ಗದ್ದಲದಲ್ಲೇ ನಡೆದ ನಗರಸಭೆ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ, ಹಾಸನ, ಜ. 4
ನಗರಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಇರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸದಸ್ಯರು ಸಭೆ ನಡೆಸಲಿಲ್ಲ. ಬದಲಿಗೆ ಸಂಪೂರ್ಣವಾಗಿ ಗಲಾಟೆ, ಗೊಂದಲ ಹಾಗೂ ಸದಸ್ಯರ ನಡುವೆ ಏಕವಚನದಲ್ಲಿ ವಾಗ್ವಾದ ನಡೆಸಿದರು.
ನಗರಸಭೆ ಅಧ್ಯಕ್ಷೆ ಶೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ಯಶ್ವಂತ್, ಕುಮಾರ್, ರಮೇಶ್ ಬಾಬು, ಸೈಯದ್ ತಲ್ಹಾ ಹಾಗೂ ಇತರರು ಸಭೆ ನಡೆಯುವ 7 ದಿನಗಳ ಮುನ್ನ ಎಲ್ಲಾ ಸದಸ್ಯರಿಗೂ ನೋಟೀಸ್ (ಅಜೆಂಡ ಪ್ರತಿ ಹಾಗೂ ಮಾಹಿತಿ ಪ್ರತಿ) ನೀಡದೆ ತರಾತುರಿಯಲ್ಲಿ ಸಭೆಯನ್ನು ನಡೆಸಲಾಗುತ್ತಿದೆ. ಆದ್ದರಿಂದ, ಸಭೆಯನ್ನು ಮುಂದೂಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಸಭೆಯಲ್ಲಿ 57 ಚರ್ಚೆಯ ವಿಷಯಗಳನ್ನು ಇಡಲಾಗಿದೆ. ಸಭೆ ನಡೆಯುವ 7 ದಿನಗಳ ಮೊದಲೇ ಎಲ್ಲಾ ಸದಸ್ಯರಿಗೆ ನೋಟೀಸ್ ನೀಡಬೇಕಿತ್ತು. ಡಿ. 31ರಂದು ನೋಟೀಸ್ ನೀಡಲಾಗಿದೆ. ಜೆಡಿಎಸ್ ಸದಸ್ಯರಿಗೆಲ್ಲ 7 ದಿನಗಳ ಮೊದಲೇ ನೋಟೀಸ್ ನೀಡಿ ಇತರೆ ಸದಸ್ಯರಿಗೆ ತಡವಾಗಿ ಅಜೆಂಡಾ ಪ್ರತಿ ಹಾಗೂ ಮಾಹಿತಿ ಪತ್ರಗಳನ್ನು ನೀಡಲಾಗಿದೆ. ಇಲ್ಲಿ ಇಟ್ಟಿರುವಂತಹ ವಿಷಯಗಳನ್ನು ಕೂಲಂಕುಶವಾಗಿ ಓದಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸಭೆಯು ನಿಯಮಾನುಸಾರವಾಗಿ ನಡೆಯುತ್ತಿಲ್ಲ. 57 ವಿಷಯಗಳನ್ನು ಅಜೆಂಡಾದಲ್ಲಿ ಮಂಡಿಸಿದ್ದಾರೆ. ಆದ್ದರಿಂದ ನಮಗೆ ಕಾಲವಕಾಶಬೇಕು ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ಅವರು ಈ ವಿಷಯವನ್ನು ಆಯುಕ್ತರಿಗೆ ತಿಳಿಸಿದ್ದಾರೆ. ಆದರೂ ತರಾತುರಿಯಲ್ಲಿ ಸಭೆ ಹಮ್ಮಿಕೊಂಡಿದ್ದಾರೆ ಎಂದು ಆಕ್ರೋಶ ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಸದಸ್ಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಶಾಸಕರು ಸದಸ್ಯರ ಹಕ್ಕುಗಳಿಗೆ ಚ್ಯುತಿ ತರುತ್ತಿದ್ದಾರೆ ಎಂದು ಆರೋಪಿಸಿದರು.
