ಗ್ರಾಪಂ ಜಾಗ ಕಬಳಿಕೆ: ಗ್ರಾಮಸ್ಥರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾಸನ, ಜ. 2
ಗ್ರಾಮ ಪಂಚಾಯ್ತಿಗೆ ಸೇರಿದ ಜಾಗವನ್ನು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಹದೇವಮ್ಮ ಸೇರಿದಂತೆ ಇತರರು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಗ್ರಾಮಸ್ಥರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟು: ಪ್ರತಿಭಟನಾಕಾರರು ನಗರದ ರೇಲ್ವೆ ನಿಲ್ದಾಣದಿಂದ ಮೆರವಣಿಗೆ ಪ್ರಾರಂಭಿಸಿ ಬಿ.ಎಂ. ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿ, ತಮಗೆ ಕೂಡಲೇ ನ್ಯಾಯ ದೊರಕಿಸಿಕೊಡುವಂತೆ ಪಟ್ಟು ಹಿಡಿ ದರು.
ಆರೋಪ: ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಗ್ರಾಮದ ಸರ್ವೇ ನಂ.274 ರ 1.17 ಎಕರೆ ಭೂಮಿಯು 13 ಮಂದಿ ದಲಿತರಿಗೆ ಮಂಜೂರಾಗಿದ್ದು, ಹಲವು ವರ್ಷಗಳಿಂದ ಸ್ವಾಧೀನದಲ್ಲಿ ಇದ್ದರ ಸಹ ಗ್ರಾಪಂ ಸದಸ್ಯರಾದ ಮಂಜೇಗೌಡ ಗೌಡಾಕಿ, ಬಿ.ಸಿ.ದೊರೆಸ್ವಾಮಿ, ಮಹೇಶ್, ಜಾವಿದ್ ಈ ಜಾಗವನ್ನು ಲಪಟಾಯಿಸುವ ದೃಷ್ಟಿಯಿಂದ ಗ್ರಾಪಂ ಗೆ ಸೇರಿದ ಜಾಗ ಅಂತ ಸುಳ್ಳು ಹೇಳಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮಹದೇವಮ್ಮನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸರ್ವೇ ನಂ. 274ರ ಪೈಕಿ 13 ಗುಂಟೆ ಜಾಗ ಗ್ರಾಮ ಪಂಚಾಯ್ತಿಯಲ್ಲಿ ಇರುವ ದಾಖಲೆಯ ಪ್ರಕಾರ ಇದು ಗ್ರಾಮ ಪಂಚಾಯ್ತಿಗೆ ಸೇರಿದ್ದಾಗಿದೆ. ಈ ಜಾಗಕ್ಕೆ ಈ ಗ್ರಾಪಂ ಸದಸ್ಯರು ತಂತಿಬೇಲಿ ಹಾಕಿದ ಪರಿಣಾಮ ಕಳೆದ ಸೆ.24ರಂದು ಎಸಿ ಹಾಗೂ ತಹಸೀಲ್ದಾರ್ ಭೇಟಿ ನೀಡಿ, ಈ ಜಾಗ ದಲಿತರಿಗೆ ಸೇರಬೇಕು ಎಂದು ವರದಿ ನೀಡಿದ್ದಾರೆ ಎಂದಿದ್ದಾರೆ. ಆದರೆ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅ. 6,2013ರಂದು ನುಗ್ಗೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಎರಡು ಕಡೆಯರನ್ನು ಕರೆಸಿ ಅಂತಿಮ ಆದೇಶ ನೀಡುವ ತನಕ ಎರಡು ಕಡೆ ಬೋರ್ಡ್ಗಳನ್ನು ತೆಗೆಯಲು ಸೂಚಿಸಿದರು.
ಅದರಂತೆ ಗ್ರಾಮ ಪಂಚಾಯ್ತಿಯ ಬೋರ್ಡ್ನ್ನು ತೆಗೆಸಲಾಯಿತು. ಆದರೆ, ಮಹದೇವಮ್ಮನವರ ಬೋರ್ಡ್ ಮಾತ್ರ ತೆಗೆಸಿಲ್ಲ. ಡಿ. 26ರಂದು ಕುಳುವಾಡಿಕ ಜಮೀನು ನಮ್ಮದು ಎನ್ನುವ ಮಹದೇವಮ್ಮನವರು ವಿವಾದಾಸ್ಪದ ಜಾಗದಲ್ಲಿ ಸರ್ವೇಯರ್ ಅನ್ನು ಕರೆಸಿ ಸರ್ವೆ ಮಾಡಿಸಿದರು. ಅದಕ್ಕೆ, ಗ್ರಾಮ ಪಂಚಾಯ್ತಿ ಸದಸ್ಯರು ಡಿ. 27ರಂದು ಪ್ರತಿಭಟನೆ ನಡೆಸಿದರು ಎಂದರು.
