ಕಳಪೆ ನಾಲೆ: ರೈತ ಸಂಘ ತೀವ್ರ ಅಸಮಾಧಾನ
ರಾಮನಾಥಪುರ: ಹೋಬಳಿಯ ಕಟ್ಟೇಪುರದ ಎಡದಂಡೆ, ಬಲದಂಡೆ ನಾಲೆ ಕಾಮಗಾರಿ ಬಹುತೇಕ ಕಡೆ ಕಳಪೆಯಿಂದ ಕೂಡಿದೆ. ಅಲ್ಲದೇ, ಈ ಕಾಮಗಾರಿ ಸಾಕಷ್ಟು ವಿಳಂಬವಾಗಿದ್ದು, ಇದನ್ನು ನಿರ್ವಹಿಸುತ್ತಿರುವ ಎಸ್.ಎನ್.ಸಿ. ಪವರ್ ಕಾರ್ಪೊರೇಷನ್ ಕಂಪನಿಯು ಇಲ್ಲಿನ ರೈತರ ಬದುಕನ್ನು ಸರ್ವನಾಶ ಮಾಡಲು ಹೊರಟಂತಿದೆ ಎಂದು ರೈತ ಸಂಘದ ಇಲ್ಲಿನ ಹೋಬಳಿಯ ಅಧ್ಯಕ್ಷ ಕೃಷ್ಣೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಪ: ಕಳೆದ 3 ತಿಂಗಳ ಹಿಂದೆ ಎಸ್.ಎನ್.ಸಿ. ಪವರ್ ಕಾರ್ಪೊರೇಷನ್ ಕಂಪನಿಯವರು ಇಲ್ಲಿನ ಬಲದಂಡೆ ನಾಲಾ ಕಾಮಗಾರಿಗೆ ಬಳಸಿದ ಸಿಮೆಂಟ್ ಲೈನಿಂಗ್ 3 ಕಡೆ ಕುಸಿದು ಹೋಗಿದ್ದು, ಈ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಕಾವೇರಿ ಜಲಾನಯನ ರಾಮನಾಥಪುರದ ಉಪವಿಭಾಗಾಧಿಕಾರಿಗಳು ಕಂಪನಿ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಸದ್ದಿಲ್ಲದೆ ಕಣ್ಮರೆಯಾಗಿದ್ದಾರೆ. ಇತ್ತ ಕಡೆ ಸುಳಿಯುತ್ತಿಲ್ಲ. ಆದರೆ ಕಂಪನಿಯವರು ಮಾತ್ರ ಕುಸಿದಿರುವ ಬಲದಂಡೆ ನಾಲೆಯ ಭಾಗಗಳಲ್ಲಿ ಟಿಪ್ಪರ್‌ನಿಂದ ಮಣ್ಣನ್ನು ತಂದು ಸುರಿದು ತಮ್ಮ ಕಾಮಗಾರಿಯಲ್ಲಾಗಿರುವ ಲೋಪದೋಷಗಳನ್ನು ಮುಚ್ಚುವ ಭರದಲ್ಲಿ ನಾಲೆಗೆ ಇನ್ನಷ್ಟು ಮಣ್ಣುತುಂಬಿ ಹೂಳು ಹೆಚ್ಚುವಂತೆ ಮಾಡಿದ್ದಾರೆ. ಇಂತಹ ಕಂಪನಿಗಳಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ತಾಲ್ಲೂಕಿನಲ್ಲಿ ಯಾರೂ ಕೇಳುವರಿಲ್ಲದಂತಾಗಿದೆ ಎಂದು ಸ್ಥಳೀಯ ಮಲ್ಲಿನಾಥಪುರದ ರೈತ ಚಿಕ್ಕೇಗೌಡರು ಆರೋಪಿಸಿದರು.
ಈಡೇರದ ಉದ್ದೇಶ: ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ರಾಮನಾಥಪುರದ ಹೋಬಳಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಹಿಂದಿನ ಸರ್ಕಾರ, ರೈತರ ಹಿತಾಸಕ್ತಿಯನ್ನು ಕಾಪಾಡುವ ಸದುದ್ದೇಶದಿಂದ ಕಟ್ಟೇಪುರದ ಕಾವೇರಿ ನದಿಯ ನೀರು ಈ ಭಾಗದ ಸಮಸ್ತ ರೈತ ಬಾಂಧವರಿಗೂ ಕೃಷಿ ಚಟುವಟಿಕೆ ಸಮಯದಲ್ಲಿ ಸರಿಯಾದ ರೀತಿ ಪೂರೈಕೆಯಾಗಲೆಂದು ಇಲ್ಲಿನ ಬಲದಂಡೆ, ಎಡದಂಡೆ ನಾಲೆಗಳಲ್ಲಿ ಹೂಳು ತೆಗೆಸಿತ್ತು.