ತೀರ್ಮಾನ ದಾಖಲಿಸಲು ಪಟ್ಟು: ಗೊರೂರು ರಸ್ತೆಯಲ್ಲಿ ರಾಶಿಯಾಗಿರುವ ಕಸದ ರಾಶಿಯನ್ನು ಸ್ವಚ್ಛಗೊಳಿಸುವುದು, ನಗರಸಭೆಯ ನಾಲ್ಕು ಅಂಗಡಿಗಳ ಬಹಿರಂಗ ಹರಾಜು ನಡೆಸುವ ಬಗ್ಗೆ ಅಜೆಂಡಾದಲ್ಲಿ ಸೇರಿಸುವಂತೆ ಅರ್ಜಿ ಸಲ್ಲಿಸಿದ್ದರೂ ಅದನ್ನು ತಿರಸ್ಕರಿಸಲಾಗಿದೆ. ಜೊತೆಗೆ, ನಾವು ಸಭೆಯಲ್ಲಿ ನೀಡಿದ ನಡಾವಳಿಗಳನ್ನು ಸರಿಯಾಗಿ ಪುಸ್ತಕದಲ್ಲಿ ದಾಖಲಿಸುತ್ತಿಲ್ಲ. ಆದ್ದರಿಂದ, ಸಭೆಯಲ್ಲಿ ಆದ ತೀರ್ಮಾನಗಳನ್ನು ಸರಿಯಾಗಿ ದಾಖಲಿಸುವಂತೆ ಪಟ್ಟು ಹಿಡಿದರು.
ಆಗ್ರಹ: ಈವರೆಗೂ ಸಭೆಗಳನ್ನು ಬೆಳಗ್ಗೆ ಆಯೋಜಿಸಲಾಗುತ್ತಿತ್ತು. ಆದರೆ ಈಗ ಸಂಜೆ ಹೊತ್ತಿನಲ್ಲಿ ಸಭೆಯನ್ನು ಕರೆಯಲಾಗಿದೆ. ಇದರ ಉದ್ದೇಶವೇನು ಎಂಬುದು ಬಹಿರಂಗವಾಗಿಬೇಕು. ಈ ಸಮಯದಲ್ಲಿ ಸಭೆ ಆಯೋಜಿಸಿದರೆ ಸದಸ್ಯರು, ಪತ್ರಕರ್ತರಿಗೆ ಬರೋದಿಕ್ಕೆ ಆಗೋದಿಲ್ಲ. ಸಭೆ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಕತ್ತಲಿನಲ್ಲಿ ಸಭೆಯನ್ನು ನಡೆಸುವುದಲ್ಲ. ಆದ್ದರಿಂದ ಸಭೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷರ ಸಮರ್ಥನೆ: ಕಾಂಗ್ರೆಸ್ ಸದಸ್ಯರು ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ರೀವಿದ್ಯಾ, ಸಭೆಯನ್ನು 7 ದಿನಗಳ ಗಳ ಮುಂಚಿತವಾಗಿ ಎಲ್ಲಾ ಸದಸ್ಯರಿಗೆ ತಿಳಿಸಲಾಗಿದೆ. ಡಿ.27ರಂದು ನಾನು ಸಹಿ ಮಾಡಿ ಎಲ್ಲಾ ಸದಸ್ಯರಿಗೂ ಕಳುಹಿಸಿದ್ದೇನೆ. ಸಭೆಯನ್ನು ಸಂಜೆ ಬೇಕಾದರೂ ಕರೆಯಬಹುದಾಗಿದೆ. ಆದ್ದರಿಂದ ಸಭೆ ನಡೆಯಲು ಅನುವು ಮಾಡಿಕೊಂಡಬೇಕು ಎಂದರು.
ಇದೇ ವೇಳೆ, ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಸಭೆಯ ಮಾಹಿತಿಯನ್ನು 7 ದಿನಗಳ ಮುಂಚಿತವಾಗಿ ಎಲ್ಲಾ ಸದಸ್ಯರಿಗೆ ಕಳುಹಿಸಲಾಗಿದೆ. ಆದರೆ ಕೆಲವು ಸದಸ್ಯರನ್ನು ಅದನ್ನು ಸ್ವೀಕರಿಸಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಎಸ್. ಪ್ರಕಾಶ್, ಸಭೆಯನ್ನು ಅನವಶ್ಯಕ ಮುಂದೂಡಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಲಿದೆ. ಹಿಂದಿನ ಸಾಲಿನ ಅನುದಾನಗಳು ಇನ್ನು ಸರಿಯಾಗಿ ಬಳಕೆಯಾಗಿಲ್ಲ. ಕುಡಿಯುವ ನೀರಿನ ಯೋಜನೆ, ಕೆ ಎಸ್ ಆರ್ಪಿ ಟೆಂಡರ್, ಕಸದ ಟೆಂಡರ್ ಸೇರಿದಂತೆ ನಾನಾ ಕಾಮಗಾರಿಗಳ ಬಗ್ಗೆ ತೀರ್ಮಾನಕೈಗೊಳ್ಳಬೇಕಾದೆ. ಸಭೆ ಮುಂದೂಡಿದರೆ ಕಾಮಗಾರಿಗಳಿಗೆ ತೊಡಕುಂಟಾಗಲಿದೆ ಎಂದರು.
