ಹಾಸನ

ಇಂದು ಸಮುದಾಯ ಅಭಿವೃದ್ಧಿ ತರಬೇತಿ

Published On :

ಹಾಸನ: ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಫೆ. 19ರಂದು ನಗರದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವು ನೆಹರು ಯುವಕೇಂದ್ರ ಹಾಗೂ ಶ್ರೀವಿವೇಕಾನಂದ ಯುವಕ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಆಯುಕ್ತ ಪ್ರಕಾಶ್ ಎಸ್. ಯಾಜಿ, ವಿಶ್ವಮಾನವ ಒಕ್ಕೂಟದ ಅಧ್ಯಕ್ಷ ಎಚ್.ಎನ್. ರವಿಕುಮಾರ್, ಎನ್ವೈಕೆ ಸಲಹಾ ಸಮಿತಿ ಸದಸ್ಯ ಮಹೇಶ್, ಅನನ್ಯ ಟ್ರಸ್ಟ್ನ ಅಧ್ಯಕ್ಷೆ ಕೆ.ಟಿ. ಜಯಶ್ರೀ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸದೃಢ ಭಾರತವನ್ನು ಕಟ್ಟಲು ಯುವಜನರ ಮಹತ್ವದ ಪಾತ್ರ, ಪ್ರಾಣಿ ಮತ್ತು ಮಾನವರ ನಡುವಿನ ಸಂಘರ್ಷಕ್ಕೆ ಪರಿಹಾರವೇನು ಎಂಬ ವಿಷಯ ಕುರಿತು ಯುವಕರಿಗೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ಜೊತೆಗೆ ಇಂದಿನ ಸ್ಪರ್ಧಾ ಯುಗದಲ್ಲಿ ಮಹಿಳೆಯರ ಹೊರಗೆ ದುಡಿಯುವುದು ಅನಿವಾರ್ಯವೇ ಅಥವಾ ಮಹಿಳೆ ಮನೆಯಲ್ಲಿಯೇ ಉಳಿಯುವುದು ಅನಿವಾರ್ಯವೇ ಎಂಬ ಕುರಿತು ಪರ ವಿರೋಧ ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಲ್ಲಿ ಯುವಕರು ಪಾಲ್ಗೊಳ್ಳುವಂತೆ ರಾಷ್ಟ್ರೀಯ ಸೇವಾ ಕಾರ್ಯಕರ್ತ ಆರ್.ಜಿ. ಗಿರೀಶ್ ಮನವಿ ಮಾಡಿದ್ದಾರೆ.
387ನೇ ಶಿವಾಜಿ ಜಯಂತ್ಯುತ್ಸವ
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯೋತ್ಸವ ಕಾರ್ಯಕ್ರಮ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಫೆ. 19ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಎಚ್.ಡಿ. ದೇವೇಗೌಡರು ಗೌರವಾನ್ವಿತ ಉಪಸ್ಥಿತಿ ವಹಿಸವರು. ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ, ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ವೈ.ಎನ್. ರುದ್ರೇಶಗೌಡ, ಎ.ಮಂಜು, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಪಟೇಲ್ ಶಿವರಾಂ, ಬಿ.ಬಿ. ಶಿವಪ್ಪ, ಮರಿತಿಬ್ಬೇಗೌಡ, ಗೋ. ಮಧುಸೂದನ್, ನಗರಸಭೆ ಅಧ್ಯಕ್ಷೆ ಎಚ್.ಎಚ್. ವಿದ್ಯಾ ಆನಂದ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಡಿ. ರತ್ನ ಹನುಮೇಗೌಡ, ಬೆಂಗಳೂರಿನ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ವಿ.ಎ. ರಾಣೋಜಿರಾವ್ ಸಾಧೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಗೀತ ಒಂದುಸಮ್ಮೋಹನ ಕಲೆ
ಅರಸೀಕೆರೆ: ಸಂಗೀತವು ಒಂದು ಸಮ್ಮೋಹನ ಕಲೆಯಾಗಿದೆ. ಕರ್ನಾಟಕ ಸಂಗೀತದ ಹೊಸ ಕವಲು ಎಂದು ಗುರುತಿಸಲ್ಪಟ್ಟಿರುವ ಸುಗಮ ಸಂಗೀತ ಪ್ರಕಾರ ಇಂದು ಬಹಳ ಜನಪ್ರಿಯವಾಗಿರುವ ಸಂಗೀತ ಮಾಧ್ಯಮವಾಗಿದೆ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದ್ದಾರೆ.
ತಾಲೂಕಿನ ಗಂಡಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ರಸಗ್ರಹಣ ಕಾರ್ಯಕ್ರಮದಲ್ಲಿ ಭಾವಗೀತೆ ವಿಷಯವಾಗಿ ಮಾತನಾಡಿದ ಅವರು, ತನ್ನ ವಿಶಿಷ್ಟತೆ, ಅನನ್ಯತೆ, ರಾಗ ಭಾವ ಪ್ರಾಧಾನ್ಯತೆಯಿಂದಾಗಿ ಇದು ಲೋಕಪ್ರಿಯವಾಗಿದೆ.
ನವೋದಯ ಯುಗದ ಕವಿಗಳು ಗೇಯ ಗುಣಗಳಿರುವಂತಹ ಅನೇಕ ಕವಿತೆಗಳನ್ನು ರಚಿಸಿದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ದೇವರಾಜಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ  ಡಾ. ವಿ. ಶರತ್ ಕುಮಾರ್, ಇತಿಹಾಸ ವಿಭಾಗದ ಮುಖ್ಯಸ್ಥ ಲಿಂಗರಾಜು ಇದ್ದರು. ಪ್ರೇಮಕುಮಾರ್ ತಂಡದವರು ಭಾವಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು.
ಜಿ.ಪಂ. ಸಾಮಾನ್ಯ ಸಭೆ
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಫೆ. 19ರಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.