ನಾಡಿಗೆ ಏಳ್ಗೆಗೆ ಕಂಕಣ ಬದ್ಧರಾಗಬೇಕು
ಹಾಸನ: ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸಲು ಕಾರಣರಾದವರ ಶ್ರಮ ವರ್ಣಿಸಿದರೂ ಅನುಭವಕ್ಕೆ ಬರುವುದಿಲ್ಲ. ಅದನ್ನು ನೆನಪಿಸಿಕೊಂಡು ನಾಡಿನ ಏಳ್ಗೆಗೆ ಕಂಕಣ ತೊಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ಹೇಳಿದ್ದಾರೆ.
ಅವರು ವಾಸವಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿಶಿಷ್ಟ ಕಾರ್ಯಕ್ರಮದಲ್ಲಿ ವಾಸವಿ ಮಾಹಿತಿ ನುಡಿಮಾಲೆ ಸಿ.ಡಿ. ಬಿಡುಗಡೆ ಮಾಡಿ, ಅವರು ಮಾತನಾಡಿದರು.
ಮಾಹಿತಿ ಕಾರ್ಯ: ನವೆಂಬರ್ನಲ್ಲಿ 21 ದಿನಗಳ ಕಾಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕನ್ನಡ ನುಡಿಯ ಪ್ರಾಚೀನತೆ, ವಾಂಛನ ಸಮಿತಿ, ಗೋಕಾಕ್ ಸಮಿತಿ, ಮಿಶ್ರಾ ಸಮಿತಿ, ನೆಲ- ಜಲ ಕುರಿತ ವಿವಾದಕ್ಕೆ ಸಂಬಂಧಪಟ್ಟ ವಿಚಾರಗಳು, ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡ ಸಂಘ ಸಂಸ್ಥೆಗಳ ವಿಷಯಗಳನ್ನು ದಿನಕ್ಕೊಂದರಂತೆ ಆಯ್ದುಕೊಂಡು ಪ್ರತಿನಿತ್ಯ ಪ್ರಾರ್ಥನಾ ಸಮಯದಲ್ಲಿ ಮಾಹಿತಿ ಒದಗಿಸುವ ಕಾರ್ಯ ಮಾಡಿದ್ದರು.
ಶ್ಲಾಘನೆ: ಇದೆಲ್ಲವನ್ನೂ ಕ್ರೋಢೀಕರಿಸಿ ಪರಿಚಯ ಮಾಡಿದವರ ಧ್ವನಿಯಲ್ಲೇ ಸಿ.ಡಿ.ಯನ್ನೂ ಸಿದ್ಧಪಡಿಸಿದ್ದರು. ಜೊತೆಗೆ ಡಿಸೆಂಬರ್ ತಿಂಗಳಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಇದೇ ವಿಷಯಗಳನ್ನು ಆಧರಿಸಿ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನೂ ನಡೆಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ ಘೋಷಿಸಲಾಗಿತ್ತು.
ಇದೆಲ್ಲವನ್ನೂ ಗಮನಿಸಿದ ಕಸಾಪ ಅಧ್ಯಕ್ಷರು ಸಾಂಕೇತಿಕವಾಗಿ ಒಂದು ದಿನ ಆಚರಣೆಯನ್ನು ಮಾಡುವುದಕ್ಕಿಂತ ಭಿನ್ನವಾಗಿ ಮಕ್ಕಳಲ್ಲಿ ಭಾಷಾಭಿಮಾನ, ನಾಡಪ್ರೇಮವನ್ನು ಊರ್ಜಿತಗೊಳಿಸುವಲ್ಲಿ ಮಾಡಿರುವ ಕಾರ್ಯ ನಿಜವಾಗಿಯೂ ಅರ್ಥಪೂರ್ಣ ಎಂದು ಶ್ಲಾಘಿಸಿದರು.
