ಮತಾಂತರ ವಿರುದ್ಧ ಹಿಂಜಾವೇ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಜ 5
ವಿದೇಶಿ ಕ್ರೈಸ್ತ ಮತಪ್ರಚಾರಕ ಬೆನೆಡಿಕ್ಟ್ ಬಿನ್ನಿ ಹಿನ್ ಭಾರತಕ್ಕೆ ಬರುತ್ತಿರುವ ಹಾಗೂ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಮತಾಂತರವನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಗರದ ಸ್ಲೇಟರ್ಸ್ ಹಾಲ್ ವೃತ್ತದ ಬಳಿ ಪ್ರತಿಕೃತಿ ದಹಿಸಿ ಭಾನುವಾರ ಪ್ರತಿಭಟನೆ ನಡೆಸಿದರು.
ಆರೋಪ: ಕರ್ನಾಟಕದಲ್ಲಿಯೇ ಅತಿ ಹೆಚ್ಚು ಮತಾಂತರಗೊಳ್ಳುತ್ತಿರುವ ಜಿಲ್ಲೆ ಎಂಬುದು ಬಹಿರಂಗವಾಗಿದೆ. ಇದೊಂದು ಆತಂಕಕಾರಿ ಘಟನೆಯಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ವಿದೇಶಿ ಕ್ರೈಸ್ತ ಮತಪ್ರಚಾರಕ ಬೆನ್ನಿ ಹಿನ್ ಭಾರತಕ್ಕೆ ಬಂದು ಹೋಗುವುದೇ ಸಾಕ್ಷಿಯಾಗಿದೆ. ಈ ಹಿಂದೆ 2005ರಲ್ಲಿ ಬೆಂಗಳೂರಿಗೆ ಬಂದ ವೇಳೆ ಅಂದಿನ ಕಾಂಗ್ರೆಸ್ ಸರ್ಕಾರ ರತ್ನಗಂಬಳಿ ಹಾಕಿ ಮತಾಂತರಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಆರೋಪಿಸಿದರು.
ಕರ್ನಾಟಕವೇ ಗುರಿ: ಕರ್ನಾಟಕವನ್ನೇ ಗುರಿಯಾಗಿಟ್ಟುಕೊಂಡು ಇದೇ ಜ. 15ರಿಂದ 19ರವರೆಗೂ ಬೆಂಗಳೂರಿನ ಯಲಹಂಕದ ಸೂಪರ್ ನೋವಾ ಎರೆನಾ ಸಭಾಂಗಣದಲ್ಲಿ ಪ್ರೇಯರ್ ಕಾನ್ಫರೆನ್ಸ್ ಹೆಸರಿನಲ್ಲಿ ಕಡುಬಡವ, ಅನಕ್ಷರಸ್ಥ ಮುಗ್ಧ ಹಿಂದೂಗಳನ್ನು ಆಸೆ ಆಮಿಷ ಒತ್ತಡಗಳನ್ನು ಒಡ್ಡಿ ಹೀಲಿಂಗ್ ಹೆಸರಿನಲ್ಲಿ ಜಾದು ಮಾಡುವುದರೊಂದಿಗೆ ಮತಾಂತರ ಮಾಡುವುದಾಗಿ ಆರೋಪಿಸಿದ ಅವರು, ಇದೇ ರೀತಿ ಅಮೇರಿಕದಲ್ಲೂ ಕೂಡ ಹಣಗಳಿಕೆಗಾಗಿ ಹೀಲಿಂಗ್ ನಾಟಕವಾಡಿರುವ ಇವರು ಅಲ್ಲಿನ ಸರ್ಕಾರವು ದೇಶದಿಂದಲೇ ಉಚ್ಛಾಟನೆ ಮಾಡಲಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರವು, ಪ್ರವಾಸಿ ವೀಸಾದಲ್ಲಿ ಬರಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರೈಸ್ತೀಕರಣಕ್ಕೆ ಪಿತೂರಿ: ಹಿಂದೂ ಆಚಾರ ವಿಚಾರಗಳನ್ನು ಮೂಢ ನಂಬಿಕೆಯೆಂದು ವಿರೋಧಿಸುವ ಸ್ವಘೋಷಿತ ಪ್ರಗತಿಪರರು, ಸೋಗಲಾಡಿ ಸೆಕ್ಯುಲರ್ ವಾದಿಗಳು, ಬೂಟಾಟಿಕೆ ಬುದ್ಧಿಜೀವಿಗಳು ಈತನ ವಿರುದ್ಧ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಭಾರತದ ಕ್ರೈಸ್ತೀಕರಣಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪಿತೂರಿ ಮಾಡಲಾಗಿದೆ. ವಿದೇಶಿ ಶಕ್ತಿಗಳ ನೇರ ಪ್ರಭಾವದಿಂದ ಬೆನ್ನಿ ಹಿನ್ ಸಭೆ ಆಯೋಜಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.
ಈ ಕೂಡಲೇ ನಯವಂಚಕ ಬೆನ್ನಿ ಹಿನ್ ಅವರನ್ನು ಬಂಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಸರ್ಕಾರವನ್ನು ಆಗ್ರಹಿಸಿತು. ಪ್ರತಿಭಟನೆಯ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಎಂ.ಬಿ. ಉಮೇಶ್, ಚನ್ನಕೇಶವ್, ನಾಗೇಶ್, ವಿಜಯ್ ಕುಮಾರ್, ಯಶ್ವಂತ್, ಅವಿನಾಶ್, ಪ್ರವೀತ್, ಸಂತೋಷ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