ಭೂಮಿ ಮಂಜೂರು ವಿವಾದ: ಈ ಜಾಗವು ಪಂಚಾಯ್ತಿ ಅನುಭವದಲ್ಲಿ ಇರುವ ಬಗ್ಗೆ ಕೆಲವು ಭಾವಚಿತ್ರಗಳು ಇವೆ. ಅಲ್ಲದೆ ಇಲ್ಲಿ ಸೇಂದಿ ಅಂಗಡಿಗಳಿದ್ದವು. ಈ ಖರಾಬು ಜಾಗವನ್ನು ಯಾರಿಗೂ ಮಂಜೂರು ಮಾಡುವಂತಿಲ್ಲ. ಸೇಂದಿ ಅಂಗಡಿ ಶಿಥಿಲಗೊಂಡಿದ್ದರಿಂದ ಈ ಜಾಗದಲ್ಲಿ ಪಂಪ್ ಹೌಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ವಿದ್ಯುತ್ ಇಲಾಖೆ ಸಹ ವಿದ್ಯುತ್ ನೀಡಿದೆ. 1975ರಲ್ಲಿ ಈ ವಿವಾದಿ ಸ್ಥಳವನ್ನು ವಿಭಾಗಾಧಿಕಾರಿಗಳು ಕೆಲವು 6 ಜನರಿಗೆ ಮಂಜೂರು ಮಾಡಿದ್ದಾರೆ. ಈ ವಿವಾದಿತ 13 ಗುಂಟೆ ಸೇರಿಸಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಸುಳ್ಳು ದಾಖಲೆ: ವಿಭಾಗಾಧಿಕಾರಿಗಳು 1975ರಲ್ಲಿ ಇವರಿಗೆ ಮಂಜೂರು ಮಾಡುವ ಮುನ್ನವೇ ಈ ಜಾಗ ಪಂಚಾಯ್ತಿಯದು ಎಂಬ ದಾಖಲೆಗಳು ಇವೆ. ಆದರೆ ವಿಭಾಗಾಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೇ ಈಜಾಗವನ್ನು ಮಂಜೂರು ಮಾಡಿದ್ದಾರೆ. ಆಗ ಕೇವಲ ಈ ಸರ್ವೇ ನಂ.274ರಲ್ಲಿ ಕೇವಲ 1.04 ಎಕರೆ ಮಾತ್ರ ಖಾತೆ ಇದ್ದು, ಉಳಿಕೆ 13 ಗುಂಟೆ ಜಾಗ ಸೇರಿಲ್ಲ. ಇದು ಗ್ರಾಮ ಪಂಚಾಯ್ತಿಗೆ ಸೇರಿದ ಜಾಗವಾಗಿದೆ. ಅದನ್ನು ಲಪಟಾಯಿಸುವ ದೃಷ್ಟಿ ಮಹದೇವಮ್ಮನವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ದೂರಿದರು.
ನಿಂದಿಸಿಲ್ಲ: ಡಿ. 27ರಂದು ಬೆಳಗ್ಗೆ ನಾನು ಮತ್ತು ಇತರೆ ದಲಿತರು ಜಮೀನಿನಲ್ಲಿ ಕೆಲಸ ಮಾಡುವಾಗ ಈ ನಾಲ್ವರು ಗ್ರಾಪಂ ಸದಸ್ಯರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ವಿರುದ್ಧ ನಾವು ಕೇವಲ ಪ್ರತಿಭಟನೆ ನಡೆಸಿದ್ದನ್ನು ಬಿಟ್ಟರೆ ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಎಸಗಿಲ್ಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ ಎಂದು ಹೇಳಿದರು.
