ಮರಳು ದಂಧೆ; ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ. ವಾರ್ತೆ ರಾಮನಾಥಪುರ ಜ. 1
ಸಮೀಪದ ಕೇರಳಾಪುರದ ಕಾವೇರಿ ನದಿ ಪಾತ್ರದಲ್ಲಿ ಐದು ವರ್ಷಗಳಿಂದ ಎಗ್ಗಿಲ್ಲದೆ ನಿರಂತರ ಸಾಗಿರುವ ಮರಳು ದಂಧೆ ತಡೆಯಲು ವಿಫಲರಾಗಿರುವ ಅಕಾರಿಗಳ ವಿರುದ್ಧ ಘೋಷಣೆ ಕೂಗಿ ಇಲ್ಲಿನ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಅಧ್ಯಕ್ಷ ಸಂತೋಷಗೌಡರು ಮಾತನಾಡಿ, ಕೇರಳಾಪುರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಎಲ್ಲ ಧಾರ್ಮಿಕ ವರ್ಗದವರು ನೆಲೆಸಿದ್ದಾರೆ. ಗ್ರಾಮದ ಪಕ್ಕದಲ್ಲಿ ಕಾವೇರಿ ನದಿ ಹರಿಯುತ್ತಿದೆ. ಪುರಾತನ ಕಾಲದಿಂದಲೂ ನದಿ ಮಧ್ಯೆ ದ್ವೀಪದ ಮಾದರಿ ಪ್ರದೇಶ ಇದೆ. ಇಲ್ಲಿ ಮೇಲು ಕೀಳು ಎನ್ನದೆ ಗ್ರಾಮದಲ್ಲಿ ಸತ್ತವರನ್ನು ತಂದು ಈ ಪ್ರದೇಶದ ಕಾವೇರಿ ಮಡಿಲಿನಲ್ಲಿ ಶವಸಂಸ್ಕಾರ ಮಾಡಿ ಹೋಗುತ್ತಿರುವ ಭಾವನಾತ್ಮಕ ಬೆಳವಣಿಗೆ ಹಿಂದಿನಿಂದ ನಡೆದು ಬಂದಿದೆ ಎಂದರು.
ಆದರೆ, ಕಳೆದ 5 ವರ್ಷಗಳಿಂದ ನದಿಯ ಈ ನಡುಗಡ್ಡೆ ಪ್ರದೇಶದಲ್ಲಿ ಮರಳು ದಂಧೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿದ್ದ ಬೆಲೆ ಬಾಳುವ ಮರಗಳು ನಾಪತ್ತೆಯಾಗಿವೆ. ಇಲ್ಲೆಲ್ಲಾ ಅಗೆದು ಶವಸಂಸ್ಕಾರ ಮಾಡಿದ ಶವ ಮತ್ತು ಮೂಳೆಗಳನ್ನು ಹೊರ ತೆಗೆದು ಎಲ್ಲೆಂದರಲ್ಲಿ ಬಿಸಾಡಿ ನದಿಗೆ ಬರುವ ಗ್ರಾಮಸ್ಥರು ಭಯ ಬೀಳುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಸ್ಥಳೀಯ ಗ್ರಾಪಂನ ಕೆಲವು ಸದಸ್ಯರು ಇವರೊಂದಿಗೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.
ಜನಪರ ಹೋರಾಟಗಾರ ಮಂಜುನಾಥ್ ಮಾತನಾಡಿ, ಇಲ್ಲಿ ಮರಳು ತೆಗೆಯುವುದನ್ನು ಖಂಡಿಸಿ ತಡೆಯಲು ಹೋದಾಗ ಮರಳು ತೆಗೆಯುತ್ತಿದ್ದ ಮಂದಿ, ನಾವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 25 ಸಾವಿರ, ತಹಸೀಲ್ದಾರರಿಗೆ 30 ಸಾವಿರ, ಕೊಣನೂರು ಉಪ ಆರಕ್ಷಕ ನಿರೀಕ್ಷಕರಿಗೆ 15 ಸಾವಿರವನ್ನು ಪ್ರತಿ ತಿಂಗಳೂ ಒಬ್ಬೊಬ್ಬರೂ ನೀಡುತ್ತಿದ್ದೇವೆ. ಅದರಿಂದ ಅಧಿಕಾರಿಗಳು ತಮ್ಮ ತಂಟೆಗೆ ಬಾರದೆ ಸುಮ್ಮನಿದ್ದಾರೆ. ಇದನ್ನು ಕೇಳುವ ಹಕ್ಕು ನಿಮಗಿಲ್ಲ ಎಂದು ಹಲ್ಲೆ ಮಾಡಲು ಮುಂದಾದರು ಎಂದು ಆರೋಪ ಮಾಡಿದರು. ಕೂಡಲೆ ಮಂಗಳವಾರ ಕೊಣನೂರು ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ದೂರು ಸಲ್ಲಿಸಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಹಶೀಲ್ದಾರ್ ಗಮನಕ್ಕೆ ತಂದಿದ್ದರೂ ತಮಗೆ ಸಂಬಂಧಿಸದ ವಿಷಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿಗೆ ಪ್ರಾಮಾಣಿಕ ತಹಶೀಲ್ದಾರರನ್ನು ನೇಮಿಸುವಂತೆ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳು ಈ ಕೂಡಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗ್ರಾಮಸ್ಥರು, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಸ್ಥಳೀಯರಾದ ರಾಮಚಂದ್ರ, ಗಣೇಶ್, ಮಲ್ಲೇಗೌಡ, ತಿಮ್ಮೇಗೌಡ, ರಾಜ, ನಾಗೇಂದ್ರ, ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

