ಹಾಸನ

ಅವೈಜ್ಞಾನಿಕ ಬೈಪಾಸ್: ನಿಲ್ಲದ ಸಾವು - ನೋವು

Published On :

ಚನ್ನರಾಯಪಟ್ಟಣ / ಹಾಸನ: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿಸಿ ರಾಷ್ಟ್ರೀಯ ಹೆದ್ದಾರಿ 75 ಆಗಿ ನಾಮಕರಣ ಮಾಡಿ, ಪ್ರಯಾಣಿಕರ ಸುರಕ್ಷತೆಗಾಗಿ ಅನುವು ಮಾಡಿಕೊಡಲಾಗಿದೆ. ದುರಾದೃಷ್ಟವಶಾತ್ ಅಪಘಾತಗಳೇ ಹೆಚ್ಚಾಗುತ್ತಿರುವ ಬಗ್ಗೆ  ಜನರಲ್ಲಿ ಆತಂಕ ಮೂಡಿದೆ.
ಚನ್ನರಾಯಪಟ್ಟಣದ ಮಧ್ಯದಲ್ಲಿ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪಟ್ಟಣದ ಹೊರಭಾಗದಲ್ಲಿ ನಿರ್ಮಿಸಿರುವ ಹೆದ್ದಾರಿ ಬೈಪಾಸ್‌ನಲ್ಲಿ ಸುರಕ್ಷತೆಗಿಂತ ಹೆಚ್ಚಾಗಿ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಹಲವು ಲೋಪಗಳು ಕಾರಣವಾಗಿವೆ.
4 ತಿಂಗಳಲ್ಲಿ 6 ಅಪಘಾತ: ಬೆಂಗಳೂರಿನಿಂದ ಚತುಷ್ಪತ ರಸ್ತೆಯಲ್ಲಿ ಅತಿ ವೇಗದಲ್ಲಿ ಬಂದ ವಾಹನಗಳು ಚನ್ನರಾಯಪಟ್ಟಣ ಬೈಪಾಸ್ ರಸ್ತೆ ದ್ವಿಪಥದಲ್ಲಿ ನಿರ್ಮಾಣವಾಗಿದೆ ಎಂಬುದರ ಅರಿವಿಲ್ಲದೆ ಅತಿ ವೇಗದಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ.
10 ಕಿ.ಮೀ. ಉದ್ದದ ಚನ್ನರಾಯಪಟ್ಟಣ ಬೈಪಾಸ್ ಸಂಪರ್ಕ ಪಡೆದು 4 ತಿಂಗಳು ಕಳೆದಿಲ್ಲ ಅಷ್ಟರಲ್ಲಿಯೇ 6 ಮಾರಣಾಂತಿಕ ಅಪಘಾತಗಳು ಸಂಭವಿಸಿ, 13ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜತೆಗೆ, ಈ 6 ಅಪಘಾತಗಳಲ್ಲಿ, 10 ಮಂದಿ ಗಾಯಗೊಂಡಿದ್ದಾರೆ. ಇದು ಜನತೆಯಲ್ಲಿ ಆತಂಕ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದ ಎಲ್ ಅಂಡ್ ಡಿಟಿ ಕಂಪನಿಯವರು ನಿರ್ವಹಿಸಿರುವ ರಸ್ತೆ ಕಾಮಗಾರಿ ಬಗ್ಗೆ ಪೊಲೀಸ್ ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಅವರು ಮಾತ್ರ ಸಾರ್ವಜನಿಕವಾಗಿ ಹೆದ್ದಾರಿ ಪ್ರಾಧಿಕಾರವನ್ನು ಬೊಟ್ಟು ಮಾಡಿ ತೋರಿಸಿ ನುಣುಚಿಕೊಳ್ಳುತ್ತಿದ್ದಾರೆ.
ಅಳಲು ಕೇಳುವವರಿಲ್ಲ: ಬೈಪಾಸ್‌ನ 10 ಕಿ.ಮೀ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ಪ್ಲೇಓವರ್ ಮಾಡದೇ, ರಸ್ತೆ ನಿರ್ಮಾಣ ಮಾಡಿರುವುದರಿಂದ ಅಪಘಾತಗಳು ಸಂಭವಿಸುವುದು ಸರ್ವೆ ಸಾಮಾನ್ಯವಾಗಿದ್ದರೆ, ರಸ್ತೆಗೆ ಹೊಂದಿಕೊಂಡಿರುವ ರೈತರು ರಸ್ತೆ ದಾಟುವುದು ಕಷ್ಟಕರವಾಗಿರುವ ಬಗ್ಗೆ ತಮ್ಮ ಅಳಲು ತೋಡಿಕೊಂಡರೂ ಅದನ್ನು ಕೇಳುವರ್ಯಾರೂ ಇಲ್ಲದಾಗಿದ್ದಾರೆ.
