ಸೌಲಭ್ಯ ವಂಚಿತ ದಲಿತರ ಕಾಲೋನಿ
ಕನ್ನಡಪ್ರಭ ವಾರ್ತೆ, ಬೇಲೂರು, ಡಿ.5
ತಾಲೂಕಿನ ಇಬ್ಬಿಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಟ್ಟೆಕೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದ್ದು, ಈ ಬಗ್ಗೆ ಯಾವ ಪಂಚಾಯಿತಿ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗ್ರಾಮದ ಸಮಸ್ಯೆ ಬಗ್ಗೆ ಗಮನ ನೀಡಿಲ್ಲ.
ಇಂದಿಗೂ ಯಕ್ಷಪ್ರಶ್ನೆ: ಸರ್ಕಾರ, ದೀನ ದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಸ್ವಾತಂತ್ರ್ಯ ನಂತರದಿಂದಲೂ ರೂಪಿಸುತ್ತಲೇ ಇದೆ. 40 ವರ್ಷದಿಂದ ಪಂಚವಾರ್ಷಿಕ ಯೋಜನೆಗಳನ್ನು ಸರ್ಕಾರ ಹಾಕಿಕೊಂಡು ಬರುತ್ತಿದೆ. ಆದರೆ ಅವು ಎಷ್ಟರ ಮಟ್ಟಿಗೆ ಫಲಪ್ರದವಾಗಿವೆ ಎಂದು ಪ್ರಶ್ನಿಸಿಕೊಂಡರೇ ಉತ್ತರ ಶೂನ್ಯ. ಎಷ್ಟು ಮಂದಿ ದೀನದಲಿತರು ಉದ್ಧಾರವಾಗಿದ್ದಾರೆ ಎಂಬುದು ಮಾತ್ರ ಇಂದಿಗೂ ಯಕ್ಷಪ್ರಶ್ನೆಯಾಗಿದೆ.
ರೋಗ ರುಜಿನಕ್ಕೆ ದಾರಿ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವ್ದಾರಿ ವರ್ತನೆಯಿಂದ ಮೂಲ ಸೌಲಭ್ಯವಿಲ್ಲದೇ ದಲಿತ ಕಾಲೋನಿಯೊಂದು ಅಭಿವೃದ್ಧಿಯಲ್ಲಿ ಕುಂಠಿತಗೊಂಡು ದಲಿತರು ಸರ್ಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ಗ್ರಾಮದಲ್ಲಿ ಸುಮಾರು 140 ಮನೆಗಳಿದ್ದು 600 ಜನ ಸಂಖ್ಯೆ ಹೊಂದಿದ್ದು, ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆಯಲ್ಲದೆ ದೂರದಿಂದ ಕಲುಷಿತ ನೀರು ತಂದು ಕುಡಿಯುವಂತಾಗಿದೆ.
ಗ್ರಾಮದಲ್ಲಿ 9 ಮಿನಿ ನೀರಿನ ಟ್ಯಾಂಕ್ಗಳು ನೆಪ ಮಾತ್ರಕ್ಕಿದ್ದು, ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ . ನೀರು ಬಿಡುವ ವಾಟರ್ ಮ್ಯಾನ್ ಸರಿಯಾದ ರೀತಿ ನೀರು ಬಿಡದೇ, ಅಕ್ರಮವಾಗಿ ಕೆಲ ರೈತರ ಜಮೀನಿಗೆ ನೀರು ಹರಿಸುವ ವ್ಯವಸ್ಥೆ ಮಾಡಿದಾನೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಿದ್ದು ಚರಂಡಿ ನಿರ್ಮಿಸದೆ ಅವೈಜ್ಞಾನಿಕವಾಗಿ ರಸ್ತೆ ಮಾಡಿರುವುದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು ರೋಗ ರುಜಿನಕ್ಕೆ ದಾರಿ ಮಾಡಿದಂತಾಗಿದೆ.
ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಿಸ್ಟನ್ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕಳಪೆ ಕಾಮಗಾರಿ ಮಾಡಿ ಸಿಸ್ಟನ್ ಬೀಳುವ ಸ್ಥಿತಿಯಲ್ಲಿದ್ದು ಉದ್ಘಾಟನಾ ಭಾಗ್ಯ ಕಾಣುವ ಮೊದಲೇ ತಳ ಭಾಗದಲ್ಲಿ ಸೋರುತ್ತಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಗ್ರಾಮದ ಪ್ರಸಾದ್, ಸೋಮಣ್ಣ, ಕೃಷ್ಣಮೂರ್ತಿ, ಮೊಗಪ್ಪ, ಮಂಜುನಾಥ್, ಸುರೇಶ್ ದೂರಿದರು.
ಆಕ್ರೋಶ: ತಾಲೂಕು ಪಂಚಾಯಿತಿ ಅನುದಾನದಲ್ಲಿ ಶಾಲೆ ಅಭಿವೃದ್ಧಿಗೆ ರು. 50 ಸಾವಿರ ಮೀಸಲಿಟ್ಟಿದ್ದು, ಶಾಲೆಯ ರಿಪೇರಿ ಸುಣ್ಣ- ಬಣ್ಣ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಗುತ್ತಿಗೆದಾರ ಕಳಪೆ ಗುಣಮಟ್ಟದಲ್ಲಿ ಕೆಲಸ ನಿವಹಿಸಿದ್ದು, ಈ ಕಾಮಗಾರಿಯನ್ನು ಇದುವರೆವಿಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ದಯಾನಂದ ಸ್ಥಳ ಪರೀಶಿಲನೆ ಮಾಡದೆ, ಕಳಪೆ ಕಾಮಗಾರಿ ನಡೆಸಲು ಶಾಮೀಲಾಗಿ ಇತ್ತ ತಿರುಗಿ ನೋಡಿಲ್ಲ. ಶಾಲಾ ಮುಂಭಾಗ ನೇತು ಹಾಕಿರುವ ಹಳೆಯ ತುಕ್ಕಾಗಿರುವ ನಾಮಫಲಕವನ್ನು ಹಾಗೇ ಬಿಟ್ಟಿರುವುದು ನಿರ್ಲಕ್ಷ್ಯತನಕ್ಕೆ ಸಾಕ್ಷಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಜನಪ್ರತಿನಿಧಿಗಳು ದಲಿತ ಕಾಲೋನಿಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೆ ನೀಡುತ್ತಿದ್ದು, ನಿಜವಾಗಿ ಎಷ್ಟು ದಲಿತರು ಅಭಿವೃದ್ಧಿಯಾಗಿದ್ದಾರೆ ಎಂದು ಕಾಲೋನಿಗಳಿಗೆ ಭೇಟಿ ನೀಡಿ ನಂತರ ಹೇಳಿಕೆಯನ್ನು ನೀಡಬೇಕು. ಬಹುತೇಕ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಹಿಂಬಾಲಕರೇ ಮಾಡುತ್ತಿದ್ದು, ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅನ್ಯಾಯ ಮುಂದುವರೆದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಗ್ರಾಮದ ಯುವಕರು ಎಚ್ಚರಿಕೆ ನೀಡುತ್ತಾರೆ.
ಎ. ರಾಘವೇಂದ್ರ ಹೊಳ್ಳ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