ಇದರೊಂದಿಗೆ ನಾಲೆಯ ಪಾತ್ರ ಕಿರಿದಾಗಿಸಿ, ಇನ್ನಷ್ಟು ಹೆಚ್ಚು ಕಾಲ ಬಂದೋಬಸ್ತ್ ಆಗಿರಲೆಂದು ಉತ್ಕೃಷ್ಟ ಮಟ್ಟದ ಸಿಮೆಂಟ್ ಲೈನಿಂಗ್ ಮಾಡಲೆಂದು ರು. 124 ಕೋಟಿ ಅಂದಾಜು ವೆಚ್ಚದ ಟೆಂಡರ್ ಕರೆದು ಯಾವುದೋ ಶಿಫಾರಸ್ಸಿಗೆ ಅಥವಾ ಒತ್ತಡಕ್ಕೆ ಸೋತು ಈ ಕಂಪನಿಯವರಿಗೆ ಕಾಮಗಾರಿ ನಿರ್ವಹಣೆ ಜವಾಬ್ದಾರಿಯನ್ನು ನೀಡಿತು. ಎಂದು ವಿವರಿಸಿದರು.
ಕಳಪೆ ಕಾಮಗಾರಿ: ಆರಂಭದಿಂದಲೂ ಕಂಪನಿಯವರು ಕಳಪೆ ಕಾಮಗಾರಿ ಎಸಗಿ ನಾನಾ ಕಡೆ ಕುಸಿದು ಹೋಗಿ ಸಾಕಷ್ಟು ಬಾರಿ ಇವರ ವಿರುದ್ಧ ಅನೇಕ ಸಂಘಟನೆಗಳು ಕಳಪೆ ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟಿಸಿದರೂ ಸಹ ಲೆಕ್ಕಿಸದೇ ತಮ್ಮ ಕೈಚಳಕವನ್ನು ಎಂದಿನಂತೆ ಪ್ರದರ್ಶಿಸುತ್ತಾ ಈ ರೀತಿ ನಾಲೆಯ ಸಿಮೆಂಟ್ ಲೈನಿಂಗ್ ಕುಸಿದು ಹೋಗಲು ಕಾರಣರಾಗಿದ್ದಾರೆ ಎಂದು ಕೃಷ್ಣೇಗೌಡ ತಿಳಿಸಿದರು.
ಟೀಕೆ: ಈ ವಿಚಾರ ಎಲ್ಲರ ಗಮನಕ್ಕೆ ಬಂದರೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ? ಎಂದು ಪ್ರಶ್ನಿಸಿದ ಕೃಷ್ಣೇಗೌಡ, ಅದೇ ತಾಲ್ಲೂಕಿಗೆ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಬಂದರೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲದೆ ಅವರನ್ನು ಬೇರೆಡೆಗೆ ವರ್ಗಾಯಿಸುವ ಮೂಲಮಂತ್ರ ತಿಳಿದಿರುವ ಪ್ರಮುಖರಿಗೆ, ರೈತರ ಸಮಾಧಿಯ ಮೇಲೆ ಸೌಧ ಕಟ್ಟಲು ಹೊರಟಿರುವ ಎಸ್.ಎನ್.ಸಿ. ಪವರ್ ಕಾರ್ಪೊರೇಷನ್ ಕಂಪನಿ ಮೇಲೆ ಕ್ರಮ ಕೈಗೊಳ್ಳಬಾರದೇಕೆ ಎಂದು ಟೀಕಿಸಿದರು.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಕೂಡಲೇ ಕಂಪನಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕಾಮಗಾರಿಯನ್ನು ಬೇರೆ ಉತ್ತಮವಾಗಿ ನಿರ್ವಹಿಸುವಂಥ ಕಂಪನಿಗೆ ಗುತ್ತಿಗೆ ನೀಡಲಿ. ಈ ವಿಚಾರ ನಿರ್ಲಕ್ಷಿಸಿದರೆ, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲೆಯ ಹಿರಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

