ಮಾರುಕಟ್ಟೆ ಸ್ಥಳಾಂತರದಲ್ಲಿ ತಾರತಮ್ಯ ಆರೋಪ
ಹೊಳೆನರಸೀಪುರ: ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬಲವಂತವಾಗಿ ಸ್ಥಳಾಂತರಿಸಿ ಎರಡು ತಿಂಗಳೇ ಕಳೆದರೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡದೆ ನಿರ್ಲಕ್ಷ್ಯ ತೋರುತ್ತಿರುವ ಪುರಸಭೆಯ ವಿರುದ್ಧ ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 15-20 ವರ್ಷದಿಂದಲೂ ಪಟ್ಟಣದ ಮುಖ್ಯರಸ್ತೆ, ಸುಭಾಷ್ ಚೌಕ, ಗಾಂಧಿ ವೃತ್ತ ಹಾಗೂ ಸರ್ಕಾರಿ ಆಸ್ಪತ್ರೆ ಎದುರಿನ ರಸ್ತೆ ಬದಿಯಲ್ಲಿ ಹಣ್ಣು, ಹೂವು, ಬಳೆ, ಕುಂಕುಮ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಸುಗಮ ಸಂಚಾರ ವ್ಯವಸ್ಥೆ ನೆಪವೊಡ್ಡಿ, ಕಳೆದ ಎರಡು ತಿಂಗಳ ಹಿಂದೆಯೇ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿನ ಕವರ್ಡೆಕ್ನ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ದಶಕದಿಂದಲೂ ಬೀದಿ ಬದಿಯಲ್ಲಿಯೇ ವ್ಯಾಪಾರ ನಡೆಸಿ ಜೀವನ ನಿರ್ವಹಣೆ ಮಾಡುತ್ತಿದ್ದ ವ್ಯಾಪಾರಿಗಳನ್ನು ಪೊಲೀಸರ ಸಹಾಯದಿಂದ ಒಕ್ಕಲೆಬ್ಬಿಸಿದ ಪುರಸಭೆಯು ಸ್ಥಳಾಂತರಿಸಿದ ಸ್ಥಳದಲ್ಲಿ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ತರಕಾರಿ ಮಾರುಕಟ್ಟೆಯನ್ನೂ ಸ್ಥಳಾಂತರಿಸುವುದಾಗಿ ಪುರಸಭೆ ಹಾಗೂ ಪೊಲೀಸರು ತಿಳಿಸಿದ್ದರೂ, ಅವರನ್ನು ಸ್ಥಳಾಂತರಿಸದೆ, ಕೇವಲ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಸ್ಥಳಾಂತರಿಸಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಬೇಸತ್ತ ಬೀದಿ ವ್ಯಾಪಾರಿಗಳು ದೂರಿದ್ದಾರೆ.
ಸಾಲ ಮಾಡಿ ಜೀವನ ನಿರ್ವಹಣೆಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ ಕ್ರಮ ಕೈಬಿಡುವಂತೆ ಸ್ಥಳೀಯ ಶಾಸಕ ಎಚ್.ಡಿ.ರೇವಣ್ಣ ಅವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆಯ ಯಾವುದೇ ಸದಸ್ಯರೂ ಈ ಕುರಿತಂತೆ ದನಿ ಎತ್ತುತ್ತಿಲ್ಲ. ಅಲ್ಲದೆ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವಲ್ಲಿ ಇಲ್ಲಿನ ಪೊಲೀಸರು ದರ್ಪದಿಂದ ನಡೆದುಕೊಂಡಿರುವುದಲ್ಲದೆ, ಬೆದರಿಕೆ ಹಾಕುತ್ತಾರೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. ಕೂಡಲೇ ತಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಆಗಿರುವ ಅನಾನುಕೂಲವನ್ನು ಸರಿಪಡಿಸಬೇಕು. ಈಗಲೂ ನಿರ್ಲಕ್ಷ್ಯ ತೋರಿದಲ್ಲಿ ತಾವೆಲ್ಲರೂ ಪುರಸಭೆ ಹಾಗೂ ಗಾಂಧಿ ವೃತ್ತದಲ್ಲಿ ಕುಳಿತು ಉಗ್ರ ಪ್ರತಿಭಟನೆ ನಡೆಸಿ ವಿಷ ಕುಡಿಯಬೇಕಾಗುತ್ತದೆ ಎಂದು ಬೀದಿ ಬದಿ ವ್ಯಾಪಾರಸ್ಥರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

