ದೃಶ್ಯ ಮಾಧ್ಯಮಗಳಿಂದ ಮಾನಸಿಕ ಭಯೋತ್ಪಾದನೆ
ಕ.ಪ್ರ.ವಾರ್ತೆ ಹಾಸನ ಜ.3
ಇಂದಿನ ದೃಶ್ಯಮಾಧ್ಯಮಗಳು ಹೆಚ್ಚು ಹೆಚ್ಚು ಮೌಢ್ಯತೆ ಮತ್ತು ಅಂಧಕಾರವನ್ನು ಬಿತ್ತಿ ಮಾನಸಿಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿವೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಖಜಾಂಚಿ ಬಿ.ಜಿ. ಗೋಪಾಲ ಕೃಷ್ಣ ವಿಷಾದಿಸಿದ್ದಾರೆ.
ಬೇಲೂರು ತಾಲೂಕಿನ ಹಗರೆ ಗ್ರಾಮದ ಜ್ಞಾನ ದೀವಿಗೆ ವಿದ್ಯಾ ಸಂಸ್ಥೆಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ವಿಜ್ಞಾನದ ವಸ್ತು ಪ್ರದರ್ಶನವನ್ನು ವಿಜ್ಞಾನ ಪ್ರಾತ್ಯಕ್ಷಿಕೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನವು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮಕ್ಕಳಿಂದಲೇ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿ ಪ್ರದರ್ಶಿಸಿದಾಗ, ಅದು ಅವರಲ್ಲಿ ಕ್ರಿಯಾತ್ಮಕ ಮತ್ತು ಸೃಜನಶೀಲತೆ ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾನವ ನಿಸರ್ಗದ ವಿಸ್ಮಯಕಾರಕ ಸೃಷ್ಟಿ. ಈತನ ಚಿಂತನೆಗಳಿಂದಲೇ ಪ್ರಪಂಚದಲ್ಲಿ ಅನೇಕ ಧರ್ಮಗಳು ಸೃಷ್ಟಿಯಾಗಿವೆ. ಆದರೆ ಈ ನಿಸರ್ಗವು ವಿಜ್ಞಾನವೆಂಬ ಒಂದೇ ಒಂದು ಧರ್ಮದ ಮೇಲೆ ನಿಂತಿದೆ ಮತ್ತು ನಡೆಯುತ್ತಿದೆ. ಎಲ್ಲಾ ಧರ್ಮೀಯರನ್ನು ಒಂದೇ ರೀತಿ ಪುರಸ್ಕರಿಸುವುದು ಅಥವಾ ತಿರಸ್ಕರಿಸುವ ಗುಣ ವಿಜ್ಞಾನಕ್ಕಿದೆ ಎಂದರು.
ಸ್ವತಂತ್ರ ಭಾರತದಲ್ಲಿ ಏಕರೂಪ ಮತ್ತು ಉಚಿತ ಶಿಕ್ಷಣ ನೀಡದಿರುವುದರ ಬಗ್ಗೆ ವಿಷಾದಿಸಿದ ಅವರು, ಭಾರತದಲ್ಲಿ ಸಮಾನ ಶಿಕ್ಷಣಕ್ಕಾಗಿ ಮೊಟ್ಟಮೊದಲು ದ್ವನಿ ಎತ್ತಿದ ತಾಯಿ ಸಾವಿತ್ರಿಬಾಯಿ ಫುಲೆಯವರ ಸೇವೆಯನ್ನು ಶ್ಲಾಘಿಸಿದರು ಮತ್ತು ಅವರ ಜನ್ಮದಿನವಾದ ಜ. 3ರನ್ನು ರಜೆರಹಿತ ರಾಷ್ಟೀಯ ಹಬ್ಬವನ್ನಾಗಿ ಪರಿವರ್ತಿಸಿ, ಮಕ್ಕಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಅವರ ಸೇವೆಯನ್ನು ಪ್ರಚುರಪಡಿಸಬೇಕೆಂದು ತಿಳಿಸಿದರು.
