ಜಿಲ್ಲೆಯಲ್ಲಿ ಮದ್ಯ ಮಾರಾಟ ಇಳಿಮುಖ
ಕ.ಪ್ರ. ವಾರ್ತೆ ಹಾಸನ ಜ. 1
ಮದ್ಯ ಮಾರಾಟ ಪ್ರಮಾಣ ವರ್ಷದಿಂದ ವರ್ಷ ಏರಿಕೆಯಾಗುವುದು ಸಹಜ. ಆದರೆ ಜಿಲ್ಲೆಯಲ್ಲಿ ಕಳೆದ ವರ್ಷ ಮಾರಾಟ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಇದರಿಂದ ಅಬಕಾರಿ ಇಲಾಖೆ ಆದಾಯ ಕುಂಠಿತಗೊಂಡಿದೆ.
ಬೆಂಗಳೂರು ಮದ್ಯ ಮಾರಾಟ ಪ್ರಮಾಣದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದರೆ, ಮೈಸೂರು, ಬೆಳಗಾಂ, ದಕ್ಷಿಣ ಕನ್ನಡ ಜಿಲ್ಲೆ, ತುಮಕೂರು ನಂತರದ ಸ್ಥಾನವನ್ನು ಹಾಸನ ಜಿಲ್ಲೆ ಪಡೆದುಕೊಂಡಿದೆ. ಆದರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದ ಮದ್ಯ ಈ ಬಾರಿ ಗಣನೀಯವಾಗಿ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು 2013ನೇ ಸಾಲಿನ ಏ.1ರಿಂದ ಡಿ.31ರವರೆಗೆ 17,17,463 ಬ್ಯಾಗ್ಗಳ ಮಾರಾಟ ಗುರಿ ಹೊಂದಲಾಗಿತ್ತು, ಆದರೆ 15,49,991 ಬ್ಯಾಗ್ಗಳು ಮಾತ್ರ ಮಾರಾಟವಾಗುವ ಮೂಲಕ ಶೇ. 8ರಷ್ಟು ಮಾರಾಟ ಕಡಿಮೆಯಾಗಿದೆ. ಅಧಿಕಾರಿಗಳು ತಮಗೆ ನಿಗದಿಪಡಿಸಿರುವ ಗುರಿ ಮುಟ್ಟಲು ಸಾಧ್ಯವಾಗಿಲ್ಲ. 2012ನೇ ಸಾಲಿಗೆ ಹೋಲಿಸಿದರೆ ಶೇ.5ರಷ್ಟು ಮಾತ್ರ ಮಾರಾಟದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇತ್ತೀಚೆಗೆ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ವಿಪರ್ಯಾಸ ಅಂದರೆ ಮಾರಾಟ ಪ್ರಮಾಣ ಕಡಿಮೆಯಾಗಿರುವುದರಿಂದ ಅಬಕಾರಿ ಅಧಿಕಾರಿಗಳು ಹೇಳುವ ಪ್ರಕಾರ ಮದ್ಯ ವ್ಯಸನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜೊತೆಗೆ ಪೊಲೀಸರು ಕುಡಿದು ವಾಹನ ಚಲಾಯಿಸುವವರನ್ನು ಹಿಡಿಯುತ್ತಿರುವುದರಿಂದ ಮದ್ಯ ಸೇವನೆ ಸ್ವಲ್ಪ ಕಡಿಮೆಯಾಗಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ 18 ಎಂಎಸ್ಐಎಲ್ ಮತ್ತು 268 ಮದ್ಯದ ಅಂಗಡಿಗಳಿವೆ. ಪ್ರತಿನಿತ್ಯ 8 ಸಾವಿರ ಬಾಟಲ್ಗಳಷ್ಟು ಮದ್ಯ ಮಾರಾಟ ಮಾಡಬೇಕಿದೆ. 3.36 ಲಕ್ಷ ಜನರು ಪ್ರತಿ 1 ಕ್ವಾರ್ಟರ್ನಂತೆ ಸೇವಿಸಬೇಕಾಗಿದೆ. ಆದರೆ ಈ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿನಿತ್ಯ 1.20 ಕೋಟಿ ಆದಾಯ ಬರುತ್ತಿದ್ದು, ತಿಂಗಳಿಗೆ 37 ಕೋಟಿ ವಹಿವಾಟು ನಡೆಯುತ್ತಿದೆ. ವರ್ಷಕ್ಕೆ 500 ಕೋಟಿಗೂ ಹೆಚ್ಚಿದೆ.