ಪೊಲೀಸರು ಅಶಕ್ತ: ಚನ್ನರಾಯಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹತ್ತಾರು ಬಾರಿ ಪತ್ರ ವ್ಯವಹಾರ ನಡೆಸಿ ಅವೈಜ್ಞಾನಿಕ ರಸ್ತೆ ನಿರ್ಮಾಣವಾಗಿರುವುದನ್ನು ಸರಿಪಡಿಸಲು ಒತ್ತಾಯಿಸಿದ್ದರೂ,ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರು ಅಶಕ್ತರಾಗಿದ್ದಾರೆ.
ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ: ಬರಗೂರು ಹ್ಯಾಂಡ್ ಪೋಸ್ಟ್ ಹಾಗೂ ನುಗ್ಗೇಹಳ್ಳಿ ಕ್ರಾಸಿಂಗ್ ಮಾಡುವ ರಸ್ತೆಗಳಿಗೆ ರಾತ್ರಿ ಸಂದರ್ಭದಲ್ಲಿ ಎರಡೂ ಕಡೆಗಳಲ್ಲಿ ಹೈ ಮಾಸ್ಕ್ ದೀಪ, 10 ಕಿ.ಮೀ. ಉದ್ದಕ್ಕೆ ಮಧ್ಯದಲ್ಲಿ ವಿಭಜನೆ ಮೂಡಿಸುವ ಸಲುವಾಗಿ ರಿಪ್ಲೆಕ್ಟರ್, ವೇಗದ ಮಿತಿಯನ್ನು ನಿಯಂತ್ರಿಸುವ ಸಲುವಾಗಿ ನಾಮಪಲಕಗಳು ಹಾಗೂ ಪ್ರತಿ ಕ್ರಾಸಿಂಗ್‌ನಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಲು ಪತ್ರ ಬರೆದಿದ್ದರೂ ಪಾಲಿಸದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ.
ಮಾರನೆ ದಿನವೇ ಅಪಘಾತ: ಹೊಸ ವರ್ಷದಂದೇ ಪೊಲೀಸರು ಹಾಗೂ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದಂತೆ, ಜ. 1ರಂದು ನಡೆದ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಡಿ. 31ರಂದು ತಾನು ಹಳೆಯ ಕಾರನ್ನು ಖರೀದಿಸಿದ ಶಿವಶಂಕರ್ ಕಾರನ್ನು ಪೂಜೆ ಮಾಡಿಸಲು ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಚಾಲಕನ ನಿರ್ಲಕ್ಷದಿಂದ ಚಾಲನೆ ಮಾಡಿ ತಮ್ಮ ಕಾರಿನಲ್ಲಿದ್ದ ಮೂವರನ್ನು ಬಲಿತೆಗೆದುಕೊಂಡಿದ್ದಲ್ಲದೆ, ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಾಲ್ವರನ್ನು ಬಲಿ ತೆಗೆದುಕೊಂಡಿದ್ದಾನೆ.
ಪೊಲೀಸರ ಭಯವಿಲ್ಲ: ಹೊಸ ವರ್ಷದ ಗುಂಗಿನಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆಯಲ್ಲಿ ತೊಡಗಿದ್ದರಿಂದ ನಡೆದ ಅಪಘಾತದಲ್ಲಿ ಸುರಕ್ಷಿತವಾಗಿ ಸಂಚರಿಸುತ್ತಿದ್ದ ಕುಂದಾಪುರದ ಹೊಂಡಾಸಿಟಿ ಕಾರಿನಲ್ಲಿದ್ದವರನ್ನು ಬಲಿ ತೆಗೆದುಕೊಂಡಿದ್ದು, ಇಂತಹ ಸಂದರ್ಭ ಮತ್ತೆ ಮರುಕಳಿಸದಂತೆ ಪೊಲೀಸರು ಮತ್ತು ಆರ್‌ಟಿಒ ಅಧಿಕಾರಿಗಳು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಕೇಸು ಹಾಕುವ ಭಯವೇ ಇಲ್ಲ. ಇದೂ ಒಂದು ಕಾರಣವಾಗಿದೆ.
ಗೌಡಗೆರೆ ಬಳಿ 8 ಸಾವು: ಚನ್ನರಾಯಪಟ್ಟಣ ಬೈಪಾಸ್‌ನಲ್ಲಿ ಮಾತ್ರ ಅಪಘಾತಗಳು ಸಂಭವಿಸುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರೀಸಾವೆಯಿಂದ ದಂಡಿಗನಹಳ್ಳಿ ಹೋಬಳಿ ಕೃಷಿ ಕಾಲೇಜಿನವರಗೆ ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿ ಪ್ರಾಧಿಕಾರದವರು ಸರ್ವಿಸ್ ರಸ್ತೆ ನಿರ್ಮಿಸದಿರುವುದು ಇದಕ್ಕೆ ಕಾರಣವಾಗಿದೆ.