ಮೂಲ ವಿಜ್ಞಾನದಿಂದ ವಿಮುಖ: ಭಾರತದ ಮಟ್ಟಿಗೆ ಇಂದಿನ ವಿದ್ಯಾರ್ಥಿಗಳು ಮೂಲ ವಿಜ್ಞಾನದಿಂದ ವಿಮುಖರಾಗುತ್ತಿದ್ದು ಜಾಗತಿಕ ಮಟ್ಟದಲ್ಲಿ ವಿಜ್ಞಾನದಲ್ಲಿ ದೇಶದ ಸಂಶೋಧನೆಗಳು ಇಲ್ಲವೇ ಇಲ್ಲವೆಂಬಷ್ಟು ವಿರಳವಾಗಿವೆ. ಇದಕ್ಕೆ ನಿದರ್ಶನವೆಂಬಂತೆ ವಿದೇಶೀ ವಿಜ್ಞಾನಿಗಳು ತಮ್ಮ ಜೀವಿತ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ನೊಬೆಲ್ ಪ್ರಶಸ್ತಿ ಗಳಿಸಿಕೊಂಡರೆ, ಭಾರತದ ಮಟ್ಟಿಗೆ ಸ್ವತಂತ್ರಪೂರ್ವದಲ್ಲಿ ವಿಜ್ಞಾನಕ್ಕಾಗಿ ಸರ್.ಸಿ.ವಿ. ರಾಮನ್ ಅವರಿಗೆ ನೋಬೆಲ್ ಪ್ರಶಸ್ತಿ ಬಂದಿತ್ತು. ಇದಾದ ನಂತರ ನೂರು ವರ್ಷ ಕಳೆದರೂ ಒಂದೇ ಒಂದು ನೋಬೆಲ್ ಪ್ರಶಸ್ತಿ ಭಾರತೀಯ ವಿಜ್ಞಾನಿಗಳಿಗೆ ಬಾರದೇ ಇರುವುದು ವಿಷಾದನೀಯ ಎಂದು ಅವರು ಹೇಳಿದರು.
ಶೀನಿವಾಸ್ ಮಾತನಾಡಿ, ಯಾವುದೇ ಒಂದು ವಿಷಯವನ್ನು ವಿಮರ್ಶಾತ್ಮಕವಾಗಿ ನೋಡದೆ, ಹಿಂದಿನವರು ಪಾಲಿಸುತ್ತಿದ್ದರು ಏಂಬ ಒಂದೇ ಕಾರಣಕ್ಕಾಗಿ ಪಾಲಿಸುವುದು ಅಂಧಕಾರದ ಪರಮಾವಧಿ. ಪ್ರಶ್ನಾತೀತವಾಗಿ ಯಾವುದನ್ನೂ ಒಪ್ಪಬಾರದು ಮತ್ತು ಪಾಲಿಸಬಾರದು. ವಿದ್ಯಾರ್ಥಿಗಳ ಪ್ರಶ್ನಿಸುವ ಮನೋಭಾವನೆಯನ್ನು ಪೋಷಕರು ಮತ್ತು ಶಿಕ್ಷಕರು ನೀರೆರೆದು ಪೋಷಿಸಬೇಕೇ ಹೊರತು, ವಿದ್ಯಾರ್ಥಿಗಳ ಕುತೂಹಲಕ್ಕೆ ತಣ್ಣೀರೆರಚಬಾರದು. ಮಕ್ಕಳು ತಮಗಿಂತ ಹೆಚ್ಚಿನದನ್ನು ಸಾಧಿಸಿದಾಗ ಪೋಷಕರು ಅಥವಾ ಶಿಕ್ಷಕರು ಹೆಮ್ಮೆಪಡುವ ವಿಚಾರ.
ಸಂಸ್ಥೆಯ ಅಧ್ಯಕ್ಷ ಮಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಲಾವಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಬಿಂದು ಪಾರ್ಥಿಸಿದರು. ಶಿಕ್ಷಕಿ ಕೋಮಲ ನಿರೂಪಿಸಿದರು. ಸುಪ್ರಿತಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