ಏಕವಚನದಲ್ಲಿ ವಾಗ್ವಾದ: ಸಭೆಯಲ್ಲಿ ಸದಸ್ಯರ ನಡುವೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಸದಸ್ಯ ಕುಮಾರ್ ಏಕವಚನದಲ್ಲಿ ಮಾತನಾಡುತ್ತಿದ್ದಿಯಾ ಎಂದು ಉಪಾಧ್ಯಕ್ಷ ಇರ್ಷಾದ್ ಪಾಷಾ ವಾಗ್ವಾದ ನಡೆಸಿದರು. ಸಭೆಯಲ್ಲಿ ಗೌರವದಿಂದ ಮಾತನಾಡುವಂತೆ ಮಾತಿನ ಚಕಮಕಿ ನಡೆಸಿದರು.
ಅನುಮೋದನೆ: ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ರು. 432 ಕೋಟಿ ಯೋಜನೆಗೆ ಎಲ್ಲಾ ಸದಸ್ಯರು ಕ್ರಮಕೈಗೊಳ್ಳುವಂತೆ ಸಮ್ಮತಿಯಿಂದ ಒಪ್ಪಿಕೊಂಡರು ಹಾಗೂ ಇತರೆ ಕಾಮಗಾರಿಗಳಿಗೂ ಒಪ್ಪಿಗೆ ಸೂಚಿಸಿದರು.
ಬಕೆಟ್ ನೀಡಿಲ್ಲ: ಕಸದ ಬಕೆಟ್ಗಳನ್ನು ಸರಿಯಾಗಿ ವಾರ್ಡ್ಗಳಲ್ಲಿ ಹಂಚಿಕೆ ಮಾಡಿಲ್ಲ. ಇದರಿಂದ ತೊಂದರೆ ಉಂಟಾಗುತ್ತಿದೆ. ಜೆಡಿಎಸ್ ಸದಸ್ಯರ ವಾರ್ಡ್ಗಳಿಗೆ ಬಕೆಟ್ ಹಂಚಿಕೆ ಮಾಡಿದ್ದಾರೆ ಎಂದು ಸದಸ್ಯ ಸೈಯದ್ ತಲ್ಹಾ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬಕೆಟ್ಗಳು ಜೆಡಿಎಸ್ ಸದಸ್ಯರಿಗೆ ಸರಿಯಾಗಿ ಸಿಕ್ಕಿಲ್ಲ. ಈಗ ಹೊಸ ಟೆಂಡರ್ ಕರೆಯಲಾಗುತ್ತಿದೆ. ಬಂದ ನಂತರ ಎಲ್ಲರಿಗೂ ನೀಡಲಾಗುತ್ತದೆ. ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಕಸದ ಬಕೆಟ್ ಟೆಂಡರ್ ಅನ್ನು ಮತ್ತೆ ಕರೆಯಲಾಗಿದ್ದು, 1 ಬಕೆಟ್ಗೆ 160 ಹಣವನ್ನು ಸರಬರಾಜುದಾರರು ಸೂಚಿಸಿದ್ದಾರೆ. ಆದರೆ, ನಾವು ಹಿಂದಿನ ದರಕ್ಕೆ ನೀಡುವಂತೆ ೆಕೇಳಿಕೊಂಡಿದ್ದೇವೆ. ಈ ಗೊಂದಲ ಪರಿಹಾರ ಮಾಡಿಕೊಂಡು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಹೊಸ ಬಕೆಟ್ಗಳನ್ನು ವಿತರಿಸಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