ರಸ್ತೆಯ ಮಧ್ಯಭಾಗದಲ್ಲಿನ ವಿಭಜಕದಿಂದ ರಸ್ತೆ ದಾಟಲು ಹೋಗಿ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಗೌಡಗೆರೆ ಬಳಿ ರಸ್ತೆ ದಾಟುವ ಸಂದರ್ಭದಲ್ಲಿ 11 ಅಪಘಾತಗಳು ಸಂಭವಿಸಿ 8ಮಂದಿ ಮೃತಪಟ್ಟಿದ್ದು, ಇದರಲ್ಲಿ ಪಾದಚಾರಿಗಳೇ ಹೆಚ್ಚಾಗಿ ಸೇರಿದ್ದಾರೆ.
ಹಿರೀಸಾವೆ ಹೊನ್ನೇನಹಳ್ಳಿ ಬಳಿ ಮಾದಿಹಳ್ಳಿ ಗ್ರಾಮದವರು ಬೈಕ್‌ನಲ್ಲಿ ರಸ್ತೆ ಕ್ರಾಸ್ ಮಾಡುವ ಸಂದರ್ಭದಲ್ಲಿ ಇಬ್ಬರು ಮೃತಪಟ್ಟು ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತವಾಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
ಅಪಘಾತದ ಕುರಿತು ಸರ್ಕಲ್ ಇನ್‌ಸ್ಪೆಕ್ಟರ್ ಶೈಲೇಂದ್ರ ಪ್ರತಿಕ್ರಿಯಿಸಿ, ಹೆದ್ದಾರಿ ಪ್ರಾಧೀಕಾರ ಹಾಗೂ ಎಲ್ ಅಂಡ್ ಟಿ ಕಂಪನಿಯವರು ನಿರ್ಮಿಸಿರುವ ರಸ್ತೆ ಅವೈಜ್ಞಾನಿಕವಾಗಿ ಕೂಡಿದೆ. ರಾಜ್ಯ ಹೆದ್ದಾರಿ ಕ್ರಾಸಿಂಗ್ ಬಳಿ ಹೆದ್ದಾರಿಗೆ ಹಂಪ್‌ಗಳನ್ನು ಹಾಕುವಂತೆ ಕೋರಿದರೆ ಇದಕ್ಕೆ ಅನುಮತಿಯಿಲ್ಲ ಎಂಬ ಉತ್ತರ ನೀಡುತ್ತಾರೆ. ಆದರೆ ಶಾಂತಿಗ್ರಾಮ ಬಳಿ ನಿರ್ಮಾಣವಾಗಿರುವ ಟೋಲ್‌ನಲ್ಲಿ ಎರಡೂ ಕಡೆಗಳಲ್ಲಿ ಹಂಪ್‌ಗಳನ್ನು ಹಾಕಿದ್ದಾರೆ ಎಂದು ತಿಳಿಸಿದರು.
ಹೆದ್ದಾರಿಯ ಕ್ರಾಸಿಂಗ್ ಹಾಗೂ ಗ್ರಾಮಗಳಿರುವ ಕಡೆಗಳಲ್ಲಿ ವಿದ್ಯುತ್ ದೀಪ ಹಾಗೂ ಹೈ ಮಾಸ್ಕ್ ದೀಪ ಅಳವಡಿಸುವಂತೆ 6 ತಿಂಗಳಿಂದ ಮನವಿ ಮಾಡುತ್ತಿದ್ದರೂ ಅದಕ್ಕೆ ಆಸಕ್ತಿ ತೋರಿಲ್ಲ ಎಂದು ತಿಳಿಸಿದರು.
'ರಿಫ್ಲೆಕ್ಟರ್ ಅಳವಡಿಸಿ'
ನೆಲಮಂಗಲದಿಂದ ಬೆಳ್ಳೂರು ಕ್ರಾಸ್‌ವರಗೆ ನಿರ್ಮಾಣವಾಗಿರುವ ರೀತಿಯಲ್ಲಿಯೇ ಹಾಸನದವರಗೆ ಚತುಷ್ಪತ ರಸ್ತೆ ನಿರ್ಮಿಸಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ, ಹಾಗೂ ಕಬ್ಬಿಣದ ಗಾರ್ಡ್ ಅಳವಡಿಸಬೇಕು. ರಾತ್ರಿ ಸಂದರ್ಭದಲ್ಲಿ ವಿದ್ಯುತ್ ದೀಪಗಳು ಹಾಗೂ ರಿಪ್ಲೆಕ್ಟರ್ ಲೈಟ್‌ಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಗುರುವಾರ ಶಶಿಧರ್ ನೇತೃತ್ವದಲ್ಲಿ ಸಾರ್ವಜನಿಕರು ಬರಗೂರು ಹ್ಯಾಂಡ್ ಪೋಸ್ಟ್ ಬಳಿ ಧರಣಿ ನಡೆಸಲಾಯಿತು. ನಂತರದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಇವರ ಮನವಿಗೆ ಎಂದು ಬೆಲೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

 ಮಾದಿಹಳ್ಳಿ ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.