ದೂರದೃಷ್ಟಿಯ ಫಲ: 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಆರಂಭವಾದ ಕರ್ನಾಟಕ ಸಾಹಿತ್ಯ ಪರಿಷತ್ತು ಸಾಹಿತ್ಯ, ಸಂಸ್ಕೃತಿಯ ಪೋಷಣೆಯ ಜತೆಗೆ ಚಳವಳಿಗಳಿಗೂ ಒತ್ತಾಸೆಯಾಗಿ ನಿಂತಿತ್ತು ಎಂಬುದನ್ನು ಸ್ಮರಿಸಿಕೊಂಡರು.
ಕೃತಜ್ಞರಾಗಿರಬೇಕು: ಆಂಧ್ರದ ಪೆಟ್ಟಿ ಶ್ರೀರಾಮುಲುವಿನ ರೀತಿಯಲ್ಲೇ ಹುಬ್ಬಳ್ಳಿಯ ಶಂಕರಗೌಡ ಪಾಟೀಲ ಮೊದಲಾದವರ ಆಮರಣಾಂತ ಉಪವಾಸ ಸತ್ಯಾಗ್ರಹಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ನಾವು ಅವರಿಗೆ ನಿತ್ಯ ಕೃತಜ್ಞರಾಗಿರಬೇಕು ಎಂದು ಅವರು ತಿಳಿಸಿದರು. ಪುರಸ್ಕಾರ ರೂಪದಲ್ಲಿ ದೊರೆತಿರುವ ನಗದನ್ನು ಕನ್ನಡ ಪುಸ್ತಕ ಖರೀದಿಗೆ ಬಳಸಿ ಎಂದು ಕಿವಿಮಾತು ಹೇಳಿದರು.
ಅಭಿನಂದನೆ: ಹಿರಿಯ ಶಿಕ್ಷಕಿ ಮೀನಾಕ್ಷಿ ಅವರನ್ನು ಕನ್ನಡ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಆಶೀಶ್. ಆರ್. ಮಲ್ಯ, ಹೆಚ್.ಎನ್. ಲಿಖಿತ್, ಆಕಾಂಕ್ಷಾ ಭಟ್ ಮತ್ತು ಶಿಕ್ಷಕರಾದ ಸರಳಾ. ಎಸ್. ಉಡುಪಿ, ಆರ್. ಜ್ಯೋತಿ, ಹೆಚ್.ಎಸ್. ಮನೋಹರ್ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಎಲ್ಲ ಶಿಕ್ಷಕರಿಗೂ ಪ್ರಶಂಸಾಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.
ಬೆಂಬಲ: ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ರಾಜಗೋಪಾಲಶ್ರೇಷ್ಠಿ ಮಾತನಾಡಿ, ಸಂಘಟಿತ ಹೋರಾಟಕ್ಕೆ ಎಂದಿಗೂ ಫಲ ದೊರಕುತ್ತದೆ. ಇಂತಹ ಸತ್ವಯುತ ಹೋರಾಟದ ವಿಚಾರಗಳನ್ನು ವಿಷದವಾಗಿ ತಿಳಿಯಲು ಮಾಡಿರುವ ಪ್ರಯತ್ನವನ್ನು ಪ್ರಶಂಸಿಸಿ, ಒಳ್ಳೆಯ ಕೆಲಸಗಳಿಗೆ ವಿದ್ಯಾಸಂಸ್ಥೆ ಪೂರಕ ಬೆಂಬಲ ನೀಡುತ್ತದೆ ಎಂದರು.
ಎಚ್.ಎಸ್. ವೆಂಕಟೇಶಮೂರ್ತಿ ಅವರ ಭಾವಪೂರಿತ ನುಡಿಬಂಧುಗಳು ಕೂಡಿ ಜಯಘೋಷವನ್ನು ಹಾಡಿ ಎಂಬ ಕೃತಿಯನ್ನು ಮಕ್ಕಳು ಪ್ರಾರ್ಥನಾ ರೂಪದಲ್ಲಿ ಹಾಡಿದರು. ಶಶಿಕಲಾ ಸ್ವಾಗತಿಸಿದರು. ಮನೋಹರ್ ವಂದಿಸಿದರು. ಅರ್ಚನಾ ಭಟ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

