ಹಾಸನ

ಭೂಮಿ ನೀಡಿದವರಿಗೆ ವೈಜ್ಞಾನಿಕ ಪರಿಹಾರ ನೀಡಿ

Published On :

ಕ.ಪ್ರ.ವಾರ್ತೆ  ಹಾಸನ  ಜ. 2
ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿದ ನಂತರ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ತಾಲೂಕಿನ ಸಾತೇನಹಳ್ಳಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಆರೋಪ: ಮಂಗಳೂರು- ಮೈಸೂರು ಮಾರ್ಗಮಧ್ಯೆ ಜಿಲ್ಲೆಯ ಹಾಸನ, ಆಲೂರು, ಸಕಲೇಶಪುರ, ಬೇಲೂರಿನ ಆಯ್ದ ಗ್ರಾಮಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಸಂಬಂಧಿಸಿದಂತೆ ಬಳಸಲಾಗುವ ಭೂಮಿಗೆ ಹಾಗೂ ಬೆಳೆ ನಷ್ಟಕ್ಕೆ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಸಭೆಯನ್ನು ನಡೆಸಿ ಭರವಸೆ ನೀಡಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಯೋಜನೆಗೆ ಭೂಮಿ ಬಿಟ್ಟುಕೊಡುವ ರೈತರಿಗೆ ಯಾವ ಮಾನದಂಡದಲ್ಲಿ ಪರಿಹಾರ ನೀಡಬೇಕು ಎಂದು ತಿಳಿಸಿ, ಅತಿ ಶೀಘ್ರದಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕ್ ಅದಾಲತ್ ನಡೆಸಿ ಬಾಕಿ ಉಳಿದಿರುವ ಗೊಂದಲಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದರೆ ಈವರೆಗೂ ಪರಿಹಾರವನ್ನು ನೀಡದೇ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು.
ಡಿಸಿ ಸೂಚನೆ: ಈ ಯೋಜನೆಗೆ ಸಂಬಂಧಿಸಿದಂತೆ ಮಂಡ್ಯ ಮತ್ತು ತುಮಕೂರು ಜಿಲ್ಲಾಧಿಕಾರಿಗಳು ಭೂಮಿಗೆ ಮಾರಕಟ್ಟೆ ದರದಲ್ಲಿ ಕ್ರಮವಾಗಿ ನಾಲ್ಕು ಹಾಗೂ ಐದು ಪಟ್ಟು ಅಧಿಕ ಪ್ರಮಾಣದ ದರವನ್ನು ನಿಗದಿಪಡಿಸಿದ್ದಾರೆ. ಅದರಂತೆ ನಮಗೂ ಸಹ ಪ್ರಾಮಾಣಿಕವಾಗಿ ದರ ನಿಗದಿಪಡಿಸುವುದಾಗಿ ಹೇಳಿ, ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಲಾಗುವುದು ಭರವಸೆ ನೀಡಿದ್ದರು. ಜೊತೆಗೆ ರೈತರ ಭೂಮಿಗೆ ಪರಿಹಾರ ನೀಡದ ಹೊರತು ರೈತರ ಜಮೀನುಗಳಲ್ಲಿ ಪೈಪ್‌ಲೈನ್ ಅಳವಡಿಕೆ ಕಾರ್ಯಕ್ಕೆ ಮುಂದಾಗಬಾರದು, ಬೆಳೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ತಾರಮ್ಯ ಮಾಡದೆ ಅನ್ನದಾತರಿಗೆ ಹೆಚ್ಚಿನ ಅನುಕೂಲ ಒದಗಿಸಲು ಪ್ರಯತ್ನಿಸಬೇಕು ಎಂದು ಅನ್ಬುಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.
ದೂರು: ಆದರೆ, ಈಗ ರೈತರಿಗೆ ವೈಜ್ಞಾನಿಕ ಪರಿಹಾರವನ್ನು ನೀಡದೆ ರೈತರ ಜಮೀನಿನಲ್ಲಿ ಗ್ಯಾಸ್ ಪೈಪ್‌ಲೈನ್‌ಗಳನ್ನು ಅಳವಡಿಸಲು ಮುಂದಾಗಿದ್ದಾರೆ. ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಜಮೀನನ್ನು ಬಳಸುವ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವಂತೇ ತಿಳಿಸಿದ್ದರು. ರೈತರ ಭಾವನೆಗಳಿಗೆ ಗೌರವ ಕೊಟ್ಟು ಅಭಿಪ್ರಾಯಗಳನ್ನು ಆಲಿಸುವಂತೆ ಸಭೆಯಲ್ಲಿ ಹೇಳಿ ಈಗ ರೈತರಿಗೆ ಪರಿಹಾರವೂ ಇಲ್ಲ ಹಾಗೂ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಗ್ರಾಮದಲ್ಲಿ ಒಂದು ಗುಂಟೆ ಜಾಗಕ್ಕೆ ಮೂರರಿಂದ ರು. 4 ಲಕ್ಷ ಬೆಲೆ ಇದೆ. ಆದರೆ ಜಿಲ್ಲಾಡಳಿತ ವೈಜ್ಞಾನಿಕ ಪರಿಹಾರವನ್ನು ನೀಡಬೇಕು. ಇಲ್ಲವಾದಲ್ಲಿ ರೈತರು ಭೂಮಿಯನ್ನು ನೀಡಲು ಸಿದ್ಧವಿಲ್ಲ. ಆದ್ದರಿಂದ ಕೂಡಲೇ ರೈತರಿಗೆ ವೈಜ್ಞಾನಿಕ ಪರಿಹಾರವನ್ನು ನೀಡಿದ ನಂತರ ಇಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಪ್ರಾರಂಭಿಸುವಂತೆ ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಂಗಸ್ವಾಮಿ, ಮಂಜುನಾಥ್, ಅಶೋಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.