ಹಳ್ಳಿ ಗರ ಬದುಕು ಹಸನಾಗದಿದ್ದರೆ ಶಾಂತಿ ಇಲ್ಲ
ಹಾಸನ: ಎಲ್ಲಿಯವರೆಗೆ ಹಳ್ಳಿಗರ ಬದುಕು ಹಸನಾಗುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ ಮತ್ತು ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಹಾಸನ ನಗರದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಹಾಸನ ಹಾಲು ಒಕ್ಕೂಟದ ನೂತನ 22 ಕೋಟಿ ವೆಚ್ಚದ ನೂತನ ಪ್ಯಾಕಿಂಗ್ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಗೌಡರು, ಇಂದಿಗೂ ಬಹುತೇಕ ಹಳ್ಳಿಗಳು ಹಳ್ಳಿಗಳಾಗಿಯೇ ಉಳಿದಿವೆ. ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆ ಆಗಿಲ್ಲ. ರೈತರು ಬದುಕು ಉತ್ತಮಗೊಂಡಿಲ್ಲ. ಹಳ್ಳಿಗಳನ್ನು ಉದ್ಧಾರ ಮಾಡದೇ ಶಾಂತಿ ಮಂತ್ರವನ್ನು ವೇದಿಕೆಗಳಲ್ಲಿ ಪಠಿಸಿದರೇ ಪ್ರಯೋಜನವಾಗುವುದಿಲ್ಲ. ಈ ಸೂಕ್ಷ್ಮವನ್ನು ಸರ್ಕಾರಗಳು ಅರಿಯಬೇಕು ಎಂದು ಹೇಳಿದರು.
ಗಾಂಧೀಜಿವರು ಹೇಳಿದ್ದು ಗ್ರಾಮೀಣ ಆರ್ಥಿಕ ಅಭಿವೃದ್ದಿ ಆಗಬೇಕೆಂದು ಕನಸು ಕಂಡಿದ್ದರು. ಆ ಕನಸು ಸಾಕಾರಗೊಳಿಸುವ ಬಗ್ಗೆ ಅಧಿಕಾರಸ್ಥರು ಚಿಂತನೆ ಮಾಡದಿದ್ದರೆ, ಅಪಾಯದ ದಿನಗಳು ಎದುರಾಗುವುದರಲ್ಲಿ ಸಂದೇಹವಿಲ್ಲ ಎಂದು ಗೌಡರು ಎಚ್ಚರಿಸಿದರು.
ಉದ್ಯಮಿಗಳಿಂದ ಮೋಸ: ದೇಶದಲ್ಲಿ ಹಣದ ಕೊರತೆ ಇಲ್ಲ. ದುರದೃಷ್ಟವಶಾತ್ ಹಣದ ಸದ್ಬಳಕೆ ಆಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅನುತ್ಪಾದಕ ವೆಚ್ಚಗಳಿಗೆ ಹೆಚ್ಚೆಚ್ಚು ಹಣವನ್ನು ತೊಡಗಿಸುವುದು ಹೆಚ್ಚಾಗಿದೆ. ಇದು ಪ್ರಗತಿಗೆ ಮಾರಕ. ರೈತರು ಮೋಸಗಾರರು ಅಲ್ಲ. ಬಿತ್ತಿದ ಬೆಳೆ ಹಟ್ಟಿಗೆ ಸೇರಿದರೆ ಹಣವನ್ನು ವಾಪಸ್ ಮಾಡಿಯೇ ಮಾಡುತ್ತಾರೆ. ಕೈಗಾರಿಕೋದ್ಯಮಿಗಳು ಹಿಂದಿನಿಂದಲೂ ಸರ್ಕಾರಗಳು ಎಷ್ಟು ಪ್ರಮಾಣದ ಹಣವನ್ನು ಹಿಂತಿರುಗಿಸಿಲ್ಲ ಎಂಬುದನ್ನು ನನಗೆ ಗೊತ್ತಿದೆ ಎಂದು ಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ನಂತರ, ಜಿಲ್ಲೆಯ ಮೂಲಸೌಕರ್ಯಗಳ ಕಾಮಗಾರಿಗೆ ಸಂಬಂಧಿಸಿದಂತೆ, ಉಸ್ತುವಾರಿ ಸಚಿವರು, ಕುಡಿಯುವ ನೀರು ಒದಗಿಸಲು ಹಣ ಬಿಡುಗಡೆ ಮಾಡಿ, ದುದ್ದ, ಚಿಕ್ಕನಾಯಕನಹಳ್ಳಿ ರಸ್ತೆ ಕಾಮಗಾರಿ ಆರಂಭಕ್ಕೆ ಇರುವ ಅಡಚಣೆಗಳನ್ನು ತಪ್ಪಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗೌಡರು ಮನವಿ ಮಾಡಿದರು.