ಈ ಬಾರಿ ಮದ್ಯ ಮಾರಾಟ ಕಡಿಮೆಯಾಗಲು ಜಿಲ್ಲೆಯಲ್ಲಿ ಆಲೂಗೆಡ್ಡೆಗೆ ಅಂಗಮಾರಿ ರೋಗ, ಜೋಳಕ್ಕೆ ಬೆಂಬಲ ಬೆಲೆ ಇಲ್ಲದಿರುವುದು, ಇನ್ನು ಸಕಲೇಶಪುರ ಹಾಗೂ ಬೇಲೂರಿನಲ್ಲಿ ಯತೇಚ್ಚ ಮಳೆಯಿಂದಾಗಿ ಕಾಫಿ ಇಳವರಿ ಕಡಿಮೆಯಾಗಿರುವುದು, ಬೆಲೆ ಇಳಿಕೆ, ಅರಸೀಕೆರೆ ಹಾಗೂ ಚನ್ನರಾಯಪಟ್ಟಣದಲ್ಲಿ ಬರಗಾಲದಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸಿರುವುದೂ ಮದ್ಯ ಮಾರಾಟ ಕಡಿಮೆಯಾಗಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಆಗಸ್ಟ್ನಂತರದಲ್ಲಿ ಮದ್ಯದ ಬೆಲೆ ಕೊಂಚ ಏರಿಕೆಯು ಇದರ ಮೇಲೆ ಪರಿಣಾಮ ಬೀರಿದೆ.
2013ರ ಡಿಸೆಂಬರ್ನ್ಲ್ಲಿ ಹಾಸನ ವಲಯ 1ರಲ್ಲಿ ಶೇ.76.26ರಷ್ಟು, ಹಾಸನ ವಲಯ 2ರಲ್ಲಿ ಶೇ.84.55, ಬೇಲೂರು ವಲಯದಲ್ಲಿ ಶೇ.95.37, ಚನ್ನರಾಯಪಟ್ಟಣ ವಲಯದಲ್ಲಿ ಶೇ.77.34ರಷ್ಟು, ಅರಸೀಕೆರೆ ವಲಯದಲ್ಲಿ ಶೇ.85.30ರಷ್ಟು, ಸಕಲೇಶಪುರ ವಲಯದಲ್ಲಿ 96.12ರಷ್ಟು, ಅರಕಲಗೂಡು ವಲಯದಲ್ಲಿ 81.72ರಷ್ಟು, ಹೊಳೆನರಸೀಪುರ ವಲಯದಲ್ಲಿ ಶೇ.91ರಷ್ಟು ಮದ್ಯ ಮಾರಾಟ ವಾಗಿದೆ. ಒಟ್ಟಾರೆಯಾಗಿ ಡಿಸೆಂಬರ್ನಲ್ಲಿ ಶೇ.84.35ರಷ್ಟು ಮದ್ಯ ಮಾರಾಟವಾಗಿದೆ.
2012ರಲ್ಲಿ ಈ ಡಿಸೆಂಬರ್ನಲ್ಲಿ ಶೇ.85.30ಕ್ಕಿಂತ ಹೆಚ್ಚಿನ ಪ್ರಮಾಣ ಮಾರಾಟವಾಗಿತ್ತು. ಆದರೆ ಈ ಬಾರಿ ಮಾರಾಟ ಪ್ರಮಾಣ ಕಡಿಮೆಯಾಗಿರುವುದರಿಂದ ಅಬಕಾರಿ ಇಲಾಖೆಗೆ ಮೇಲಾಧಿಕಾರಿಗಳಿಂದ ಒತ್ತಡ ಬಂದಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

