೀಶ್ ಇನ್ನೆಷ್ಟು ದಿನ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆಂಬುದನ್ನು ಕಾದುನೋಡಬೇಕಾಗಿದೆ. ಪುರಸಭೆ ಸದಸ್ಯರಾದ ಗಿರೀಶ್ ಹಾಗೂ ಉಮೇಶ್ ಅವರು, ಏಕಪಕ್ಷಿಯ ನಿಧಾರ ಕೈಗೊಳ್ಳುತ್ತಿರುವ ಅಧ್ಯಕ್ಷರ ವರ್ತನೆಯಿಂದ ಬೇಸತ್ತಿರುವ 12 ಸದಸ್ಯರು ವರಿಷ್ಠರಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