ಆಕ್ರೋಶ: ಗ್ರಾಮದಲ್ಲಿ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ನಮ್ಮ ವಿರುದ್ಧ ಎತ್ತುಕಟ್ಟಿದ್ದಾರೆ. ಅಷ್ಟೇ ಅಲ್ಲದೆ ಭೂಮಿ ಲಪಟಾಯಿಸಿದ್ದಾರೆ ಅಂತ ನಮ್ಮ ವಿರುದ್ಧ ಅಪಪ್ರಚಾರ ಮಾಡಿ ಗ್ರಾಮದಲ್ಲಿ ತಿರುಗಾಡದಂತೆ ಅವಮಾನಗೊಳಿಸಿದ್ದಾರೆ. ಜೊತೆಗೆ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪೊಲೀಸಸ್ರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹದೇವಮ್ಮ ಮತ್ತು ಅವರ ಕಡೆಯವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ, ಗ್ರಾಮ ಪಂಚಾಯ್ತಿಗೆ ಸೇರಿದ ಈ ಜಾಗವನ್ನು ಯಾವುದೇ ಕಾರಣಕ್ಕೂ ಮಹದೇವಮ್ಮ ಹಾಗೂ ಇತರರಿಗೆ ನೀಡಬಾರದು. ಇದು ಗ್ರಾಮ ಪಂಚಾಯ್ತಿಯ ಆಸ್ತಿಯಾಗಿರುವುದರಿಂದ ಇದು ಗ್ರಾಪಂಗೆ ಉಳಿಯುವಂತಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗವಿರಂಗಯ್ಯ, ಕೇಶವಮೂರ್ತಿ, ರಂಗಸ್ವಾಮಿ, ನಾಗರಾಜು, ಲಕ್ಷ್ಮಮ್ಮ, ಕುಮಾರ, ದೊಡ್ಡಯ್ಯ, ಸ್ವಾಮಿ, ದೇವಮ್ಮ, ನಾಗರಾಜು, ಶಿವಸ್ವಾಮಿ, ಶಿವಣ್ಣ, ದೇವರಾಜು, ರಂಗಪ್ಪ, ಕಾಳಯ್ಯ, ಜಯಮ್ಮ, ದೇವಮ್ಮ, ಸುಜಾತ ಹಾಗೂ ಇತರರು ಇದ್ದರು.
ನಾಲ್ವರ ವಿರುದ್ಧ ಸುಳ್ಳು ದೂರು: ಆರೋಪ
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಾದ ಗೌಡಕಿ ಮಂಜೇಗೌಡ, ಬಿ.ಸಿ.ದೊರೆಸ್ವಾಮಿ, ಮಹೇಶ್ ಮತ್ತು ಜಾವಿದ್ ಎಂಬವರು ಮೇಲೆ ಮಹದೇವಮ್ಮ ಹಾಗೂ ಇತರರು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ಮಹದೇವಮ್ಮ, ರಂಗಸ್ವಾಮಿ, ಕಮಲಮ್ಮ ಹಾಗೂ ಇತರರು ದಲಿತರ ಮೇಲೆ ಜಾತಿ ನಿಂದನೆ ಹಾಗೂ ದೌರ್ಜನ್ಯ ಎಸಗುತ್ತಿದ್ದಾರೆ ಅಂತ ಸುಳ್ಳು ಅಸ್ಪೃಶ್ಯತೆ ಆಚರಣೆ (ಅಟ್ರಾಸಿಟಿ) ಪ್ರಕರಣ ದಾಖಲಿಸಿದ್ದಾರೆ. ಅಟ್ರಾಸಿಟಿ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಕೇಸ್ ಅನ್ನು ವಾಪಸ್ ತೆಗೆಸಬೇಕು ಎಂದು ಒತ್ತಾಯಿಸಿದರು.
6ರಂದು ಗ್ರಾಮಗಳಿಗೆ ಭೇಟಿ: ಜಿಲ್ಲಾಧಿಕಾರಿ
ಡಿ.6ರಂದು ಗ್ರಾಮಕ್ಕೆ ಭೇಟಿ ನೀಡಿ ಎರಡು ಕಡೆಯವರ ದಾಖಲೆಗಳನ್ನು ಪರಿಶೀಲಿಸಿ ಸಭೆಯನ್ನು ನಡೆಸಲಾಗುತ್ತದೆ. ನ್ಯಾಯ ಯಾವ ಕಡೆ ಇರುತ್ತದೆ ಅವರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ. ಆದರಿಂದ ಯಾರೂ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

