ಹಾಸನ

ಈಜಲು ಹೋಗಿದ್ದ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಾವು

Published On :

ಹೊಳೆನರಸೀಪುರ: ಕಾಲೇಜು ಮುಗಿಸಿಕೊಂಡು ಗೆಳೆಯರೊಂದಿಗೆ ಈಜಲು ಹೋಗಿ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ಡಿಪ್ಲೋಮ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೇಮಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟಿರುವ ವಿದ್ಯಾರ್ಥಿಯನ್ನು ಹಾಸನದ ಸಿದ್ದಯ್ಯ ನಗರದ ಶಂಕರಪ್ಪ ಎಂಬುವವರ ಪುತ್ರ ಎಚ್.ಎಸ್. ಶ್ರೀನಾಥ್ (20) ಎಂದು ಗುರುತಿಸಲಾಗಿದೆ. ಹಾಸನದಿಂದ ಪ್ರತಿನಿತ್ಯವೂ ಪಟ್ಟಣದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ಗೆ ಸಂಚರಿಸುತ್ತಿದ್ದ ವಿದ್ಯಾರ್ಥಿ ಶ್ರೀನಾಥ್ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ.
ಎಂದಿನಂತೆ ಕಾಲೇಜಿಗೆ ಬಂದು ಮದ್ಯಾಹ್ನ 12 ಗಂಟೆ ತನಕ ಕಾಲೇಜಿನಲ್ಲಿದ್ದು, ನಂತರ ತನ್ನ ಗೆಳೆಯರಾದ ಅರುಣ್, ಅವಿನಾಶ್, ರವಿ ಹಾಗೂ ಉಮೇಶ್ ಅವರೊಂದಿಗೆ ಇಲ್ಲಿನ ಅರಕಲಗೂಡು ರಸ್ತೆಯಲ್ಲಿರುವ ಹೇಮಾವತಿ ನದಿಯಲ್ಲಿ ಗಣಪತಿ ವಿಸರ್ಜಿಸುವ ಸ್ಥಳದಲ್ಲಿ ಮದ್ಯಾಹ್ನ 1 ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಈಜಲು ಹೊಳೆಗೆ ಇಳಿದಿದ್ದಾನೆ. ಈತನ ಸ್ನೇಹಿತರು ಅಷ್ಟಾಗಿ ಈಜು ಬಾರದ ಕಾರಣದಿಂದ ದಡದಲ್ಲಿಯೇ ಈಜಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಸುಮಾರು 30-40 ಅಡಿಗಳಷ್ಟು ಆಳವಿರುವ ಮಡುವಿನಲ್ಲಿ ಇದ್ದಕ್ಕಿದ್ದಂತೆಯೇ ನೀರಿನಲ್ಲಿ ಮುಳುಗಿದ್ದಾನೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹತ್ತಿರದಲ್ಲೇ ಇದ್ದ ಮರಳು ತೆಗೆಯುವ ಕಬ್ಬಿಣದ ದೋಣಿಯ ಸಹಾಯದಿಂದ ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಿದರು. ಆದರೆ ವಿದ್ಯಾರ್ಥಿಯು ಮುಳುಗಿದ್ದ ಸ್ಥಳ ತುಂಬಾ ಆಳ ಇದ್ದಿದ್ದರಿಂದ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿಯ ಶವಕ್ಕಾಗಿ ನಡೆಸಿದ ಹುಡುಕಾಟಕ್ಕೆ ಫಲ ಸಿಗಲಿಲ್ಲ. ಆದರೂ, ಸುಮಾರು 40 ಅಡಿಗಳಷ್ಟು ಉದ್ದನೆಯ ಬಿದಿರಿನ ಬೊಂಬುಗಳ ಸಹಾಯದಿಂದ ಸುತ್ತಮುತ್ತಲಿನ ಸ್ಥಳದಲ್ಲಿ ವಿದ್ಯಾರ್ಥಿಯ ಶವವನ್ನು ಹೊರತೆಗೆಯಲು ಹರಸಾಹಸ ಮಾಡಲಾಯಿತಾದರೂ ಮದ್ಯಾಹ್ನದಿಂದ ಸಂಜೆಯ ತನಕ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದರೂ ಶವವನ್ನು ಹುಡುಕುವ ಪ್ರಯತ್ನ ಮಾತ್ರ ಸಾಗಿಯೇ ಇತ್ತು.
ವಿಷಯ ತಿಳಿದ ಪೋಷಕರು ಹಾಸನದಿಂದ ಧಾವಿಸಿ ಬಂದರು. ಹಾಸನದಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ವಾಚ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಜಲು ಹೋಗಿ ಮೃತಪಟ್ಟ ಶ್ರೀನಾಥ್ ನಾಲ್ವರು ಹೆಣ್ಣುಮಕ್ಕಳ ನಂತರ ಹುಟ್ಟಿದ ಒಬ್ಬನೇ ಮಗನಾಗಿದ್ದ ಎಂದು ತಿಳಿದುಬಂದಿದೆ. ಮಗನ ಸಾವಿನ ಸುದ್ಧಿಯನ್ನು ಕೇಳಿದ ಮೃತ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.