ಪುಸ್ತಕ ಬಿಡುಗಡೆ: ಹಾಸನ ಹಾಲು ಒಕ್ಕೂಟದ ಪ್ರಗತಿ ಮತ್ತು ಸಾಧನೆ ಕುರಿತ ಹೈನುಗಾರರ ಸಾಧನೆ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ರಾಜಕೀಯ ಅಧಿಕಾರ ಸಮರ್ಥರು, ಯೋಗ್ಯರು ಮತ್ತು ವಿವೇಚನಾಶಕ್ತಿ ಇರುವವರ ಕೈಯಲ್ಲಿ ಇದ್ದರೇ ಮಾತ್ರ ದೇಶದ ಪ್ರಗತಿ ಸಾಧ್ಯ. ಆಗ ಗಾಂಧೀಜಿ ಅವರ ಕಂಡ ಗ್ರಾಮ ಸ್ವರಾಜ್ಯ ಕನಸನ್ನು ಈಡೇರಿಸಬಹುದಲ್ಲದೇ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರಸುವುದು ಸೂಕ್ತವಲ್ಲ. ಹಾಸನ ಹಾಲು ಒಕ್ಕೂಟದಿಂದ 75 ಸಾವಿರ ರೈತ ಕುಟುಂಬಗಳಿಗೆ ಸಹಾಯಕವಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದರು.
ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಬೆಲೆ ನೀಡಿ ರೈತರಿಂದ ಹಾಲು ಖರೀದಿಸುವ ಒಕ್ಕೂಟವೆಂದರೆ ಅದು ಹಾಸನ ಒಕ್ಕೂಟ. ದಿನಕ್ಕೆ 5 ಕೋಟಿ ರು. ಬಿಟವಾಡೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಬಂದಿರುವ 5 ಕೋಟಿ ರು. ಲಾಭದ ಹಣವನ್ನು ಏಪ್ರಿಲ್ನಲ್ಲಿ ಹಾಲು ಉತ್ಪಾದಕರಿಗೆ ನೀಡಲಾಗುವುದು. ಪ್ರಧಾನಿಯಾಗಿದ್ದಾಗ ದೇವೇಗೌಡರು, ಹೈನುಗಾರಿಕೆ ಹರಿಕಾರ ಡಾ. ಕುರಿಯನ್, ಅಮೃತ ಪಟೇಲ್ ಮತ್ತು ಕೇಂದ್ರ ಸಚಿವ ಶರದ್ ಪವಾರ್, ರಾಜ್ಯದಲ್ಲಿ ಹೈನುಗಾರಿಕೆ ಕ್ಷೇತ್ರ ಬೆಳೆಯಲು ನೀಡಿದ ಸಹಾಯವನ್ನು ಮರೆಯಲಾಗದು ಎಂದು ಕೃತಜ್ಞತೆ ಸಲ್ಲಿಸಿದರು.
ಶಾಸಕರಾದ ಎಚ್.ಎಸ್. ಪ್ರಕಾಶ್, ಕೆ.ಎಂ. ಶಿವಲಿಂಗೇಗೌಡ, ಪಟೇಲ್ ಶಿವರಾಂ, ಮಾಜಿ ಶಾಸಕ ಬಿ.ವಿ. ಕರೀಗೌಡ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿ ಚೌಡಯ್ಯ, ಜಿಲ್ಲಾಧಿಕಾರಿ ಅನ್ಬುಕುಮಾರ್, ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣವರ, ಜಿಪಂ ಸಿಇಓ ಉಪೇಂದ್ರ ಪ್ರತಾಪ್ಸಿಂಗ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್, ಹಾಸನ ಒಕ್ಕೂಟದ ಎಂ.ಡಿ. ಗೋಪಾಲಯ್ಯ, ಮೈಸೂರು, ಚಾಮರಾಜನಗರ ಒಕ್ಕೂಟದ ಎಂ.ಡಿ. ಸುರೇಶ್ ಬಾಬು ಇತರರು ಇದ್ದರು. ಒಕ್ಕೂಟದ ನಿರ್ದೇಶಕ ನಾರಾಯಣಗೌಡ ಸ್ವಾಗತಿಸಿದರು. ಎವಿಕೆ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಾಹಿತಿ ಡಾ. ಮಲ್ಲೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

